ಕೋಲಾರ:- ಜಿಲ್ಲಾ ಕೇಂದ್ರದಲ್ಲಿ ಗುರುಭವನಕ್ಕೆ ೭ನೇ ಬಾರಿ ಗುದ್ದಲಿ ಪೂಜೆ ನಡೆಯುತ್ತಿದೆ, ಪಾಪ ವಿಮೋಚನೆಯಾಗಿ ವರ್ಷದೊಳಗೆ ಭವನ ಉದ್ಘಾಟನೆಗೆ ಸಿದ್ದಗೊಳ್ಳಬೇಕು, ಶಿಕ್ಷಕ ಸಂಘಟನೆಗಳ ಭಿನ್ನಾಭಿಪ್ರಾಯ ಬದಿಗೊತ್ತಿ ಈ ಕಾರ್ಯಕ್ಕೆ ಮುಂದಾಗಿ, ನಾನು ೫೦ ಲಕ್ಷ ಅನುದಾನ ನೀಡುವೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ಭರವಸೆ ನೀಡಿದರು.
ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಗುರುಭವನ ಕಾಮಗಾರಿಗೆ ಸಂಸದ ಮುನಿಸ್ವಾಮಿ ಅವರೊಂದಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಮತ್ತೊಮ್ಮೆ ಗುದ್ದಲಿ ಪೂಜೆ ಮಾಡದಿರಿ, ಕಟ್ಟಡ ಉದ್ಘಾಟನೆಗೆ ನಮ್ಮನ್ನು ಆಹ್ವಾನಿಸಿ ಎಂದು ತಾಕೀತು ಮಾಡಿದ ಅವರು, ಈವರೆಗೂ ಜಿಲ್ಲಾ ಕೇಂದ್ರದಲ್ಲಿ ಗುರುಭವನ ಇಲ್ಲದಿರುವುದು ನೋವುಂಟು ಮಾಡಿದೆ, ನನ್ನ ವಿಧಾನಪರಿಷತ್ ಕ್ಷೇತ್ರ ವ್ಯಾಪ್ತಿಯ ೩೪ ಕ್ಷೇತ್ರಗಳಲ್ಲಿ ತಲಾ ೫ ಲಕ್ಷ ಗುರುಭವನಕ್ಕೆ ನೀಡಿದ್ದೇನೆ, ಆದರೆ ನನ್ನ ತವರು ಜಿಲ್ಲೆಯಾದ ಕೋಲಾರದಲ್ಲಿ ಗುರುಭವನಕ್ಕೆ ಈಗಾಗಲೇ ೨೫ ಲಕ್ಷ ನೀಡಿದ್ದೇನೆ, ಒಟ್ಟಾರೆ ನಾನು ೫೦ ಲಕ್ಷ ನೀಡುವೆ ಎಂದರು.
ಶಿಕ್ಷಕ ಸಂಘಟನೆಗಳು ಜವಾಬ್ದಾರಿ ಅರಿತು ಕಟ್ಟಡ ನಿರ್ಮಾಣ ಆರಂಭಿಸಬೇಕು, ಕಾಮಗಾರಿ ನೆನೆಗುದಿಗೆ ಬಿದ್ದರೆ ನಾನು ಇತ್ತ ತಲೆ ಹಾಕಲ್ಲ ಎಂದು ತಿಳಿಸಿದ ಅವರು, ರಾಜ್ಯದಲ್ಲಿನ ೮೬೦ ಶಿಕ್ಷಣ ಇಲಾಖೆ ಕಚೇರಿಗಳ ಜೀರ್ಣೋದ್ಧಾರಕ್ಕೆ ಶಿಕ್ಷಣ ಸಚಿವ ನಾಗೇಶ್ ಪ್ರಯತ್ನ ನಡೆಸಿದ್ದಾರೆ, ಹೊಸ ಶಿಕ್ಷಣ ಪದ್ದತಿ ಅಳವಡಿಕೆಗೆ ಎಲ್ಲಾ ಸಂಘ ಸಂಸ್ಥೆಗಳು ಸಹಕಾರ ನೀಡಿ ಎಂದರು.
