ಸಂಚಾರಿ ನಿಯಮ ಉಲ್ಲಂಘನೆ ದಂಡದ ರಿಯಾಯಿತಿ ಪ್ರಯೋಜನ ಪಡೆದು, ಸಂಚಾರಿ ನಿಯಮ ಪಾಲಿಸಿ – ಶುಕ್ಲಾಕ್ಷ ಪಾಲನ್


ಕೋಲಾರ,ಭಾರತೀಯ ಕಾನೂನಿನ ಅರಿವು ಮೂಡಿಸಲು ಕಾನೂನು ಸೇವಾ ಪ್ರಾಧಿಕಾರಗಳು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಜನರು ಕಾನೂನಿಗೆ ಹೆದರುವ ಅಗತ್ಯವಿಲ್ಲ: ಸಂಚಾರಿ ನಿಯಮ ಉಲ್ಲಂಘನೆ ದಂಡದ ರಿಯಾಯಿತಿ ಘೋಷಿಸಲಾಗಿದೆ. ಈ ಕಾಯ್ದೆಯ ಲಾಭವನ್ನು ಸಾರ್ವಜನಿಕರು ಪಡೆಯಬೇಕು. ಕಾನೂನನ್ನು ಗೌರವಿಸಿ ಅದರಂತೆ ನಡೆಯಬೇಕು ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಶುಕ್ಲಾಕ್ಷ ಪಾಲನ್ ಅವರು ಹೇಳಿದರು.
ಇಂದು ಜಿಲ್ಲಾ ನ್ಯಾಯಾಲಯದ ಸಂಭಾಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೋಲಾರ ಜಿಲ್ಲೆಯ ಜಿಲ್ಲಾ ನ್ಯಾಯಾಲಯ ಸೇರಿದಂತೆ, ವಿವಿಧ ಹಂತಗಳ ನ್ಯಾಯಾಲಯಗಳಲ್ಲಿ ಒಟ್ಟು ೪೨,೨೦೬ ಪ್ರಕರಣಗಳು ಬಾಕಿ ಇದ್ದು, ಇವುಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿ ಮಾಡಿಸಲು ಗುರುತಿಸಿದ ನಂತರ ಒಟ್ಟು ೨೮,೬೪೬ ಕ್ಕಿಂತ ಹೆಚ್ಚು ಪ್ರಕರಣಗಳು ತನಿಖೆಗೆ ಬಾಕಿ ಇವೆ ಎಂದು ಅವರು ಹೇಳಿದರು.
ಕಳೆದ ಜನವರಿ ೨೦೨೨ ರಿಂದ ಡಿಸೆಂಬರ್ ೨೦೨೨ ರ ವರೆಗೆ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ಗಳಲ್ಲಿ ೧೯೯೭ ಪೂರ್ವವ್ಯಾಜ್ಯ ಪ್ರಕರಣ ಸೇರಿದಂತೆ ಒಟ್ಟು ೫೧೪೪ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಇವುಗಳಲ್ಲಿ ಕ್ರಿಮಿನಲ್ ಪ್ರಕರಣಗಳು, ಚೆಕ್‌ಬೌನ್ಸ್ ಪ್ರಕರಣಗಳು, ಹಣ ವಸೂಲಾತಿ ಪ್ರಕರಣಗಳು, ಅಪಘಾತ ಪರಿಹಾರ ಪ್ರಕರಣಗಳು, ಆಸ್ತಿ ವಿಭಾಗ ದಾವೆ ಪ್ರಕರಣಗಳು, ಕೌಟುಂಬಿಕ ಪ್ರಕರಣಗಳು ಮತ್ತು ಜೀವನಾಂಶ ಹಾಗೂ ಡಿ.ವಿ. ಪ್ರಕರಣಗಳು ಸೇರಿವೆ ಎಂದು ಅವರು ತಿಳಿಸಿದರು.
ಕಳೆದ ಸಾಲಿನಲ್ಲಿ ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಆಯೋಜಿಸಲಾಗಿದೆ ಮತ್ತು ಕಾನೂನು ನೆರವು ಬಯಸಿ ಬಂದ ಜನರಿಗೆ ಪ್ರಾಧಿಕಾರದಿಂದ ವಕೀಲರನ್ನು ನೀಡುವ ಮೂಲಕ ಕಾನೂನು ನೆರವು ನೀಡಲಾಗಿದೆ. ಫೆಬ್ರವರಿ ೧೧ ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ರಾಜಿಗಾಗಿ ೧೩,೫೬೦ ಪೂರ್ವವ್ಯಾಜ್ಯ ಪ್ರಕರಣಗಳನ್ನು ಗುರುತಿಸಲಾಗಿದೆ. ರಾಜಿ ಆಗಬಹುದಾದ ಪ್ರಕರಣಗಳನ್ನು ಗುರುತಿಸಿ, ಕಕ್ಷಿದಾರರಿಗೆ ತಿಳುವಳಿಕೆ ನೀಡುವ ಕಾರ್ಯವನ್ನು ನ್ಯಾಯಾಧೀಶರು, ನ್ಯಾಯವಾದಿಗಳು ಮತ್ತು ಪ್ರಾಧಿಕಾರದ ಸಿಬ್ಬಂದಿಗಳು ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಜಿಲ್ಲಾ ನ್ಯಾಯಾಧೀಶರು ವಿವರಿಸಿದರು. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಅವರು ಹೇಳಿದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ನ್ಯಾಯಮೂರ್ತಿ ಬಿ. ವೀರಪ್ಪ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸರ್ಕಾರವು ಅನುಮೋದಿಸಿದ್ದು, ಜನವರಿ ೧ ರಿಂದ ೧೧ ರ ವರೆಗೆ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳ ದಂಡದಲ್ಲಿ ಶೇ.೫೦ ರಷ್ಟು ರಿಯಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳನ್ನು ಹೊಂದಿರುವ ವಾಹನ ಸವಾರರು ಮತ್ತು ಮಾಲೀಕರು ತಮ್ಮ ದಂಡ ಮೊತ್ತದ ಶೇ. ೫೦ ರಷ್ಟು ಹಣವನ್ನು ತುಂಬಿ ಮುಕ್ತರಾಗಬೇಕು. ಸರ್ಕಾರದ ಈ ಆದೇಶದ ಸದುಪಯೋಗ ಮಾಡಿಕೊಂಡು ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಇಂತಹ ಸಂಚಾರಿ ನಿಯಮ ಉಲ್ಲಂಘಿಸಿ, ಅಪರಾಧ ಮಾಡದಂತೆ ಎಚ್ಚರ ವಹಿಸಬೇಕು ಎಂದು ಅವರು ತಿಳಿಸಿದರು.
ದಂಡದ ಮೊತ್ತವನ್ನು ರಿಯಾಯಿತಿಯಲ್ಲಿ ತುಂಬುವ ದಿನಾಂಕವು ಫೆಬ್ರವರಿ ೧೧ ಆಗಿರುವುದರಿಂದ ಬಾಕಿ ಹೊಂದಿರುವ ಬಾಕಿದಾರರು ತಮ್ಮ ಮೊತ್ತವನ್ನು ಕರ್ನಾಟಕ ಒನ್ ಹಾಗೂ ಕೋಲಾರ ನಗರದ ಸಂಚಾರಿ ಪೊಲೀಸ್ ಠಾಣೆ ಬಳಿಯೂ ಭರಿಸಬಹುದಾಗಿದೆ.
ಫೆಬ್ರವರಿ ೧೧ ರ ನಂತರ ಬಾಕಿದಾರರು ದಂಡದ ಪೂರ್ಣ ಮೊತ್ತವನ್ನು ತುಂಬಬೇಕಾಗುತ್ತದೆ. ಆದ್ದರಿಂದ ನಿಗದಿತ ದಿನಾಂಕದೊಳಗೆ ದಂಡದ ಮೊತ್ತವನ್ನು ಭರಿಸಿ ರಿಯಾಯಿತಿ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನೀಲ್ ಎಸ್.ಹೊಸಮನಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಸಭೆ ನಿರ್ವಹಿಸಿದರು.

Leave a Reply

Your email address will not be published. Required fields are marked *