ಮಹಾಶಿವರಾತ್ರಿಯ ಮಹತ್ವ

ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ ಮಹಾಶಿವರಾತ್ರಿ ಆಚರಣೆಗೂ ಒಂದು ಹಿನ್ನೆಲೆಯಿದೆ. ದಕ್ಷನ ಮಗಳಾದ ದಾಕ್ಷಾಯಿಣಿಯೇ ಪರಶಿವನ ಹೆಂಡತಿ. ಹೀಗಾಗಿ ಪರಮೇಶ್ವರನು ದಕ್ಷನಿಗೆ ಸಂಬಂಧದಲ್ಲಿ ಅಳಿಯನಾಗಬೇಕು. ಒಂದು ದಿನ ತ್ರಿವೇಣೀಸಂಗಮದಲ್ಲಿ ದೇವತೆಗಳು ಏರ್ಪಡಿಸಿದ್ದ ಜ್ಞಾನ ಸತ್ರವೊಂದು ನಡೆಯುತ್ತಿತ್ತು. ಪರಶಿವನೇ ಆ ಸಭೆಯ ಅಧ್ಯಕ್ಷನಾಗಿದ್ದ. ಆಗ ದಕ್ಷನು ಅಲ್ಲಿಗೆ ಬಂದ. ಆಗ ಇಡೀ ಸಭೆಯಲ್ಲಿ ಇದ್ದ ದೇವತೆಗಳು ಮುನಿಗಳು ಎಲ್ಲರೂ ಎದ್ದು ನಿಂತು ನಮಸ್ಕರಿಸಿ ಆತನಿಗೆ ಗೌರವ ಸಲ್ಲಿಸಿದರು. ಆದರೆ, ಅಧ್ಯಕ್ಷ ಪೀಠದಲ್ಲಿದ್ದ ಕಾರಣ ಪರಮೇಶ್ವರನು ಎದ್ದು ಗೌರವ ಸೂಚಿಸಲಿಲ್ಲ. ಇದರಿಂದಾಗಿ ದಕ್ಷ ಕುಪಿತನಾದ. ಅಳಿಯನು ತನ್ನನ್ನು ಅವಮಾನಿಸಿದ ಎಂದೇ ಆತ ತಿಳಿದ. ಹೀಗಾಗಿ ಆ ಸಭೆಯಲ್ಲಿ ಕುಳಿತುಕೊಳ್ಳದೇ ಎಲ್ಲರೆದುರು ಅಳಿಯನಾದ ಶಿವನನ್ನು ನಿಂದಿಸಿ ಸಭೆಯನ್ನು ಧಿಕ್ಕರಿಸಿ ಹೊರನಡೆದ. ತನ್ನ ಊರಿಗೆ ಹೋದವನೇ ತಾನೂ ಕೂಡಾ ಬಹಳ ವಿಜೃಂಭಣೆಯ ಒಂದು ಯಾಗವನ್ನು ಕೈಗೊಂಡ. ಅದಕ್ಕೆ ಸ್ವತಹ ತಾನೇ ಇದು “ನಿರೀಶ್ವರ ಯಾಗ” ಎಂದು ಹೆಸರಿಸಿಕೊಂಡ. ಅದರಲ್ಲಿ ಈಶ್ವರನನ್ನು ಹೊರತುಪಡಿಸಿ ಉಳಿದ ದೇವತೆಗಳೆಲ್ಲರಿಗೂ ಹವಿಸ್ಸನ್ನು ನೀಡಲು ತೀರ್ಮಾನಿಸಿದ. ಹೀಗಾಗಿ ಪರಮೇಶ್ವರನನ್ನು ಹೊರತುಪಡಿಸಿ ಉಳಿದವರಿಗೆಲ್ಲ ಆಮಂತ್ರಣ ನೀಡಿದ. ಆದರೆ, ಆ ಯಾಗಕ್ಕೆ ಹೋಗುತ್ತಿರುವ ಬ್ರಾಹ್ಮಣರ ಮೂಲಕ ದಾಕ್ಷಾಯಿಣಿಗೆ ತನ್ನ ತಂದೆಯು ಯಾಗವೊಂದನ್ನು ಮಾಡುತ್ತಿರುವ ವಿಷಯ ತಿಳಿಯುತ್ತದೆ. ಆಕೆ ಗಂಡನಾದ ಈಶ್ವರನಲ್ಲಿ ನಾವೂ ಕೂಡಾ ಆ ಯಾಗಕ್ಕೆ ಹೋಗೋಣ ಎಂದು ವಿನಂತಿಸುತ್ತಾಳೆ. ಆಗ ಈಶ್ವರನು ಹಿಂದೆ ತ್ರಿವೇಣೀ ಸಂಗಮದಲ್ಲಿ ನಡೆದ ಸಭೆಯ ವಿಚಾರವನ್ನು ಆಕೆಗೆ ತಿಳಿಸಿ, ನಿನ್ನ ತಂದೆ ಹಗೆ ಸಾಧನೆಗಾಗಿಯೇ ಈ ರೀತಿ ಮಾಡುತ್ತಿದ್ದಾನೆ, ಆದ್ದರಿಂದ ಹೋಗುವುದು ಬೇಡ ಎನ್ನುತ್ತಾನೆ. ಆದರೆ ತವರಿನ ಮೋಹದಿಂದಾಗಿ ದಾಕ್ಷಾಯಿಣಿಯು ಗಂಡನನ್ನು ಕಾಡಿಸಿ ಪೀಡಿಸಿ ನೀವು ಬಾರದೇ ಇದ್ದರೂ ಪರವಾಗಿಲ್ಲ, ನನ್ನನ್ನಾದರೂ ಕಳುಹಿಸಿ ಎನ್ನುತ್ತಾಳೆ. ಈಶ್ವರನು ಅದಕ್ಕೂ ಕೂಡಾ ಒಪ್ಪದೇ ನೀನೂ ಕೂಡಾ ಹೋಗುವುದು ಬೇಡ, ಹೋದರೆ ಕೇಡಾಗುತ್ತದೆ ಎಂದು ಎಚ್ಚರಿಸುತ್ತಾನೆ. ಆದರೆ, ತಂದೆತಾಯಿಯರನ್ನು ಅಕ್ಕತಂಗಿಯರನ್ನು ಬಂಧುಬಾಂಧವರನ್ನೆಲ್ಲ ಕಾಣಬೇಕು ಎಂಬ ಮಾಯಾಪಾಶಕ್ಕೆ ಸಿಲುಕಿದ ದಾಕ್ಷಾಯಿಣಿಯು ಈಶ್ವರನ ಮಾತನ್ನು ತಿರಸ್ಕರಿಸಿ, ತಾನೊಬ್ಬಳೇ ತಂದೆಯ ಯಾಗಕ್ಕೆ ಹೋಗುತ್ತಾಳೆ.
ಆದರೆ, ಯಾಗಶಾಲೆಗೆ ಹೋದ ದಾಕ್ಷಾಯಿಣಿಯನ್ನು ಯಾರೂ ಮಾತನಾಡಿಸುವುದೇ ಇಲ್ಲ. ತಾಯಿ ಅಕ್ಕ ತಂಗಿಯರೆಲ್ಲ ಮಾತನಾಡಿಸಲು ಮುಂದಾದರೂ ಕೂಡಾ ದಕ್ಷನು ಅವರನ್ನೆಲ್ಲ ಗದರಿಸಿ ಯಾರೂ ಆಕೆಯನ್ನು ಮಾತನಾಡಿಸದಂತೆ ಮಾಡುತ್ತಾನೆ. ಆಗ ದಾಕ್ಷಾಯಿಣಿಗೆ ಗಂಡನ ಮಾತನ್ನು ಮೀರಿ ಬಂದ ತನ್ನ ತಪ್ಪಿನ ಅರಿವಾಗುತ್ತದೆ. ಆದರೂ ಸಹಿಸಿಕೊಂಡು ಯಾಗದ ಸಂಭ್ರಮವನ್ನು ನೋಡುತ್ತಾ ಇರುತ್ತಾಳೆ. ಅಲ್ಲಿ ಯಾಗ ನಡೆಸುತ್ತಿರುವ ಮುನಿಗಳು ಇಂದ್ರ , ಅಗ್ನಿ , ಯಮ , ನಿಋತಿ , ವರುಣ , ವಾಯು , ಕುಬೇರ ಎಲ್ಲರಿಗೂ ಹವಿಸ್ಸನ್ನು ಅರ್ಪಿಸಿ ಕೊನೆಯಲ್ಲಿ “ಈಶಾಯ ಸ್ವಾಹಾ” ಎಂದು ಈಶನಿಗೆ ಹವಿಸ್ಸನ್ನು ಅರ್ಪಿಸಲು ತೊಡಗಿದಾಗ, ದಕ್ಷನು ಸಿಟ್ಟಿನಿಂದ ಅವರನ್ನು ತಡೆದು ಈಶ್ವರನಿಗೆ ಹವಿಸ್ಸನ್ನು ಕೊಡಬಾರದು ಇದು ನಿರೀಶ್ವರ ಯಾಗ ಎಂದು ಕೂಗುತ್ತಾನೆ. ಆಗ ದಾಕ್ಷಾಯಿಣಿಗೆ ಕೋಪ ಬರುತ್ತದೆ. ಆಕೆ ದಕ್ಷನನ್ನು ಜರೆಯುತ್ತಾಳೆ. ದಕ್ಷನೂ ಕೂಡಾ ಆಕೆಯನ್ನು ಮತ್ತು ಈಶ್ವರನನ್ನು ನಿಂದಿಸುತ್ತಾನೆ. ಅವಮಾನ ತಾಳಲಾರದೇ ಹತಾಶಳಾದ ದಾಕ್ಷಾಯಿಯಿಣಿಯು, ತಾನೇ ಯೋಗಾಗ್ನಿಯನ್ನು