ಕೋಲಾರ:- ಪ್ರಧಾನಿ ನರೇಂದ್ರಮೋದಿಯವರ ಆಗಮನಕ್ಕಾಗಿ ಸುಮಾರು ೧೫೦ ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ಸಿದ್ದವಾಗಿದ್ದು, ಕೋಲಾರ,ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹಾಗೂ ದೇವನಹಳ್ಳಿ ವಿಧಾನಸಭಾ ಕ್ಷೇತ್ರಗಳ ೨ ಲಕ್ಷಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಭದ್ರತೆ ದೃಷ್ಟಿಯಿಂದ ಎಸ್ಪಿಜಿ ಕಮಾಂಡೋಗಳು ನಿಗಾ ವಹಿಸಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
ಕಾರ್ಯಕ್ರಮದ ಮುನ್ನಾದಿನವಾದ ಶನಿವಾರ ತಾಲ್ಲೂಕಿನ ರಾಷ್ಟಿಯ ಹೆದ್ದಾರಿ ಕೆಂದಟ್ಟಿ ಸಮೀಪ ಏ.೩೦ರ ಪ್ರಧಾನಿಯವರ ರ್ಯಾಲಿಯ ಪೂರ್ವಸಿದ್ದತೆಗಳನ್ನು ಪರಿಶೀಲಿಸಿ ಅಂತಿಮ ಹಂತದ ಸಿದ್ದತೆಗಳ ನೇತೃತ್ವ ವಹಿಸಿದ್ದ ಅವರು, ಕಾರ್ಯಕ್ರಮದ ವೇದಿಕೆ, ಆಸನಗಳ ವ್ಯವಸ್ಥೆ, ೩ ಹೆಲಿಪ್ಯಾಡ್ ಸಿದ್ದಗೊಂಡಿದ್ದು, ಈಗಾಗಲೇ ಹೆಲಿಕಾಪ್ಟರ್ಗಳು ಆಗಮಿಸಿ ಟ್ರಯಲ್ ನಡೆಸಿವೆ ಜತೆಗೆ ಇಂದು ಪ್ರಧಾನಿಯವರು ಹೆಲಿಪ್ಯಾಡ್ನಿಂದ ಬರುವ ವಾಹನಗಳು ಸಹಾ ಪೂರ್ವ ತಯಾರಿ ಸಂಚಾರ ನಡೆಸಿವೆ ಎಂದು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪ್ರಧಾನಿಗಳ ಅಕ್ಕಪಕ್ಕದಲ್ಲಿ ಒಂದು ಕಡೆ ಸಂಸದ ಮುನಿಸ್ವಾಮಿ ಮತ್ತೊಂದು ಕಡೆ ಸದಾನಂದಗೌಡರಿಗೆ ಆಸನ ವ್ಯವಸ್ಥೆ ಮಾಡಿದ್ದು, ಗೌಡರ ಪಕ್ಕದಲ್ಲಿ ವಿಧಾನಪರಿಷತ್ ಸರ್ಕಾರದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಅವರಿಗೆ ಆಸನ ಕಲ್ಪಿಸಲಾಗಿದ್ದು, ಇಡೀ ವೇದಿಕೆ, ಕಾಯಕ್ರಮ ಸ್ಥಳವನ್ನು ಎಸ್ಪಿಜಿ ಕಮಾಂಡೋಗಳು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ.
೧೩ ಅಭ್ಯರ್ಥಿಗಳು ಸಭೆಯಲ್ಲಿ ಹಾಜರಿ
ಕಾರ್ಯಕ್ರಮದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲಾ ೧೧ ಬಿಜೆಪಿ ಅಭ್ಯರ್ಥಿಗಳು, ದೇವನಹಳ್ಳಿ,ಹೊಸಕೋಟೆ ಕ್ಷೇತ್ರಗಳ ಅಭ್ಯರ್ಥಿಗಳು ಸೇರಿದಂತೆ ಒಟ್ಟು ೧೩ ಮಂದಿಯೂ ಹಾಜರಿರಲಿದ್ದಾರೆ ಎಂದು ತಿಳಿಸಿ, ಕೋಲಾರ ಜಿಲ್ಲೆಯ ಅಭ್ಯರ್ಥಿಗಳಾದ ವರ್ತೂರು ಪ್ರಕಾಶ್, ಅಶ್ವಿನಿ ಸಂಪoಗಿ, ಎಂ.ನಾರಾಯಣಸ್ವಾಮಿ, ಸೀಗೆಹಳ್ಳಿ ಸುಂದರ್, ಶ್ರೀನಿವಾಸರೆಡ್ಡಿ, ಮಂಜುನಾಥಗೌಡ ಅವರು ವೇದಿಕೆಯಲ್ಲಿ ಹಾಜರಿರಲಿದ್ದಾರೆ ಎಂದರು.
ಶ್ವಾನದಳ,ತಜ್ಞರಿoದ ಪರಿಶೀಲನಾ ಕಾರ್ಯ
ವೇದಿಕೆ ಮತ್ತು ಆಸು ಪಾಸಿನಲ್ಲಿ ಅನುಮಾನಸ್ಪದ ವ್ಯಕ್ತಿಗಳಿಗೆ ಅವಕಾಶವಿಲ್ಲದಂತೆ ಎಸ್ಪಿಜಿ ಕಮಾಂಡೋಗಳು ಭದ್ರತೆಯ ಉಸ್ತುವಾರಿ ವಹಿಸಿಕೊಂಡಿದ್ದು, ಶ್ವಾನದಳ, ಬಾಂಬ್ ಪತ್ತೆ ತಜ್ಞರ ತಂಡ ವೇದಿಕೆ, ಸುತ್ತಮುತ್ತ ಪರಿಶೀಲನೆ ನಡೆಸಿ ಎಲ್ಲವೂ ಸಮರ್ಪಕವಾಗಿದೆ ಎಂದು ದೃಢಪಡಿಸಿಕೊಂಡಿದೆ ಎಂದರು.
ವೇದಿಕೆ ನಿರ್ಮಾಣ ಸಂಸದರ ಉಸ್ತುವಾರಿ
ಸಂಸದ ಎಸ್.ಮುನಿಸ್ವಾಮಿ ಹಗಲಿರುಳೆನ್ನದೇ ವೇದಿಕೆ ಬಳಿಯೇ ತಮ್ಮ ಬೆಂಬಲಿಗರೊoದಿಗೆ ಮೊಕ್ಕಾಂ ಹೂಡಿದ್ದು, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ, ಈ ನಡುವೆ ರಾಷ್ಟಿಯ ಹೆದ್ದಾರಿಯ ಕೆಂದಟ್ಟಿ ಸಮೀಪ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ವೇದಿಕೆ ಹಾಗೂ ಮತ್ತಿತರ ನಡೆಯುತ್ತಿರುವ ಕೆಲಸಗಳನ್ನು ಪರಿಶೀಲನೆ ಮಾಡಿದರು.
ಮೋದಿ ಆಗಮನ ಬಿಜೆಪಿಯಲ್ಲಿ ಸಂಚಲನ
ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ ಸಂಸದ ಎಸ್.ಮುನಿಸ್ವಾಮಿ, ಮೋದಿ ಆಗಮನದಿಂದ ಬಿಜೆಪಿಗೆ ಜಿಲ್ಲೆಯಲ್ಲಿ ಬೂಸ್ಟ್ ಸಿಕ್ಕಂತಾಗಿದೆ, ಜಿಲ್ಲೆಯಲ್ಲಿ ಕನಿಷ್ಟ ೪ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಶತಸಿದ್ದವಾಗಲಿದ್ದು, ಮೋದಿಯ ಅಭಿಮಾನಿಗಳಾಗಿರುವ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದರು.
ಜಿಲ್ಲಾಧಿಕಾರಿಗಳು, ಎಸ್ಪಿ, ಕೆಜಿಎಫ್ ಎಸ್ಪಿ, ಅಪರ ಎಸ್ಪಿ ಸೇರಿದಂತೆ ಜಿಲ್ಲೆಯ ವಿವಿಧ ಅಧಿಕಾರಿಗಳು ಸಿದ್ದತೆಗಳು ಮತ್ತು ಭದ್ರತೆ ಕುರಿತು ಕೈಗೊಂಡಿರುವ ಕ್ರಮಗಳ ಕುರಿತು ಪರಿಶೀಲನೆ ನಡೆಸಿ ಹೋಗಿದ್ದಾರೆ, ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರೂ ಲೋಹಶೋಧಕ ಮೂಲಕವೇ ವೇದಿಕೆ ಮುಂಭಾಗಕ್ಕೆ ಪ್ರವೇಶಿಸಲು ಅಗತ್ಯ ಸಿದ್ದತೆ ನಡೆಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಡಾ|| ವೇಣುಗೋಪಾಲ್ ರವರು, ಕಾರ್ಯಕ್ರಮದ ವೀಕ್ಷಕರಾದ ಸಾಯಿ ಲೋಕೇಶ್ ರವರು, ಕೆ.ಜಿ.ಎಫ್ ಮಂಡಲ ಅಧ್ಯಕ್ಷರಾದ ಜೈಪ್ರಕಾಶ್ ನಾಯ್ಡು, ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ಮುಖಂಡರಾದ ಶ್ರೀನಿವಾಸ್ ರವರು ಗಾಂಧಿನಗರ ವೆಂಕಟೇಶ್ ರವರು ಬೆಗ್ಲಿ ಶಿರಾಜ್ ಹಾಗೂ ಮತ್ತಿತರ ಪಕ್ಷದ ಮುಖಂಡರು ಉಪಸ್ಥಿತರಿದ್ದರು.