ಕೆಜಿಎಫ್, ಇಂದಿನ ಮಕ್ಕಳೇ ಮುಂದಿನ ಭಾವೀ ಪ್ರಜೆಗಳಾಗಿರುವುದರಿಂದ ಚಿಕ್ಕ ವಯಸ್ಸಿನಲ್ಲಿಯೇ ಅವರಲ್ಲಿನ ಪ್ರತಿಭೆಗಳನ್ನು ಗುರ್ತಿಸಿ ಪ್ರೋತ್ಸಾಹ ನೀಡಿದಲ್ಲಿ ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಡಿವೈಎಸ್ಪಿ ರಮೇಶ್ ಹೇಳಿದರು.
ನಗರದ ಕಿಂಗ್ ಜಾರ್ಜ್ ಹಾಲ್ನಲ್ಲಿ ಗ್ರಾಂಡ್ ರ್ಯಾನ್ ರೈನಾಸ್ ಶಾಲೆಯ ಮೊದಲನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರ್ತಿಸಿ ಹೊರತೆಗೆಯುವ ಕಾರ್ಯವನ್ನು ಮನೆಗಳಲ್ಲಿ ಪೋಷಕರು ಮತ್ತು ಶಾಲೆಗಳಲ್ಲಿ ಶಿಕ್ಷಕರು ಮಾಡಬೇಕಾಗಿದೆ ಎಂದರು.
ಮಕ್ಕಳೆಂದರೆ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದು, ಅಂತಹ ಪುಟಾಣಿಗಳನ್ನು ನಿಮ್ಮ ಮೇಲೆ ಭರವಸೆ ಇಟ್ಟು ಶಾಲೆಗೆ ಕಳುಹಿಸುವುದರಿಂದ ಅವರನ್ನು ಅತ್ಯಂತ ಕಾಳಜಿ ಮತ್ತು ಮುತುವರ್ಜಿಯಿಂದ ನೋಡಿಕೊಳ್ಳಬೇಕಾದ ಜವಾಬ್ದಾರಿ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ಮೇಲಿರುತ್ತದೆ. ಮನೆಗಳಲ್ಲಿ ಅವರನ್ನು ನೋಡಿಕೊಳ್ಳುವುದಕ್ಕಿಂತ ಹೆಚ್ಚು ಜಾಗರೂಕತೆಯಿಂದ ನೋಡಿಕೊಳ್ಳಬೇಕೆಂದರು.
ಮಕ್ಕಳು ಮನೆಯಿಂದ ಹೊರಟು ಶಾಲೆ ಸೇರಿ ಮತ್ತೆ ಶಾಲೆಯಿಂದ ಮನೆಗೆ ತಲುಪುವರೆಗೆ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು. ಪ್ರತಿಯೊಂದು ಶಾಲೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು, ಇದರಿಂದ ಏನೇ ಅನಾಹುತಗಳಾದರೂ ಅದಕ್ಕೆ ನಿಖರ ಕಾರಣವನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ಎಷ್ಟೇ ಒತ್ತಡಗಳಿದ್ದರೂ ಮಕ್ಕಳನ್ನು ನೋಡುವಷ್ಟರಲ್ಲಿ ಮಾಯವಾಗಿಬಿಡುತ್ತವೆ. ಶಾಲೆಯು ಪ್ರಾರಂಭವಾಗಿ ಕೇವಲ ಒಂದು ವರ್ಷವಾಗಿದ್ದರೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಕೆಜಿಎಫ್ನಲ್ಲಿ ಮನೆ ಮಾತಾಗಿರುವುದು ಸಂತಸದ ವಿಚಾರವಾಗಿದೆ.
ಇಂದಿನ ಪುಟಾಣಿ ಮಕ್ಕಳೇ ಮುಂದಿನ ಸಮಾಜದ ನಕ್ಷತ್ರಗಳಾಗಿದ್ದು, ಅವರನ್ನು ಸರಿದಾರಿಯಲ್ಲಿ ಸಾಗುವಂತೆ ತಿದ್ದಿ ತೀಡುವ ಜವಾಬ್ದಾರಿ ಶಿಕ್ಷಕರ ಕೈಯಲ್ಲಿದೆ. ಈ ಮೊದಲು ಮಾಂಟೆಸೋರಿ, ಎಲ್ಕೆಜಿ ಮತ್ತು ಯುಕೆಜಿ ತರಗತಿಗಳಿರಲಿಲ್ಲ. ಆದರೆ ನಿನ್ನೆ ತಾನೆ ಸರ್ಕಾರವೇ ಮಾಂಟೆಸೋರಿ ಶಿಕ್ಷಣ ಮಕ್ಕಳಿಗೆ ನೀಡಬೇಕೆಂದು ಆದೇಶ ಹೊರಡಿಸಿರುವುದು ಸಂತಸದ ವಿಚಾರವಾಗಿದೆ ಎಂದರು.
ಇಂದಿನ ಶಿಕ್ಷಣ ವ್ಯವಸ್ಥೆ ಬದಲಾಗುತ್ತಿದ್ದು, ಸಮಾಜಕ್ಕೆ ಅಗತ್ಯವಾದ ರೀತಿಯಲ್ಲಿ ಆಯಾ ಕಾಲಮಾನಕ್ಕೆ ತಕ್ಕಂತೆ ಹೊಸ ಹೊಸ ನೀತಿಗಳನ್ನು ಜಾರಿಗೊಳಿಸುತ್ತಿರುವುದು ಶ್ಲಾಘನೀಯವಾಗಿದ್ದು, ಬದಲಾವಣೆಗೆ ತಕ್ಕಂತೆ ಹೊಂದಿಕೊoಡು ನಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕಿ ಪ್ರೀತಿ, ಅಧ್ಯಕ್ಷ ಅಮರ್ನಾಥ್, ಉಪಾಧ್ಯಕ್ಷ ತ್ಯಾಗರಾಜ್, ಕಾರ್ಯದರ್ಶಿ ಶೃತಿ, ಡಾ.ಪ್ರಕಾಶ್ ಮೊದಲಾದವರು ಇದ್ದರು.