ಸೃಷ್ಟಿಸಿಕೊಂಡು ಅದರಲ್ಲಿ ತನ್ನನ್ನು ತಾನೇ ಆಹುತಿ ಕೊಟ್ಟುಕೊಳ್ಳುತ್ತಾಳೆ. ದಾಕ್ಷಾಯಿಣಿಯು ಸುಟ್ಟುಹೋದಳೆಂಬ ವಾರ್ತೆ ತಿಳಿದ ಈಶ್ವರನು ಕುಪಿತನಾಗಿ ತನ್ನ ಜಡೆಯನ್ನು ನೆಲಕ್ಕೆ ಬಡಿದು ವೀರಭದ್ರನನ್ನು ಸೃಷ್ಟಿಸುತ್ತಾನೆ. ಅವನಿಗೆ ದಕ್ಷನನ್ನು ಕೊಲ್ಲುವಂತೆ ಅಪ್ಪಣೆ ಕೊಡುತ್ತಾನೆ. ವೀರಭದ್ರನು ಪ್ರಾಚೀನಬರ್ಹಿಗೆ ಬಂದು ಯಾಗಶಾಲೆಯನ್ನೆಲ್ಲ ಧ್ವಂಸಗೊಳಿಸುತ್ತಾನೆ. ದಕ್ಷನನ್ನೂ ಅವನೊಂದಿಗೆ ಸಹಕರಿಸಿದವರೆಲ್ಲರನ್ನೂ ಕೊಲ್ಲುತ್ತಾನೆ. ಹೆಂಡತಿಯನ್ನು ಕಳೆದುಕೊಂಡ ಈಶ್ವರನು ಕೈಲಾಸದಲ್ಲಿ ಒಂಟಿಯಾಗಿಯೇ ಧ್ಯಾನಾಸಕ್ತನಾಗಿ ಉಗ್ರವಾದ ತಪಸ್ಸಿನಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. ಇತ್ತ ತಾರಕಾಸುರನೆಂಬ ದೈತ್ಯನು ಉಗ್ರವಾದ ತಪದಲ್ಲಿ ಬ್ರಹ್ಮನನ್ನು ಮೆಚ್ಚಿಸಿ ಆತನಿಂದ ವರಪಡೆದು, ವರಬಲದಿಂದ ಕೊಬ್ಬಿ ದೇವತೆಗಳನ್ನೆಲ್ಲ ಸೋಲಿಸಿ ಲೋಕಕಂಟಕನಾಗಿ ಮೆರೆಯುತ್ತಿರುತ್ತಾನೆ. ಈಶ್ವರನಿಂದ ಜನಿಸಿದ ಪುತ್ರನಿಂದಲ್ಲದೇ ಅನ್ಯರಿಂದ ಮರಣ ಇಲ್ಲದಂತಹ ವರ ಅವನಿಗೆ ಇರುವುದರಿಂದ ದೇವತೆಗಳಿಗೆಲ್ಲ ಚಿಂತೆಯಾಗುತ್ತದೆ. ಈಶ್ವರನಿಗೆ ಹೆಂಡತಿ ಇಲ್ಲದಿರುವುದರಿಂದ ಆತನಿಗೆ ಮಗನು ಜನಿಸುವುದು ಸಾಧ್ಯವಿಲ್ಲ. ಹೀಗಾಗಿ ದೇವತೆಗಳೆಲ್ಲರೂ ಈಶ್ವರನಿಗೆ ಮದುವೆ ಮಾಡುವ ಉಪಾಯ ಮಾಡುತ್ತಾರೆ. ದಕ್ಷಯಜ್ಞದ ಸಂದರ್ಭದಲ್ಲಿ ಉರಿದು ಹೋದ ದಾಕ್ಷಾಯಿಣಿಯು ನಂತರ ಪರ್ವತ ರಾಜನಿಗೆ ಮಗಳಾಗಿ ಪಾರ್ವತಿ (ಗಿರಿಜೆ) ಎಂಬ ಹೆಸರಿನಿಂದ ಈಶ್ವರನನ್ನೇ ಧ್ಯಾನಿಸುತ್ತಾ ಇದ್ದಾಳೆ. ಅವಳನ್ನೇ ಕೊಟ್ಟು ಈಶ್ವರನಿಗೆ ಮದುವೆ ಮಾಡಿಸುವುದು ಎಂದು ತೀರ್ಮಾನಿಸುತ್ತಾರೆ. ಆದರೆ, ಮೊದಲು ಈಶ್ವರನನ್ನು ತಪಸ್ಸಿನಿಂದ ಎಬ್ಬಿಸಬೇಕಲ್ಲ , ಅದಕ್ಕಾಗಿ ಮನ್ಮಥನ ಮೊರೆಹೋಗುತ್ತಾರೆ. ಮನ್ಮಥನು ಈಶ್ವರನಿಗೆ ಪಂಚಬಾಣಗಳನ್ನು