ಕೆಜಿಎಫ್. ಕೋಲಾರ ಚಿನ್ನದ ಗಣಿ ಪ್ರದೇಶದ ಚಾಂಫೀಯನ್‌ರೀಫ್ಸ್ನಲ್ಲಿನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಶನಿವಾರದಂದು ಬೆಳಿಗ್ಗೆ ರಾಷ್ಟಿಯ ಐಕ್ಯತಾ ದಿನಾಚರಣೆಯನ್ನು ರಾಷ್ಟಿಯ ಐಕ್ಯತಾ ಸಪ್ತಾಹದ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕಾರದ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾ ಪೊಲೀಸ್ ಕಛೇರಿಯ ಮುಂಬಾಗ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ.ಧರಣೀದೇವಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟಿಯ ಐಕ್ಯತಾ ದಿನಾಚರಣೆಯ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ, ಜಾತಿ, ಧರ್ಮ, ಪ್ರದೇಶ, ಮತ ಅಥವಾ ಭಾಷೆಯ ಬೇದ ಭಾವವಿಲ್ಲದೇ ಭಾರತದ ಎಲ್ಲಾ ಜನತೆಯ ಭಾವೈಕ್ಯ ಮತ್ತು ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆಂದು ಪ್ರತಿಜ್ಞೆ ಮಾಡಿದರು. ಅಲ್ಲದೇ ವೈಯಕ್ತಿಕವಾಗಲೀ ಅಥವಾ ಸಾಮೂಹಿಕವಾಗಲೀ ನಮ್ಮಲ್ಲಿರುವ ಎಲ್ಲಾ ಬೇದ ಭಾವಗಳನ್ನು ಹಿಂಸಾಚಾರಕ್ಕೆ ಅವಕಾಶ ನೀಡದೆ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೇನೆಂದು ಸಹ ಪ್ರತಿಜ್ಞೆ ಮಾಡಲಾಯಿತು.
ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ನ. ೧೯ ರಿಂದ ೨೫ರವರೆಗೆ ರಾಷ್ಟಿಯ ಐಕ್ಯತಾ ಸಪ್ತಾಹವನ್ನು ಆಚರಿಸಲಾಗುತ್ತಿದೆ. ಏಳು ದಿನಗಳ ಕಾಲ ನಡೆಯುವ ರಾಷ್ಟಿಯ ಐಕ್ಯತಾ ಸಪ್ತಾಹದಲ್ಲಿ ದಿನಕ್ಕೊಂದು ದಿನಾಚರಣೆಯನ್ನಾಗಿ ಆಚರಿಸಲಾಗುವುದು. ಕ್ರಮವಾಗಿ ನ.೧೯ ರಿಂದ ರಾಷ್ಟಿಯ ಐಕ್ಯತಾ ದಿನ, ಅಲ್ಪಸಂಖ್ಯಾತರ ಕಲ್ಯಾಣ ದಿನ, ಭಾಷಾ ಸೌಹಾರ್ದತಾ ದಿನ, ದುರ್ಬಲ ವರ್ಗಗಳ ದಿನ, ಸಾಂಸ್ಕೃತಿಕ ಏಕತಾ ದಿನ, ಮಹಿಳಾ ದಿನ, ಪರಿಸರ ರಕ್ಷಣಾ ದಿನ ನಡೆಸಲಾಗುವುದು. ಮೊದಲ ದಿನವಾದ ಶುಕ್ರವಾರದಂದು ಪ್ರತಿಜ್ಞಾ ವಿಧಿ ಸ್ವೀಕಾರವನ್ನು ಹಮ್ಮಿಕೊಳ್ಳಲಾಗಿದೆಯೆಂದು ಎಸ್ಪಿ ಡಾ|| ಕೆ.ಧರಣೀದೇವಿ ಅವರು ವಿವರಿಸಿದರು.
ಪೊಲೀಸ್ ಇನ್ಸ್ಪೆಕ್ಟರ್ ಆರ್.ದಯಾನಂದ, ಸಹಾಯಕ ಆಡಳಿತಾಧಿಕಾರಿ ಜಿ.ವಿಶ್ವನಾಥ, ಶಾಖಾಧೀಕ್ಷಕ ಎಂ. ಮೂರ್ತಿ, ಎ.ನಜೀಮಾಬಾನು, ಎಎಸ್‌ಐ ವಿ.ಸೋಮಶೇಖರ್, ಮಧುಸೂಧನ, ಸೈಯದ್ ಮುಸ್ತಾಕ್ ಅಹ್ಮದ್, ಕೃಷ್ಣಮೂರ್ತಿ ಸೇರಿದಂತೆ ಜಿಲ್ಲಾ ಪೊಲೀಸ್ ಕಛೇರಿಯ ಅಧಿಕಾರಿ, ಲಿಪಿಕ ಸಿಬ್ಬಂದಿಗಳು ಹಾಜರಿದ್ದರು.