ಕೋಲಾರ, ಭಾರತಕ್ಕೆ ಸ್ವಾತಂತ್ರ ತರುವುದಲ್ಲಿ ಮುಖ್ಯ ಪಾತ್ರವಹಿಸಿದ ಮಹಾತ್ಮ ಗಾಂಧೀಜಿಯವರ ಜಯಂತಿ ಅಂಗವಾಗಿ ಅಕ್ಟೋಬರ್ ೨ ರಂದು ಜಿಲ್ಲಾ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದ್ದು, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರವನ್ನು ಯಶ್ವಸಿಗೊಳಿಸಬೇಕು ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್.ಮುನಿಸ್ವಾಮಿ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಆಜಾದಿ ಕಾ ಅಮೃತ ಮಹೋತ್ಸವ ಮತ್ತು ಅಕ್ಟೋಬರ್ ೨ ರಂದು ಆಚರಿಸಲಿರುವ ಗಾಂಧಿ ಜಯಂತಿ ಅಂಗವಾಗಿ ಕೋಲಾರ ಜಿಲ್ಲೆಯಲ್ಲಿ ಬೃಹತ್ ರಕ್ತದಾನ ಶಿಬಿರದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರತಿ ತಿಂಗಳು ೧೫೦೦ ಯೂನಿಟ್ ರಕ್ತವನ್ನು ಸಂಗ್ರಹಿಸಿದಲ್ಲಿ ಜಿಲ್ಲೆಯಲ್ಲಿ ಯಾವುದೇ ಆಸ್ಪತ್ರೆಯಲ್ಲಿ ರಕ್ತದ ಕೊರತೆ ಉಂಟಾಗುವುದಿಲ್ಲ, ಸಾರ್ವಜನಿಕರಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸಬೇಕು. ಸಂಗ್ರಹವಾದ ರಕ್ತವೂ ವ್ಯರ್ಥವಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ರಕ್ತದಾನದ ಶಿಬಿರದಲ್ಲಿ ವಿದ್ಯುತ್ ನಿರಂತರವಾಗಿ ಪೂರೈಕೆ ಆಗಬೇಕು. ಯುವ ಜನತೆಯು ರಕ್ತದಾನ ಮಾಡಲು ಮುಂದಾಗಬೇಕು. ಖಾಸಗಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಹಾಗೂ ಸರ್ಕಾರಿ ನೌಕರರು ಸಹ ರಕ್ತದಾನವನ್ನು ಮಾಡಬೇಕು. ೧೮ ರಿಂದ ೬೦ ವರ್ಷದೊಳಗಿನ ಆರೋಗ್ಯವಂತರು ರಕ್ತದಾನವನ್ನು ಮಾಡಬಹುದು. ಖಾಸಗಿ ಕಂಪನಿಗಳಲ್ಲಿ ಹಾಗೂ ಗ್ರಾಮಗಳಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸಬೇಕು. ರಕ್ತದಾನ ಮಾಡುವುದರಲ್ಲಿ ಕೋಲಾರ ಜಿಲ್ಲೆಯು ಪ್ರಥಮ ಸ್ಥಾನದಲ್ಲಿರಬೇಕು. ಈ ಶಿಬಿರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಎಲ್ಲಾ ಇಲಾಖೆಗಳಲ್ಲಿರುವ ಯೋಜನೆಗಳ ಬಗ್ಗೆ ತಿಳಿಸುವ ಮಳಿಗೆಗಳನ್ನು ಹಾಕಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ, ಗಾಂಧಿ ಜಯಂತಿಯನ್ನು ಅರ್ಧಪೂರ್ಣವಾಗಿ ಆಚರಿಸಲು ಈ ರಕ್ತದಾನ ಶಿಬಿರ ಉತ್ತಮ ವಿಧಾನವಾಗಿದೆ. ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲಾ ಅಧಿಕಾರಿಗಳ ಸಹಕಾರ ಮುಖ್ಯ. ಎಲ್ಲರೂ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಜಗದೀಶ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.