ಪುರಾತತ್ವ ವಿನ್ಯಾಸ ಭವನಕ್ಕಿರಲಿ-ಸಂಸದ
ಸoಸದ ಎಸ್.ಮುನಿಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳು ಇಲ್ಲದಷ್ಟು ಶಿಕ್ಷಕ ಸಂಘಗಳಿವೆ, ಅತಿ ಹೆಚ್ಚು ಶಿಕ್ಷಕರಿದ್ದೀರಿ, ನೀವು ಮನಸ್ಸು ಮಾಡಬೇಕು, ಕಟ್ಟಡ ಪುರಾತತ್ವ ವಿನ್ಯಾಸ ಒಳಗೊಂಡಿರಲಿ, ಮುಂದಿನ ಶಿಕ್ಷಕರ ದಿನಾಚರಣೆ ನೂತನ ಗುರುಭವನದಲ್ಲೇ ನಡೆಯಬೇಕು ಎಂದರು.
ಈ ತಕ್ಷಣದಿಂದಲೇ ಕಾಮಗಾರಿ ಆರಂಭಿಸಿ, ಧನುರ್ಮಾಸ, ಅಮಾವಾಸ್ಯೆ ಇದೆಲ್ಲಾ ಬಿಡಿ ಶಿಲಾನ್ಯಾಸವಾಗಿದೆ, ಕಟ್ಟಡ ಕಾಮಗಾರಿ ಆರಂಭಿಸಿ, ನಾನೂ ಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ನೀಡುವೆ ಎಂದರು.
ಎಸ್ಸೆಸ್ಸೆಲ್ಸಿ ಫಲಿತಾಂಶ ೫ರಿಂದ ಪ್ರಥಮ ಸ್ಥಾನಕ್ಕೆ ಬರಬೇಕು, ಜಿಲ್ಲೆಯಲ್ಲಿ ೫೦೦ ಶಾಲೆಗಳು ಸೋರುತ್ತಿವೆ, ೨೦೦ ಶಾಲೆಗಳಿಗೆ ಅನುದಾನ ನೀಡಿದೆ, ಸಿಎಸ್‌ಆರ್ ನಿಧಿ ಶಾಲೆಗಳ ಅಭಿವೃದ್ದಿಗೆ ಮಾತ್ರವೇ ಬಳಸುವಂತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಶ್ರೀನಿವಾಸಗೌಡ, ಹಿಂದೆ ಶಾಲೆಗಳಿರಲಿಲ್ಲ, ಈಗ ಊರೂರಿಗೂ ಶಾಲೆ ಇದೆ, ಕಲಿಕೆ ಸುಲಭವಾಗಿದೆ, ಗುರುಭವನ ಜಿಲ್ಲಾ ಕೇಂದ್ರದಲ್ಲಿ ನಿರ್ಮಾಣ ಮಾಡಿ ಎಲ್ಲರೂ ಕೊಟ್ಟಂತೆ ನಾನೂ ಅನುದಾನ ನೀಡುವೆ ಎಂದರು.
ವಿಧಾನಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಐದು ಮಂದಿ ವಿಧಾನಪರಿಷತ್ ಸದಸ್ಯರು ಇದ್ದು, ಅವರಿಂದ ಭವನಕ್ಕೆ ಅನುದಾನ ಪಡೆದು ಸದುಪಯೋಗ ಮಾಡಿಕೊಳ್ಳಿ, ನಾನೂ ೧೦ ಲಕ್ಷ ರೂ ನೀಡುವೆ ಎಂದು ಘೋಷಿಸಿದ ಅವರು, ಈ ಭವನ ಶಿಲಾನ್ಯಾಸ ೭ ಬಾರಿ ಅಲ್ಲ ೩ ಬಾರಿ ಆಗಿದೆ, ಮೂರಕ್ಕೆ ಮುಕ್ತಾಯವಾಗಿ ವರ್ಷದೊಳಗೆ ಗುರುಭವನ ಎದ್ದು ನಿಲ್ಲಲಿ ಎಂದರು.
