ಶೀಘ್ರದಲ್ಲಿ ಕೋಲಾರ ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ಸ್ಥಾಪನೆ – ಡಿ.ಎಸ್.ವೀರಯ್ಯ


ಕೋಲಾರ, ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ರಾಜ್ಯದ ಪ್ರಮುಖ ರಾಷ್ಟಿಯ ಹೆದ್ದಾರಿಗಳಲ್ಲಿ ಟ್ರಕ್ ಟರ್ಮಿನಲ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ಕೋಲಾರ ಜಿಲ್ಲೆಗೆ ವಿಸ್ತರಿಸಲು ಯೋಜಿಸಲಾಗಿದೆ ಎಂದು ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್‌ನ ಅಧ್ಯಕ್ಷರಾದ ಶ್ರೀ ಡಿ.ಎಸ್.ವೀರಯ್ಯ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟಿಯ ಹೆದ್ದಾರಿಗಳಲ್ಲಿ ದೂರ ಪ್ರಯಾಣಿಸುವ ಟ್ರಕ್‌ಗಳನ್ನು ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸುವುದರಿಂದ ಅಪಘಾತಗಳಿಗೆ ಕಾರಣವಾಗುವುದಲ್ಲದೆ, ಪರಿಸರ ಮಾಲಿನ್ಯ ಉಂಟು ಮಾಡುತ್ತಿದೆ. ಟ್ರಕ್‌ನ ಚಾಲಕರು ಹಾಗೂ ನಿರ್ವಾಹಕರುಗಳಿಗೆ ಸೂಕ್ತ ತಂಗುದಾಣಗಳು ಲಭ್ಯವಿಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಇದರ ನಿವಾರಣೆಗಾಗಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಹಾದು ಹೋಗುವ ರಾಷ್ಟಿಯ ಹೆದ್ದಾರಿಗಳಲ್ಲಿ ಟ್ರಕ್ ಟರ್ಮಿನಲ್‌ಗಳನ್ನು ಸ್ಥಾಪಿಸುವುದರಿಂದ ವಾಹನ ದಟ್ಟಣೆ ಮತ್ತು ಅಪಘಾತಗಳಿಗೆ ಕಡಿವಾಣ ಹಾಕಬಹುದು ಹಾಗೂ ಚಾಲಕರುಗಳಿಗೆ ವಿಶ್ರಾಂತಿ ಸ್ಥಳ, ಇಂಧನ ಮರುಪೂರಣ ಕೇಂದ್ರ, ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಆಹಾರ ಮಳಿಗೆಗಳು, ಎ.ಟಿ.ಎಂ ಮೊದಲಾದವುಗಳನ್ನು ಹೊಂದಿರುವ ಸುಸಜ್ಜಿತ ಟ್ರಕ್ ಟರ್ಮಿನಲ್‌ನ್ನು ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ. ಇದರಿಂದಾಗಿ ಸ್ಥಳೀಯ ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗ ದೊರೆತು ಟ್ರಕ್ ಟರ್ಮಿನಲ್‌ನ ಸುತ್ತಮುತ್ತಲ ಪ್ರದೇಶವು ಟೌನ್‌ಶಿಪ್ ಆಗುತ್ತದೆ ಎಂದು ತಿಳಿಸಿದರು.
ಈಗಾಗಲೇ ರಾಜ್ಯದ ೭ ಸ್ಥಳಗಳಲ್ಲಿ ಟ್ರಕ್ ಟರ್ಮಿನಲ್ಸ್ಗಳನ್ನು ಸ್ಥಾಪಿಸಲಾಗಿದೆ. ಶೀಘ್ರದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್‌ನ್ನು ಉದ್ಘಾಟಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಅದರ ಮುಂದಿನ ಭಾಗವಾಗಿ ಕೋಲಾರ ಜಿಲ್ಲೆಯಲ್ಲಿ ಅಂದಾಜು ೪೦ ಎಕರೆಗಳಷ್ಟು ಜಾಗದಲ್ಲಿ ಟ್ರಕ್ ಟರ್ಮಿನಲ್‌ನ್ನು ಸ್ಥಾಪಿಸಲು ಸರ್ಕಾರ ಯೋಜಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಈಗಾಗಲೇ ೪೦ ಎಕರೆಗಳ ಜಾಗಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಶೀಘ್ರವಾಗಿ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು ಕೆ.ಜಿ.ಎಫ್‌ನ ಕ್ಯಾಸಂಬಳ್ಳಿ ಬಳಿ ಹಾಗೂ ಬಂಗಾರಪೇಟೆ ತಾಲ್ಲೂಕಿನಲ್ಲಿನ ಸರ್ಕಾರಿ ಜಾಗವನ್ನು ಪರಿಶೀಲಿಸಿ ಟ್ರಕ್ ಟರ್ಮಿನಲ್‌ಗೆ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಿಕೊಟ್ಟಲ್ಲಿ ನಿಯಮಾವಳಿಗಳನ್ವಯ ಆ ಸ್ಥಳವನ್ನು ಟ್ರಕ್ ಟರ್ಮಿನಲ್ ಹೆಸರಿಗೆ ಹಸ್ತಾಂತರಿಸಲಾಗುವುದು. ಆದರಿಂದ ಈ ದಿನವೇ ಎರಡೂ ಸ್ಥಳಗಳನ್ನು ಪರಿಶೀಲಿಸಿ ವರದಿ ನೀಡಲಾಗುವುದು. ಆ ನಂತರ ಸರ್ಕಾರಕ್ಕೆ ಸೂಕ್ತವಾದ ಸ್ಥಳ ನಿರ್ಧಾರಣೆ ಮಾಡಿ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪ್ರೊಬೆಷನರಿ ಐ.ಎ.ಎಸ್ ವಿನಯ್, ಉಪ ವಿಭಾಗಾಧಿಕಾರಿ ವೆಂಕಟಲಕ್ಷಿö್ಮ, ಭೂದಾಖಲೆಗಳ ಇಲಾಖೆಯ ಅಧಿಕಾರಿ ಭಾಗ್ಯಮ್ಮ, ತಹಶೀಲ್ದಾರ್‌ಗಳಾದ ನಾಗರಾಜ್, ಶೋಭಿತಾ, ಸುಜಾತ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *