ಕೋಲಾರ, ೮೦ ವರ್ಷ ಮೇಲ್ಪಟ್ಟ ಹಾಗೂ ಮತಗಟ್ಟೆಗೆ ಬರಲಾಗದ ವಿಶೇಷಚೇತನರಿಗೆ ಮನೆಮನೆಗೆ ಮತಗಟ್ಟೆಯನ್ನು ಕೊಂಡೊಯ್ದು ಮತ ಚಲಾಯಿಸಲು ಅವಕಾಶ ಮಾಡಿಕೊಡುವ ವಿಶೇಷ ಸೌಲಭ್ಯವನ್ನು ಭಾರತ ಚುನಾವಣಾ ಆಯೋಗವು ಪ್ರಸ್ತುತ ಚುನಾವಣೆಯಿಂದ ಪರಿಚಯಿಸಿದೆ. ಈಗಾಗಲೇ ೧೨ಡಿ ಅಡಿ ಅರ್ಜಿ ನೀಡಿರುವ ೮೦ ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನ ಮತದಾರರಿಗೆ ಮೇ ೦೨ ಹಾಗೂ ೩ ರಂದು ಮನೆ ಮನೆಗೆ ತೆರಳಿ ಮತಪತ್ರ ನೀಡಿ ಮತದಾನ ಮಾಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಈಗಾಗಲೇ ೧೨ ಡಿ ಅಡಿ ಅರ್ಜಿ ಸಲ್ಲಿರುವವರ ಮನೆ ಮನೆಗೆ ತೆರಳಿ ಮತದಾನ ಅಧಿಕಾರಿಗಳು ಮತಪತ್ರ ಮೂಲಕ ಮತದಾನ ಮಾಡಿಸುವರು. ಈ ಸಂದರ್ಭದಲ್ಲಿ ಮತ ಯಾರಿಗೆ ಚಲಾಯಿಸುತ್ತಾರೆ ಎಂಬುದನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರಕ್ರಿಯೆಗಳನ್ನು ವಿಡಿಯೋ ಮಾಡಲಾಗುವುದು. ಮತದಾನ ಮಾಡಿಸಲು ಚುನಾವಣಾಧಿಕಾರಿಗಳು ರೂಟ್ ಮ್ಯಾಪ್ ಹಾಗೂ ನಿಗಿದಿತ ಸಮಯ ಹಾಗೂ ದಿನಾಂಕವನ್ನು ನೀಡುವರು. ಅ ಸಮಯದಲ್ಲಿ ನಿರ್ದಿಷ್ಟ ವಿಳಾಸಗಳಿಗೆ ತೆರಳಿ ಮತದಾನವನ್ನು ಮತಪತ್ರಗಳಲ್ಲಿ ಪಡೆಯಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸೆಕ್ಟರ್ ಅಧಿಕಾರಿಗಳು ಮತದಾನ ಪ್ರಕ್ರಿಯಲ್ಲಿ ತೊಡಗಿರುವ ಅಧಿಕಾರಿಗಳಿಗೆ ರೂಟ್ ಮ್ಯಾಪ್ ಪ್ರಕಾರ ಮಾಹಿತಿಯನ್ನು ನೀಡುತ್ತಾರೆ. ತಂಡದಲ್ಲಿ ೨ ಪೋಲಿಂಗ್ ಅಧಿಕಾರಿಗಳು, ೧ಪೊಲೀಸ್ ಸಿಬ್ಬಂದಿ, ೧ವಿಡಿಯೋಗ್ರಾಫರ್ ಹಾಗೂ ಸಂಬoಧಿತ ಬೂತ್ ಲೆವೆಲ್ ಆಫೀಸರ್ ಸಿಬ್ಬಂದಿ ಇರುತ್ತಾರೆ.
ಪೋಸ್ಟಲ್ ಬ್ಯಾಲೆಟ್ ಮತದಾನ ಸಂದರ್ಭದಲ್ಲಿ ಅಭ್ಯರ್ಥಿಗಳು ತಮ್ಮ ಏಜೆಂಟ್ಗಳನ್ನು ನೇಮಿಸಿಕೊಳ್ಳಲು ಅವಕಾಶವಿರುತ್ತದೆ. ಈ ಸಂಬoಧ ತಮ್ಮ ಏಜೆಂಗಳ ವಿವರವನ್ನು ಆಯಾ ಮತಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಮೊದಲೇ ನೀಡಿರಬೇಕು. ಚುನಾವಣಾಧಿಕಾರಿಗಳಿಂದ ದೃಢೀಕರಿಸಲ್ಪಟ್ಟ ಏಜೆಂಟರು ಮಾತ್ರ ಬ್ಯಾಲೆಟ್ ಮತದಾನ ಪಡೆಯುವ ಸಂದರ್ಭದಲ್ಲಿ ಉಪಸ್ಥಿತರಿರಲು ಅವಕಾಶವಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಬ್ಯಾಲೆಟ್ ಮತದಾನದ ವೇಳೆ ಯಾವುದೇ ವ್ಯಕ್ತಿ ಪ್ರಭಾವ ಬೀರಲು ಅವಕಾಶ ಇರಬಾರದು. ಮತದಾನ ಮಾಡುವ ವ್ಯಕ್ತಿ ಅಂಧರಾಗಿದ್ದರೆ ಅಥವಾ ಹಾಸಿಗೆಯ ಮೇಲಿದ್ದು ಅಶಕ್ತರಾಗಿದ್ದರೆ, ಅಂತವರು ೧೮ ವರ್ಷ ತುಂಬಿದ ಒಬ್ಬರನ್ನು ವೋಟಿಂಗ್ ಅಸಿಸ್ಟೆಂಟ್ ಅಂತಾ ನೇಮಿಸಿಕೊಳ್ಳಲು ಅವಕಾಶವಿದೆ. ಒಬ್ಬ ವೋಟಿಂಗ್ ಅಸಿಸ್ಟೆಂಟ್ ಒಬ್ಬ ಮತದಾರರಿಗೆ ಮಾತ್ರ ಸಹಾಯಕರಾಗಿ ನೇಮಕವಾಗಬಹುದು.
ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರು ಯಾವುದೇ ಲೋಪವಾಗದಂತೆ ಭಾರತ ಚುನಾವಣಾ ಆಯೋಗದ ನಿಯಮಾವಳಿಯಂತೆ ಕರ್ತವ್ಯ ನಿರ್ವಹಿಸಬೇಕು. ಸಿಬ್ಬಂದಿಗಳು ಯಾವುದೇ ಅನುಮಾನಗಳಿದ್ದರೆ ಸಂಬoಧಿಸಿದ ಚುನಾವಣಾಧಿಕಾರಿಗಳನ್ನು ಕೇಳಿ ಬಗೆಹರಿಸಿಕೊಳ್ಳಬೇಕು. ಗಡಿಬಿಡಿ ಮಾಡಬಾರದು. ವಿಷಯವನ್ನು ಪೂರ್ಣವಾಗಿ ಅರ್ಥಮಾಡಿಕೊಂಡು ಕಾರ್ಯನಿರ್ವಹಿಸಬೇಕೆಂದು ಅವರು ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದ್ದಾರೆ.
೧೪೪-ಶ್ರೀನಿವಾಸಪುರ ವಿಧಾನಸಭಾ ಮತಕ್ಷೇತ್ರದ ವ್ಯಾಪಿಯಲ್ಲಿ ಬರುವ ೮೦ ವರ್ಷ ಮೇಲ್ಪಟ್ಟ ೨೫೬ ಮತ್ತು ೩೬ ವಿಶೇಷಚೇತನರು ಸೇರಿ ಒಟ್ಟು ೨೯೨ ಮತದಾರರು, ೧೪೫- ಮುಳಬಾಗಿಲು ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ೮೦ ವರ್ಷ ಮೇಲ್ಪಟ್ಟ ೮೨ ಮತ್ತು ೨೧ ವಿಶೇಷಚೇತನರು ಸೇರಿ ಒಟ್ಟು ೧೦೩ ಮತದಾರರು, ೧೪೬ –ಕೆಜಿಎಫ್ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ೮೦ ವರ್ಷ ಮೇಲ್ಪಟ್ಟ ೧೨೬ ಮತ್ತು ೩೭ ವಿಶೇಷಚೇತನರು ಸೇರಿ ಒಟ್ಟು ೧೬೩ ಮತದಾರರು, ೧೪೭ – ಬಂಗಾರಪೇಟೆ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ೮೦ ವರ್ಷ ಮೇಲ್ಪಟ್ಟ ೭೩ ಮತ್ತು ೪ ವಿಶೇಷಚೇತನರು ಸೇರಿ ಒಟ್ಟು ೭೭ ಮತದಾರರು, ೧೪೮ –ಕೋಲಾರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ೮೦ ವರ್ಷ ಮೇಲ್ಪಟ್ಟ ೧೦೯ ಮತ್ತು ೨೩ ವಿಶೇಷಚೇತನರು ಸೇರಿ ಒಟ್ಟು ೧೩೨ ಮತದಾರರು, ಹಾಗೂ ೧೪೯- ಮಾಲೂರು ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ೮೦ ವರ್ಷ ಮೇಲ್ಪಟ್ಟ ೧೮೧ ಮತ್ತು ೭೦ ವಿಶೇಷಚೇತನರು ಸೇರಿ ಒಟ್ಟು ೨೫೧ ಮತದಾರರು ಇದ್ದಾರೆ.
ಕೋಲಾರ ಜಿಲ್ಲೆಯ ೦೬ ವಿಧಾನಸಭಾ ಮತಕ್ಷೇತ್ರಗಳಲ್ಲಿ ೮೦ ವರ್ಷ ಮೇಲ್ಪಟ್ಟ ೮೨೭ ಮತದಾರರು ಮತ್ತು ೧೯೧ ವಿಶೇಷಚೇತನ ಮತದಾರರು ಸೇರಿ ಒಟ್ಟು ೧೦೧೮ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಈ ಎರಡು ದಿನಗಳಂದು ಈಗಾಗಲೇ ನಮೂನೆ ೧೨ಡಿ ಮೂಲಕ ಅರ್ಜಿ ಸಲ್ಲಿಸಿರುವ ಮತದಾರರು ತಮ್ಮ ವಾಸಸ್ಥಳದಲ್ಲಿ ಹಾಜರಿದ್ದು, ತಮ್ಮ ಮನೆಗೆ ಬರುವ ಮತಗಟ್ಟೆ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ಮತ್ತು ಇದರ ಹೊರತಾಗಿ ನಮೂನೆ ೧೨ ಡಿ ನಲ್ಲಿ ಮನವಿ ಸಲ್ಲಿಸದೇ ಇರುವ ಜಿಲ್ಲೆಯಲ್ಲಿರುವ ೮೦ ವರ್ಷ ಮೇಲ್ಪಟ್ಟ ಹಿರಿಯ ಮತದಾರರು ಮತ್ತು ವಿಶೇಷಚೇತನ ಮತದಾರರು ಮತದಾನದ ದಿನವಾದ ಮೇ ೧೦ ರಂದು ನೇರವಾಗಿ ತಮ್ಮ ಮತಗಟ್ಟೆಗಳಿಗೆ ಬಂದು ಮತದಾನ ಮಾಡಲಿದ್ದಾರೆ.
ಜೊತೆಗೆ ಅತ್ಯಗತ್ಯ ಸೇವೆಗಳಲ್ಲಿ ತೊಡಗಿಕೊಂಡಿರುವವರಲ್ಲಿ ಶ್ರೀನಿವಾಸಪುರ ವಿಧಾನಸಭಾ ಮತಕ್ಷೇತ್ರದಿಂದ ೧೭೬, ಮುಳಬಾಗಲು ವಿಧಾನಸಭಾ ಮತಕ್ಷೇತ್ರದಿಂದ ೮೪, ಕೆ ಜಿ ಎಫ್ ವಿಧಾನಸಭಾ ಮತಕ್ಷೇತ್ರದಿಂದ ೬೪, ಬಂಗಾರಪೇಟೆ ವಿಧಾನಸಭಾ ಮತಕ್ಷೇತ್ರದಿಂದ ೧೦೮, ಕೋಲಾರ ವಿಧಾನಸಭಾ ಮತಕ್ಷೇತ್ರದಿಂದ ೧೫೦ ಹಾಗೂ ಮಾಲೂರು ವಿಧಾನಸಭಾ ಮತಕ್ಷೇತ್ರದಿಂದ ೭೭ ಜನ ಪಿ ವಿ ಸಿ (ಪೋಸ್ಟಲ್ ವೋಟಿಂಗ್ ಸೆಂಟರ್‌ನಲ್ಲಿ ) ಮತ ಚಲಾಯಿಸಲು ನಮೂನೆ ೧೨ ಡಿ ನೀಡುವ ಮೂಲಕ ನೋಂದಣಿ ಮಾಡಿಕೊಂಡಿದ್ದು, ಒಟ್ಟು ೬೫೯ ಮತದಾರರಿಗೆ ಮೇ ೨ ರಿಂದ ೪ ರವರೆಗೆ ೩ ದಿನಗಳ ಕಾಲ ಆಯಾ ಮತಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಮತಗಟ್ಟೆ ತೆರೆಯಲಾಗುತ್ತದೆ. ಅಂಥವರು ಸಂಬoಧಿಸಿದ ಮತಗಟ್ಟೆಗಳಲ್ಲಿ ಮತದಾನ ಮಾಡಬಹುದಾಗಿದೆ. ಸದರಿ ಮತಗಟ್ಟೆಯು ಬೆಳಿಗ್ಗೆ ೯.೦೦ರಿಂದ ಸಂಜೆ ೫.೦೦ರ ವರೆಗೆ ಸತತವಾಗಿ ಮೂರು ದಿನಗಳ ಕಾಲ ತೆರೆದಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.