ಮುಳಬಾಗಿಲು, ದುಬಾರಿ ಬೆಲೆಗೆ ಪಶು ಆಹಾರ ಮಾರಾಟ ಮಾಡುತ್ತಿರುವ ಖಾಸಗಿ ಅಂಗಡಿಗಳ ಬೆಲೆ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡಿ ಸಂಕಷ್ಟದಲ್ಲಿರುವ ಹೈನೋದ್ಯಮದ ರಕ್ಷಣೆಗೆ ನಿಲ್ಲಬೇಕೆಂದು ಆಗ್ರಹಿಸಿ ರೈತಸಂಘದಿoದ ಪಶು ಆಸ್ಪತ್ರೆ ಮುಂದೆ ಪ್ರತಿಭಟನೆ ಮಾಡಿ, ಸಹಾಯಕ ನಿರ್ದೇಶಕರ ಮೂಲಕ ಪಶು ಸಂಗೋಪನೆ ಹಾಗೂ ಪಶುಪಾಲನಾ ಇಲಾಖೆ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಅತಿವೃಷ್ಠಿ, ಪ್ರಕೃತಿ ವಿಕೋಪಗಳಿಂದ ಲಕ್ಷಾಂತರ ರೂಪಾಯಿ ಖಾಸಗಿ ಸಾಲ ಮಾಡಿ ಬೆಳೆದಿರುವ ರೈತರ ಬೆಳೆ ಕಣ್ಣ ಮುಂದೆಯೇ ನಾಶವಾಗಿ ಹಾಕಿದ ಬಂಡವಾಳ ಕೈಗೆ ಸಿಗದೆ ಖಾಸಗಿ ಸಾಲಕ್ಕೆ ಸಿಲುಕಿರುವ ಲಕ್ಷಾಂತರ ರೈತ ಕುಟುಂಬಗಳಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿರುವ ಹೈನೋದ್ಯಮ ಹಾಲು ಒಕ್ಕೂಟದ ನಿರ್ಲಕ್ಷö್ಯ ಖಾಸಗಿ ಪಶು ಆಹಾರ ದುಬಾರಿ ಬೆಲೆಗೆ ಮಾರಾಟ ಮಾಡುವ ಅಂಗಡಿ ಮಾಲೀಕರ ನಿರ್ಲಕ್ಷö್ಯಕ್ಕೆ ಹೈನೋದ್ಯಮವೂ ದಿನೇದಿನೇ ದುಬಾರಿಯಾಗಿ ಅದನ್ನೇ ನಂಬಿರುವ ಕುಟುಂಬಗಳು ಬೀದಿಗೆ ಬೀಳುವಂತಾಗಿವೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅಸಮಧಾನ ವ್ಯಕ್ತಪಡಿಸಿದರು.
ಹಾಲು ಒಕ್ಕೂಟ ರೈತರ ಉತ್ಪಾದನಾ ಹಾಲಿನ ಧರವನ್ನು ೧ ರೂಪಾಯಿ ಲೀಟರಿಗೆ ಏರಿಕೆ ಮಾಡಿದರೆ ಪಶು ಆಹಾರವಾದ ಹಿಂಡಿ ಬೂಸ, ಬೆಲೆಯನ್ನು ಖಾಸಗಿ ಅಂಗಡಿ ಮಾಲೀಕರು ಕಚ್ಚಾ ವಸ್ತುಗಳ ನೆಪದಲ್ಲಿ ೧೦೦ ರೂಪಾಯಿ ಪ್ರತಿ ಮೂಟೆ ಮೇಲೆ ಏರಿಕೆ ಮಾಡುವ ಮುಖಾಂತರ ಒಕ್ಕೂಟ ಕೊಟ್ಟ ೧ ರೂಪಾಯಿಗೆ ೧೦ರೂಪಾಯಿ ಕೈಯಿಂದ ಬಂಡವಾಳ ಹಾಕಬೇಕಾದ ಪರಿಸ್ಥಿತಿಯಿದೆ ಎಂದು ವಿವರಿಸಿದರು.
೧ ಲೀಟರ್ ಹಾಲು ರೈತ ಉತ್ಪಾದನೆ ಮಾಡಬೇಕಾದರೆ ಪಶು ಆಹಾರ, ಮೇವು ಸೇರಿದಂತೆ ಇನ್ನಿತರೆ ಖರ್ಚುಗಳು ೩೦ ರೂಪಾಯಿ ಪ್ರತಿ ಲೀಟರ್ಗೆ ಖರ್ಚು ಬರುತ್ತದೆ.