ಬಿಟ್ಟು ಅದರಿಂದ ಆತನ ತಪಸ್ಸನ್ನು ಕೆಡಿಸುತ್ತಾನೆ. ಇದರಿಂದ ಸಿಟ್ಟಾದ ಶಿವನು ತನ್ನ ಮೂರನೇ ಕಣ್ಣನ್ನು ತೆರೆದು ಮನ್ಮಥನನ್ನು ಸುಟ್ಟುಬಿಡುತ್ತಾನೆ. ಆದರೆ, ಬಳಿಕ ದೇವತೆಗಳೆಲ್ಲರೂ ಶಿವನನ್ನು ಧ್ಯಾನಿಸಿ ಆತನನ್ನು ಪ್ರಸನ್ನಗೊಳಿಸುತ್ತಾರೆ. ನಂತರ ಶಿವ ಪಾರ್ವತಿಯರ ಕಲ್ಯಾಣವನ್ನು ವಿಜೃಂಭಣೆಯಿಂದ ನೆರವೇರಿಸುತ್ತಾರೆ. ಮುಂದೆ ಅವರಿಬ್ಬರಿಗೆ ಜನಿಸಿದ ಷಣ್ಮುಖನೇ ತಾರಕಾಸುರನನ್ನು ಕೊಲ್ಲುತ್ತಾನೆ. ಹೀಗೆ ಗಿರಿಜಾಕಲ್ಯಾಣ ನಡೆದ ರಾತ್ರಿಯೇ ಈ ಮಹಾಶಿವರಾತ್ರಿಯಾಗಿದೆ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷದ ಚತುರ್ದಶಿಯೇ ಶಿವರಾತ್ರಿ. ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಅಂದು ರಾತ್ರಿ ದೇವಾನುದೇವತೆಗಳೆಲ್ಲರೂ ಜಾಗರಣೆ ಮಾಡಿ , ಗಿರಿಜಾ ಕಲ್ಯಾಣ ವೀಕ್ಷಿಸಿ , ಶಿವಪಾರ್ವತಿಯರಿಬ್ಬರನ್ನೂ ಪೂಜಿಸಿದರಂತೆ. ಹೀಗಾಗಿಯೇ ಜಾಗರಣೆ ಪದ್ಧತಿ ಆಚರಣೆಗೆ ಬಂದಿದೆ ಎನ್ನಲಾಗುತ್ತದೆ. ದಾಕ್ಷಾಯಿಣಿಯ ಸಾವಿನಿಂದ ವಿರಕ್ತನಾಗಿದ್ದ ಶಿವನನ್ನು , ಹಿಮ ಪರ್ವತವಾದ ಹಿಮವಂತನ ಮಗಳು ಪಾರ್ವತಿಯು ಇದೇ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತಾ , ತಪಸ್ಸು ಮಾಡಿ , ತನ್ಮೂಲಕ ಶಿವನನ್ನು ಮೆಚ್ಚಿಸಿ , ವಿವಾಹವಾದಳೆಂಬುದು ಪ್ರತೀತಿ. ಕೈಲಾಸವಾಸಿ ಶಿವನಿಗೆ ಈ ಶಿವರಾತ್ರಿಯು ಅತ್ಯಂತ ಪ್ರಿಯವಾದ ದಿನವಾಗಿದೆ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಈ ಮಹಾಶಿವರಾತ್ರಿ ದಿನದ ವಿಶೇಷವನ್ನು ಸಾರುವ ಅನೇಕ ಕಥೆಗಳಿವೆ , ಅವುಗಳಲ್ಲಿ ಈ ಗಿರಿಜಾ ಕಲ್ಯಾಣದ ಕಥೆಯು ಪ್ರಮುಖವಾಗಿದೆ.
ಹರ ಹರ ಮಹಾದೇವ.

Leave a Reply

Your email address will not be published. Required fields are marked *