ಜಿಲ್ಲಾಧಿಕಾರಿ ವೆಂಕಟ್‌ರಾಜಾ ಮಾತನಾಡಿ, ಗುರುಭವನ ಕಾಮಗಾರಿ ಶುಭದಿನ ಆರಂಭಗೊoಡಿದೆ, ಗುರುಭವನವನ್ನು ಕಂದಾಯ ಇಲಾಖೆಯೂ ಬಳಸಿಕೊಳ್ಳಲು ಅನುವಾಗುವಂತೆ ನಿರ್ಮಿಸಿ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಮಾತನಾಡಿ,ಸಂಸದರು ಈಗಾಗಲೇ ೫೦ ಲಕ್ಷ, ಅನಿಲ್ ಕುಮಾರ್ ೧೦ ಲಕ್ಷ ನೀಡಿದ್ದಾರೆ, ಶಾಸಕ ಕೆ.ಶ್ರೀನಿವಾಸಗೌಡರು ರಾಜಕೀಯ ಭವಿಷ್ಯ ಕೊನೆಗೊಳಿಸುತ್ತಿದ್ದು, ಅವರು ಹೆಚ್ಚಿನ ಅನುದಾನ ನೀಡಲಿ, ಮುಂದೆ ಕೊಡೋಕೆ ಆಗಲ್ಲ ಎಂದರು.
ಜಿಪo ಸಿಇಒ ಯುಕೇಶ್‌ಕುಮಾರ್, ಐಎಎಸ್ ಅಧಿಕಾರಿ ವಿನಾಯಕ್, ನಗರಸಭಾ ಅಧ್ಯಕ್ಷ ಶ್ವೇತಾ ಶಬರೀಷ್,ಬಿಇಒ ಕನ್ನಯ್ಯ, ಮುಖಂಡರಾದ ಕೆ.ಚಂದ್ರಾರೆಡ್ಡಿ, ನಗರಸಭಾ ಸದಸ್ಯ ಮುರಳಿಗೌಡ,ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ ಶುಭ ಕೋರಿದರು.
ಜಿಲ್ಲಾ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಗುರುಭವನ ನಿರ್ಮಾಣ ಸಮಿತಿ ಹೊಣೆಹೊತ್ತು ಕೆಲಸ ಮಾಡಿ, ಶೀಘ್ರ ಕೆಲಸ ಮುಗಿಸಿ ಎಂದರು.
ಜಿಲ್ಲಾಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಖಜಾಂಚಿ ಕೆ.ವಿಜಯ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪೇಗೌಡ, ಗುರುಭವನ ಸಮಿತಿ ಕಾರ್ಯದರ್ಶಿ ಎಂ.ನಾಗರಾಜ್, ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ್, ಮುಖ್ಯಶಿಕ್ಷಕರ ಸಂಘದ ಕಾರ್ಯದರ್ಶಿ ರವಿ, ನಿವೃತ್ತ ಮುಖ್ಯಶಿಕ್ಷಕರಾದ ರುದ್ರಪ್ಪ, ದಾಸಪ್ಪ, ಡಿಪಿಒ ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಪದಾಧಿಕಾರಿಗಳಾದ ಎಂ.ಎನ್.ಶ್ರೀನಿವಾಸಮೂರ್ತಿ, ಬಾಬು,ಶಾಮಮೂರ್ತಿ, ಶಿವಣ್ಣ,ರೆಡ್ಡಪ್ಪ,ಓಬಳರೆಡ್ಡಿ,ವೇಣು,ದಿವಾಕರ್,ಸುರೇಂದ್ರ, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ನಾಗರಾಜ್,ಇಲಾಖೆಯ ಗುರುಪ್ರಸಾದ್,ಗಿರೀಶ್,ಶ್ರೀನಿವಾಸಮೂರ್ತಿ, ಪ್ರಸಾದ್ ಮತ್ತಿತರರಿದ್ದರು.