ಆದರೆ, ಒಕ್ಕೂಟ ನೀಡುವ ೨೮ ರೂಪಾಯಿ ಧರಕ್ಕೆ ಕೈಯಿಂದ ಇನ್ನೆರೆಡು ರೂಪಾಯಿ ಬಂಡವಾಳ ಹಾಕಿ ಹಾಲು ಉತ್ಪಾದನೆ ಮಾಡಬೇಕಾದ ಪರಿಸ್ಥಿತಿಯಿದೆ. ಇದರ ಜೊತೆಗೆ ಹಾಲು ಉತ್ಪಾದಕ ಕೇಂದ್ರಗಳಲ್ಲಿ ಗುಣಮಟ್ಟದ ಹೆಸರಿನಲ್ಲಿ ನೋ ಪೇಮೆಂಟ್, ಎಲ್ ಎಲ್ ಆರ್ ನೀಡುವ ಮುಖಾಂತರ ಅದರಲ್ಲೂ ರೈತರಿಗೆ ವಂಚನೆಯಾಗುತ್ತಿದೆ ಎಂದು ದೂರಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಖ್ ಪಾಷ ಮಾತನಾಡಿ, ಹಾಲು ಒಕ್ಕೂಟ ಜಿಲ್ಲೆಯ ಹೈನೋದ್ಯಮದ ಉಳಿವಿಗಾಗಿ ಲಕ್ಷಾಂತರ ರೈತ ಕುಟುಂಬಗಳ ರಕ್ಷಣೆಗಾಗಿ ದುಬಾರಿ ಪಶು ಆಹಾರ ಮಾರಾಟ ಮಾಡುವ ಖಾಸಗಿ ಅಂಗಡಿ ಮಾಲೀಕರ ಸಭೆ ಕರೆದು ಇಂಡಿ, ಬೂಸ ಬೆಲೆ ನಿಯಂತ್ರಣ ಮಾಡಿ ಇಲ್ಲವೇ ಒಕ್ಕೂಟದಿಂದ ಸಬ್ಸಿಡಿ ಧರದಲ್ಲಿ ಪಶು ಆಹಾರವನ್ನು ವಿತರಣೆ ಮಾಡುವ ಮುಖಾಂತರ ರೈತರ ರಕ್ಷಣೆಗೆ ನಿಲ್ಲದೇ ಇದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೈನೋದ್ಯಮವೇ ಕಣ್ಮರೆಯಾಗುವ ಕಾಲ ದೂರವಿಲ್ಲ. ಈ ಸಮಸ್ಯೆಯನ್ನು ಗಂಭೀರವಾಗಿ ಹಾಲು ಒಕ್ಕೂಟ, ಪಶು ಇಲಾಖೆ ಪರಿಗಣಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ನಿರ್ದೇಶಕರು ಅನುರಾಧ, ಖಾಸಗಿ ಅಂಗಡಿ ಮಾಲೀಕರ ಸಭೆ ಕರೆದು ದುಬಾರಿ ಬೆಲೆಗೆ ಪಶು ಆಹಾರವನ್ನು ಮಾರಾಟ ಮಾಡದಂತೆ ಆದೇಶ ಮಾಡುವ ಜೊತೆಗೆ ಹೆಚ್ಚಿನ ಬೆಲೆ ಮಾರಾಟ ಮಾಡಿದರೆ ಪರವಾನಗಿ ರದ್ದು ಮಾಡುವ ಎಚ್ಚರಿಕೆ ನೀಡುವುದಾಗಿ ಭರವಸೆ ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾಜ್ಯ ಕಾರ್ಯಾಧ್ಯಕ್ಷ ಬಂಗಾರಿ ಮಂಜು, ಜಿಲ್ಲಾ ಗೌರವಾಧ್ಯಕ್ಷ ವಿಶ್ವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ಪಾಲ್, ತಾಲೂಕು ಪ್ರಧಾನ ಕಾರ್ಯದರ್ಶಿ ರಾಜೇಶ್, ಗುರುಮೂರ್ತಿ, ಆನಂದ್ರೆಡ್ಡಿ, ಭಾಸ್ಕರ್, ಪದ್ಮಘಟ್ಟ ಧರ್ಮ, ಜುಬೇರ್ ಪಾಷ, ಆದಿಲ್ ಪಾಷ, ನಂಗಲಿ ನಾಗೇಶ್, ಯಾರಂಘಟ್ಟ ಗಿರೀಶ್ ಮುಂತಾದವರಿದ್ದರು.