ಸರ್ಕಾರದಿಂದ ಸಿಗುವ ಸಾಲ ಸೌಲಭ್ಯಗಳನ್ನು ಪಡೆಯಿರಿ – ಹೆಚ್.ನಾಗೇಶ್


ಕೋಲಾರ, ಸಮಾಜದಲ್ಲಿ ಹಿಂದಿರುವ ಜನಾಂಗದವರು ಮುಂದಕ್ಕೆ ಬರಲು ಸರ್ಕಾರದಿಂದ ಸಿಗುವ ಸಾಲ ಸೌಲಭ್ಯಗಳನ್ನು ಪಡೆಯಬೇಕು ಎಂದು ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಮುಳಬಾಗಿಲು ವಿಧಾನಸಭಾ ಕ್ಷೇತ್ರ ಶಾಸಕರಾದ ಹೆಚ್.ನಾಗೇಶ್ ಅವರು ತಿಳಿಸಿದರು.
ಇಂದು ಕೋಲಾರ ಹೊರವಲಯದ, ಟಮಕ, ಗದ್ದೆಕಣ್ಣೂರು ರಸ್ತೆ ಇಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ, ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ
ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕೋಲಾರ ಜಿಲ್ಲಾ ವ್ಯವಸ್ಥಾಪಕರ ನೂತನ ಕಛೇರಿ ಕಟ್ಟಡ ನಿರ್ಮಾಣದ ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ ಇರುವ ೩೦ ಜಿಲ್ಲೆಗಳಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮವು ಕಾರ್ಯನಿರ್ವಹಿಸುತ್ತಿದ್ದು, ಎಲ್ಲವೂ ಬಾಡಿಗೆ ಕಟ್ಟಡದಲ್ಲಿದೆ. ಕೋಲಾರ ಜಿಲ್ಲೆಯಲ್ಲಿ ನೂತನ ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಕಚೇರಿಯು ಮುಂದಿನ ದಿನಗಳಲ್ಲಿ ತಲೆಯೆತ್ತಲಿದ್ದು, ಈ ನಿಗಮದಿಂದ ಸಿಗುವಂತಹ ಎಲ್ಲಾ ರೀತಿಯ ಸೌಲಭ್ಯಗಳನ್ನು ಫಲಾನುಭವಿಗಳು ಪಡೆಯಬೇಕು. ಫಲಾನುಭವಿಗಳಿಗೆ ಯಾವುದೇ ವಿಳಂಬವಿಲ್ಲದೆ ಡಿಬಿಟಿ ಮುಖಾಂತರ ಅವರ ಖಾತೆಗಳಿಗೆ ನೇರವಾಗಿ ಸಾಲದ ಹಣ ಪಾವತಿಯಾಗುತ್ತದೆ. ಇದರಿಂದ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬಹುದು. ಘನ ಸರ್ಕಾರವು ನೂರು ಕೋಟಿ ಅನುದಾನವನ್ನು ಈ ವರ್ಷದಲ್ಲಿ ನೀಡಿದ್ದು, ಈ ಅನುದಾನದಲ್ಲಿ ರಾಜ್ಯದ ಎಲ್ಲಾ ತಾಲ್ಲೂಕುಗಳಿಗೂ ಸಹ ಸಮಾನವಾಗಿ ನೀಡಿದೆ. ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ವತಿಯಿಂದ ಅನೇಕ ರೀತಿಯ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ. ಹೊಸದಾಗಿ ದ್ವಿಚಕ್ರ ವಾಹನ ಸೌಲಭ್ಯ ಲಭ್ಯವಿದ್ದು, ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಯುವಕರು ಸ್ವಿಗ್ಗಿ, ಫ್ಲಿಪ್‌ಕಾರ್ಟ್, ಮುಂತಾದವುಗಳಲ್ಲಿ ಕೆಲಸ ಮಾಡಲು ಈ ದ್ವಿಚಕ್ರ ವಾಹನವೂ ಸಹಾಯವಾಗುತ್ತದೆ. ನಿಗಮದಿಂದ ಸಿಗುವ ಸಾಲ ಸೌಲಭ್ಯಗಳನ್ನು ಫಲಾನುಭವಿಗಳು ಪಡೆಯಲು ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಅವರು ತಿಳಿಸಿದರು.
ವಿಧಾನಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್ ಅವರು ಮಾತನಾಡಿ
ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಾರ್ಯಚಟುವಟಿಕೆ ನಿರ್ವಹಿಸಲು ಒಂದು ಸುಸಜ್ಜಿತ ಕಟ್ಟಡ ಇರಬೇಕು. ದೇಶದಲ್ಲಿ ಎರಡನೇ ಅತಿಹೆಚ್ಚು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರು ಇರುವುದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ. ಅವರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಸಮಯಕ್ಕೆ ತಕ್ಕಂತೆ ಅಧಿಕಾರಿಗಳು ನೀಡಬೇಕು. ಈ ಭಾಗದಲ್ಲಿ ಕಟ್ಟಡವನ್ನು ನಿರ್ಮಿಸುವುದರಿಂದ ಈ ಕಟ್ಟಡದ ಹತ್ತಿರವೇ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಇರುವುದರಿಂದ ಜನರು ತಮ್ಮ ಕಚೇರಿ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ.ಸುರೇಶ್ ಕುಮಾರ್ ಅವರು ಮಾತನಾಡಿ, ರಾಜ್ಯದಲ್ಲಿ ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ರಾಜ್ಯದಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ೭ ನಿವೇಶನಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಯಲ್ಲೂ ಸಹ ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಕಚೇರಿಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ||ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸಿಗುವಂತಹ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆ, ಸಮೃದ್ಧಿ ಯೋಜನೆಯಡಿ ಫಲಾನುಭವಿಗಳಿಗೆ ಸ್ಥಳದಲ್ಲೇ ಸಾಲ ಸೌಲಭ್ಯವನ್ನು ಸಬ್ಸಿಡಿ ದರದಲ್ಲಿ ಚೆಕ್ ವಿತರಿಸಿದರು ಮತ್ತು ಐರಾವತ ಯೋಜನೆಯಡಿ ಕಾರ್‌ನ ಕೀಯನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ಕೆ.ಆರ್.ಐ.ಡಿ.ಎಲ್ ಕಾರ್ಯಪಾಲಕ ಅಭಿಯಂತರರಾದ ಸೈಯದ್ ಮುನೀರ್ ಅಹಮದ್, ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಟೆರೆನ್ಸ್ ಫ್ರಾನ್ಸಿಸ್, ಹೊನ್ನೇನಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ವೆಂಕಟೇಶಪ್ಪ, ಬುದ್ಧ ಗುರುಗಳಾದ ಅನಿರುದ್ಧ್ ಬಂಡೆ.ಜಿ, ಸಮುದಾಯದ ಮುಖಂಡರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *