ಕೋಲಾರ, ಜೀತಕ್ಕಾಗಿ ವ್ಯಕ್ತಿಯನ್ನು ದುಡಿಸಿಕೊಳ್ಳುವುದು ಅಮಾನವೀಯ ಹಾಗೂ ಕ್ರಿಮಿನಲ್ ಅಪರಾಧ ಅದನ್ನು ಬುಡ ಸಮೇತ ನಿರ್ಮೂಲನೆ ಮಾಡಲು ಪಣ ತೊಡೋಣ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ ಮತ್ತು ಬಾಲಕಾರ್ಮಿಕ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಜೀತ ಪದ್ಧತಿ ರದ್ದತಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂವಿಧಾನದ ಅನುಚ್ಚೇದ ೨೩ ಮತ್ತು ೨೪ ರಲ್ಲಿ ವಿವರಿಸಲಾಗಿರುವ ಶೋಷಣೆ ವಿರುದ್ಧ ಹಕ್ಕಿನ ಪ್ರಕಾರ ಮಕ್ಕಳನ್ನು ದುಡಿಸುವುದು, ಶೋಷಿಸುವುದು ಕಾನೂನಿನ ಅನ್ವಯ ಶಿಕ್ಷಾರ್ಹ ಅಪರಾಧವಾಗಿದೆ. ಇದೇ ಹಕ್ಕಿನ ಬುನಾದಿಯ ಮೇಲೆ ಭಾರತ ಸಂಸತ್ತು ಜೀತ ಪದ್ಧತಿ ರದ್ದತಿ ಕಾಯ್ದೆಯನ್ನು ೧೯೭೬ ರಲ್ಲಿ ದೇಶದಾದ್ಯಂತ ಜಾರಿ ಮಾಡಿದೆ. ಕ್ರಿಮಿನಲ್ ಅಪರಾಧವೆಂದು ಕಾಯ್ದೆಯಲ್ಲಿ ಉಲ್ಲೇಖಿಸಿ ೧೯೭೬ ಫೆಬ್ರವರಿ ೯ರಂದು ಜೀತ ಪದ್ಧತಿ ಕಾಯ್ದೆಗೆ ಘನವೆತ್ತ ಭಾರತದ ರಾಷ್ಟ್ರಪತಿಗಳು ಅಂಕಿತಹಾಕಿರುತ್ತಾರೆ. ಅಂದಿನಿoದ ಜೀತ ಪದ್ದತಿ ರದ್ದತಿ ಕಾಯ್ದೆ ೧೯೭೬ ಯನ್ನುದೇಶದ ಎಲ್ಲಾ ರಾಜ್ಯಗಳಲ್ಲೂ ಆಯಾ ಜಿಲ್ಲಾಧಿಕಾರಿಗಳು ಹಾಗೂ ಅವರಿಂದ ಪ್ರಾಧಿಕೃತವಾದ ಅಧಿಕಾರಿಗಳು ಜಾರಿ ಮಾಡುತ್ತಿರುವುದು, ಈ ಪದ್ಧತಿಯಡಿ ದುಡಿಯುತ್ತಿರುವವರನ್ನು ಗುರುತಿಸಿ ಬಿಡುಗಡೆಗೊಳಿಸಿ ಪುನರ್ವಸತಿ ಮಾಡಲಾಗುತ್ತಿದೆ. ಕೋಲಾರ ಜಿಲ್ಲೆಯಲ್ಲಿ ೨೦೧೬ ರಿಂದ ಇಲ್ಲಿಯವರೆಗೆ ಒಟ್ಟು ೮೫ ಪ್ರಕರಣಗಳನ್ನು ದಾಖಲಿಸಲಾಗಿದೆ. ಅದೇ ರೀತಿ ಮಾಲೂರು ಮಾಲೂರು ತಾಲೂಕಿನಲ್ಲಿ ಕಲ್ಲು ಗಣಿಗಾರಿಕೆ ಹೆಚ್ಚಿರುವುದರಿಂದ ಅತಿ ಹೆಚ್ಚು ಪ್ರಕರಣಗಳು ಕಂಡುಬoದಿರುತ್ತದೆ. ನಂತರ ಮುಳುಬಾಗಿಲು ೬,ಬಂಗಾರಪೇಟೆ ೭ ಪ್ರಕರಣಗಳು ದಾಖಲಾಗಿವೆ ಇದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನ್ಯಾಯಾಧೀಶರು ಸುನಿಲ್ ಎಸ್.ಹೊಸಮನಿ ಅವರು ಮಾತನಾಡಿ ಕರ್ನಾಟಕ ರಾಜ್ಯ ಇಡೀ ದೇಶದಲ್ಲೇ ಅತೀ ಹೆಚ್ಚು ಜೀತದಾಳುಗಳನ್ನು ಗುರುತಿಸಿ ಬಿಡುಗಡೆ ಮಾಡಿದ್ದರೂ ಸಹ ಸಾರ್ವಜನಿಕರಲ್ಲಿ, ಕಂಪನಿಗಳಲ್ಲಿ, ಅಧಿಕಾರಿ ಸಮುದಾಯದಲ್ಲಿ ಈ ಪದ್ಧತಿಯ ಕುರಿತು ಇನ್ನೂ ಹೆಚ್ಚಿನ ಅರಿವು ಬರಬೇಕಿದೆ. ಈ ಕಾರಣಕ್ಕಾಗಿಯೇ ಜೀತದಾಳುಗಳ ಪುನರ್ವಸತಿ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರತಿ ವರ್ಷ ಫೆಬ್ರವರಿ ೯ ರಂದು ಜೀತ ಪದ್ದತಿ ರದ್ದತಿ ದಿನಾಚರಣೆ ಎಂದು ಕರ್ನಾಟಕ ರಾಜ್ಯದಲ್ಲಿ ಘೋಷಿಸಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅರ್ಥಪೂರ್ಣ ಚಟುವಟಿಕೆಗಳನ್ನು, ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜೀತ ಪದ್ಧತಿ ರದ್ದತಿ ಕುರಿತು, ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೊಬೇಷನರಿ ಜಿಲ್ಲಾಧಿಕಾರಿ ವಿನಾಯಕ್. ಉಪ ವಿಭಾಗಾಧಿಕಾರಿ ವೆಂಕಟಲಕ್ಷಿö್ಮ, ಕಾರ್ಮಿಕ ಇಲಾಖೆ ಅಧಿಕಾರಿ ಶರ್ಮಿನಾ ತಾಜ್ ಮತ್ತು ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.