ಕೋಲಾರ, ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಆರಂಭಿಸಿದ್ದು, ಇಂದಿನಿoದ ಒಂದು ತಿಂಗಳ ಕಾಲ ಪ್ರತಿ ಮತಗಟ್ಟೆ ಅಧಿಕಾರಿ ತನ್ನ ವ್ಯಾಪ್ತಿಯ ಮನೆ ಮನೆಗೆ ಭೇಟಿ ನೀಡಿ, ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಭಾವಚಿತ್ರವುಳ್ಳ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ೨೦೨೩ ಕಾರ್ಯಕ್ರಮದ ಅನುಷ್ಠಾನ ಹಾಗೂ ನಿರ್ವಹಿಸುವ ಕಾರ್ಯ ಚಟುವಟಿಕೆಗಳ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿರ್ವಹಿಸಿದ ಮನ್ನಣೆ ಪಡೆದ ರಾಜಕೀಯ ಪಕ್ಷಗಳವರ ಸಭೆಯಲ್ಲಿ ಅವರು ಮತನಾಡಿದರು.
೨೦೨೩ರಲ್ಲಿ ಬರುವ ಸಾರ್ವತ್ರಿಕ ಚುನಾವಣೆಗಳ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ೨೦೨೩ ಆರಂಭವಾಗಿದೆ. ಮತದಾರ ಪಟ್ಟಿಯ ಪರಿಷ್ಕರಣೆಯಲ್ಲಿ ನಿಧನರಾದವರ, ಸ್ಥಳಾಂತರಗೊoಡವರ ಮತ್ತು ಬೇರೆ ಮತಕ್ಷೇತ್ರದ ಮತದಾರ ಪಟ್ಟಿಗೆ ಹೆಸರು ವರ್ಗಾಯಿಸಿಕೊಂಡಿರುವ ಕುರಿತು ಪರಿಶೀಲಿಸಲಾಗುತ್ತದೆ. ನಿಗದಿತ ನಮೂನೆಗಳಲ್ಲಿ ಮಾಹಿತಿ ತುಂಬಿ, ಮತದಾರ ಪಟ್ಟಿಗೆ ಸೇರ್ಪಡೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಈಗಾಗಲೇ ಮತದಾರನ ಮತದಾರ ಚೀಟಿಯ ಸಂಖ್ಯೆಗೆ ಆಧಾರ್ ಜೋಡಣೆ ಕಾರ್ಯ ಪ್ರಗತಿಯಲ್ಲಿದೆ. ಮತದಾರ ಚೀಟಿಗೆ ಆಧಾರ ಸಂಖ್ಯೆ ಜೋಡಣೆ ಮಾಡುವುದರಿಂದ ಮತದಾರನ ಹೆಸರು ಬೇರೆ ಮತದಾರ ಪಟ್ಟಿಯಲ್ಲಿ ನಕಲು ಆಗುವುದು ತಪ್ಪುತ್ತದೆ. ಪ್ರತಿ ಮತಗಟ್ಟೆ ಮಟ್ಟದ ಅಧಿಕಾರಿ ತನ್ನ ವ್ಯಾಪ್ತಿಯ ಪ್ರತಿ ಮನೆಗೆ ಭೇಟಿ ನೀಡಿ, ಪ್ರತಿ ಮತದಾನ ಕುರಿತು ಮಾಹಿತಿ ಸಂಗ್ರಹಿಸಿ, ಪರಿಷ್ಕರಿಸುತ್ತಾರೆ. ಆಧಾರ್ ಸಂಖ್ಯೆ ಜೋಡಣೆಗೆ ಕ್ರಮ ವಹಿಸುತ್ತಾರೆ. ಮತದಾರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಬೇಕೆಂದು ಅವರು ಹೇಳಿದರು.
೧೮ ವರ್ಷ ತುಂಬಿದ ಪ್ರತಿಯೊಬ್ಬ ವ್ಯಕ್ತಿ ಮತದಾರ ಪಟ್ಟಿಗೆ ತನ್ನ ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು. ವರ್ಷದಲ್ಲಿ ನಾಲ್ಕು ಸಲ ಮತದಾರ ಪಟ್ಟಿಗೆ ಹೆಸರು ಸೇರ್ಪಡೆಗೆ ಕೇಂದ್ರ ಚುನಾವಣಾ ಆಯೋಗ ಅವಕಾಶ ನೀಡಿದೆ. ಸದೃಢ ಪ್ರಜಾಪ್ರಭುತ್ವ ಸ್ಥಾಪಿಸಲು ಮತದಾರ, ಮತದಾನ ಮುಖ್ಯವಾಗಿರುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪ್ರಕಟಣೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು.
ಈ ಸಂದರ್ಭದಲ್ಲಿ ಚುನಾವಣಾ ತಹಶೀಲ್ದಾರ್ ನಾಗವೇಣಿ.ಬಿ, ಚುನಾವಣೆ ಶಾಖೆಯ ಮಂಜುಳಾ ಭಾರ್ಗವಿ.ಕೆ.ಎನ್, ಗೌತಮ್.ಪಿ, ಮನ್ನಣೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.