ಆಶ್ವಯುಜ ಶುಕ್ಲ ಪಾಡ್ಯದಿಂದ ನವಮಿಯವರೆಗೆ ನಡೆಯುವ ನಾಡಹಬ್ಬವೇ ʼನವರಾತ್ರಿʼ. ಈ ಹಬ್ಬವನ್ನು ಭಾರತದ ಬೇರೆ-ಬೇರೆ ಪ್ರಾಂತ್ಯಗಳಲ್ಲಿ ʼದುರ್ಗಾಪೂಜಾ, ರಾಮಲೀಲಾ, ದೇವೀಪೂಜಾ, ನಾಡಹಬ್ಬʼ ಮುಂತಾದ ಹೆಸರುಗಳಿಂದ ಆಚರಿಸುತ್ತಾರೆ.
“ಕಲೌದುರ್ಗಾ ವಿನಾಯಕೌ”
ಕಲಿಯುಗದಲ್ಲಿ ಮಾನವರ ಮನೋಭಿಲಾಷೆಗಳನ್ನು ಅತಿ ಬೇಗ ಈಡೇರಿಸುವ ದೇವತೆಗಳೆಂದರೆ ʼದುರ್ಗಾʼ ಮತ್ತು ʼಗಣಪತಿʼ. ಈ ತಾಯಿ ಮತ್ತು ಮಗ ʼಸಿದ್ಧಿʼ ಹಾಗೂ ʼಬುದ್ಧಿʼದಾಯಕರು. ಕೆಲವೇ ದಿನಗಳ ಹಿಂದೆ ನಾವು ಗಣೇಶೋತ್ಸವವನ್ನು ಉತ್ಸಾಹದಿಂದ ಆಚರಿಸಿ, ನವಸ್ಫೂರ್ತಿ ಪಡೆದಿರುತ್ತೇವೆ. ಮಳೆಗಾಲ ಮುಗಿದು, ಕಾರ್ಮೋಡ ಕರಗಿ, ಶರದಭ್ರ ರಾರಾಜಿಸುತ್ತಿರುತ್ತದೆ. ಭೂದೇವಿ ಸುಜಲ, ಸುಫಲ, ಸಸ್ಯಶ್ಯಾಮಲೆಯಾಗಿ ಕಂಗೊಳಿಸುತ್ತಿರುತ್ತಾಳೆ. ಪೈರುಗಳು ತೆನೆ ಮೂಡಿ ನಿಂತು ʼಭೂದೇವಿಗೆ ನಮೋʼ ಎಂದು ನಮಿಸುತ್ತಿರುತ್ತವೆ. ಪ್ರಕೃತಿಯ ವಿಶಿಷ್ಟ ಶಕ್ತಿಗೆ ಬೆರಗಾದ ಮಾನವ ಆ ಶಕ್ತಿಯಲ್ಲಿ ಭಕ್ತಿಯನ್ನಿಟ್ಟು, ನವೋತ್ಸಾಹದಿಂದ ನವದಿನಗಳ ಕಾಲ ಆಚರಿಸುವ ದೇವಿಯ ಉತ್ಸವವೇ ʼನವರಾತ್ರಿʼ.
ವೇದ ಕಾಲದಲ್ಲಿ
ಈ ಶಕ್ತಿಯ ಆರಾಧನೆ ವೇದಕಾಲದಿಂದಲೂ ನಡೆದು ಬಂದಿದೆ. ಋಗ್ವೇದದ 10ನೇ ಮಂಡಲದಲ್ಲಿರುವ ʼದೇವೀಸೂಕ್ತ, ರಾತ್ರಿ ಸೂಕ್ತಗಳುʼ ದೇವಿಯ ಮಹಾತ್ಮ್ಯೆಯನ್ನು ಸಾರುತ್ತವೆ. ಆ ಸೂಕ್ತದಂತೆ ದೇವಿಯೇ ಸಮಸ್ತ ದೇವತೆಗಳ ರೂಪದಿಂದ ಸಂಚರಿಸುತ್ತಾಳೆ. ಅವಳೇ ಭಕ್ತರಿಗೆ ಧನ-ಕನಕಗಳನ್ನು ಅನುಗ್ರಹಿಸುತ್ತಾಳೆ. ರುದ್ರನೂ ಕೂಡ ದುಷ್ಟರನ್ನು ಸಂಹರಿಸುವಾಗ ದೇವಿಯೇ ಅವನ ಧನುಸ್ಸಿನಲ್ಲಿ ನೆಲೆಸಿರುತ್ತಾಳೆ. ಅವಳೇ ಲೋಕವನ್ನು ಸೃಷ್ಟಿಸುತ್ತಾ ತನ್ನ ಮಹಿಮೆಯನ್ನು ತೋರಿಸಿದ್ದಾಳೆ.
ಪುರಾಣ ಕಾಲದಲ್ಲಿ
ಮಾರ್ಕಂಡೇಯ ಪುರಾಣದಲ್ಲಿ 13 ಅಧ್ಯಾಯಗಳಲ್ಲಿ 700 ಶ್ಲೋಕಗಳಲ್ಲಿ ʼದೇವೀ ಮಹಾತ್ಮೆʼಯನ್ನು ವರ್ಣಿಸಲಾಗಿದೆ. ಇದನ್ನೇ ʼದುರ್ಗಾಸಪ್ತಶತಿʼ ಎಂದೂ ಕರೆಯಲಾಗುತ್ತದೆ. ಇದು ಪುರಾಣದ ಒಂದು ಭಾಗವಾಗಿದ್ದರೂ, ʼಮಂತ್ರಶಾಸ್ತ್ರʼವೆಂದು – ʼಕಾತ್ಯಾಯನೀತಂತ್ರʼವೇ ಮುಂತಾದ ʼತಂತ್ರಶಾಸ್ತ್ರʼ ಗ್ರಂಥಗಳಲ್ಲಿ ಹೇಳಿದೆ. ಮಂತ್ರಕ್ಕೂ-ದೇವಿಗೂ ಯಾವ ಭೇದವೂ ಇಲ್ಲ. ಶರಣಾಗತದೀನಾರ್ತ ಪರಿತ್ರಾಣ ಪರಾಯಣಳಾದ ದೇವಿಯನ್ನು ಸುಖ-ಸಂಪತ್ ಪ್ರಾಪ್ತಿಗಾಗಿ, ವಿಪತ್ತು ದೂರವಾಗುವುದಕ್ಕಾಗಿ ಪಾರಾಯಣ ಮಾಡುತ್ತಾರೆ. ಇದಲ್ಲದೆ ದೇವೀಭಾಗವತ, ಲಲಿತಾಸಹಸ್ರನಾಮಗಳಲ್ಲಿ ದೇವಿಯ ಮಹಿಮೆಯನ್ನು ವಿಧವಿಧವಾಗಿ ವರ್ಣಿಸಲಾಗಿದೆ.
ನವದುರ್ಗಾ ಪೂಜಾ
ಶರತ್ಕಾಲಾರಂಭದ ಈ ಸಂದರ್ಭದಲ್ಲಿ ದುಷ್ಟಶಕ್ತಿಯ ಪೀಡಾ ನಿವಾರಣೆಗಾಗಿ ಬ್ರಹ್ಮ, ವಿಷ್ಣು, ಮಹೇಶ್ವರರ ಹಾಗೂ ದೇವತೆಗಳ ತೇಜಸ್ಸಿನಿಂದ ಉದ್ಭವಿಸಿದ ಮತ್ತು ದೇವತೆಗಳ ವಿವಿಧ ಆಯುಧ ಪಡೆದ, ದೈತ್ಯ ಸಂಹಾರಿಣಿಯನ್ನು, ಒಂದೊಂದು ದಿನ, ಒಂದೊಂದು ಹೆಸರಿನಿಂದ ಪೂಜಿಸಲಾಗುತ್ತದೆ. ʼಮಧು-ಕೈಟಭʼರನ್ನು ಕೊಂದ ಮಹಾಕಾಳಿ; ನಂದನ ಪುತ್ರಿಯೂ, ಕಂಸನ ಮರಣ ಸೂಚಕಳೂ ಆದ ನಂದಾ; ಭಯಂಕರ ರಾಕ್ಷಸ ಸಂಹಾರಿಣಿಯಾದ ರಕ್ತದಂತಿಕಾ, ಕ್ಷಾಮನಿವಾರಕಳಾದ ಶಾಕಾಂಬರೀ; ದುರ್ಗನೆಂಬ ರಾಕ್ಷಸನನ್ನು ಕೊಂದ ದುರ್ಗಾ; ಅರುಣನೆಂಬ ರಾಕ್ಷಸನನ್ನು ಕೊಂದ ಭ್ರಾಮರೀ; ಮುಂತಾದ ನವದುರ್ಗೆಯರನ್ನು ʼನವದಿನʼಗಳಲ್ಲಿ ʼನವೋತ್ಸಾಹʼದಿಂದ ಪೂಜಿಸಲಾಗುತ್ತದೆ. ಈ ದಿನಗಳಲ್ಲಿ ಭಕ್ತನು ನಕ್ತ, ಏಕಭುಕ್ತ, ಉಪವಾಸ, ಅಯಾಚಿತ, ಇವುಗಳಲ್ಲಿ ಯಾವುದಾದರೊಂದು ನಿಯಮದಿಂದಿರಬೇಕು.
ಕುಮಾರಿಕಾ ಪೂಜಾ
ದೇವೀ ಆರಾಧನೆಯ ಅಂಗವಾಗಿ ಎರಡರಿಂದ ಹತ್ತುವರ್ಷಗಳ ಒಳಗಿನ ಕನ್ಯೆಯರನ್ನು ʼಕುಮಾರಿ, ತ್ರಿಮೂರ್ತಿ, ಕಲ್ಯಾಣಿ, ರೋಹಿಣಿ, ಕಾಶಿ, ಚಂಡಿಕೆ, ಶಾಂಭವೀ, ದುರ್ಗಾ, ಸುಭದ್ರಾʼ ಎಂಬ ಹೆಸರಿನಿಂದ ಕ್ರಮವಾಗಿ ಈ 9 ದಿನಗಳಲ್ಲಿ, ಏಕೋತ್ತರ ವೃದ್ಧಿಯಿಂದ ಪೂಜಿಸಬೇಕು. ಅವರನ್ನು ಫಲ-ಪುಷ್ಪ, ಭಕ್ಷ್ಯ, ಭೋಜ್ಯಾದಿಗಳಿಂದ ತೃಪ್ತಿಪಡಿಸಬೇಕು. ಇದರಿಂದ ದೇವಿ ತೃಪ್ತಳಾಗುತ್ತಾಳೆ.
ನವರಾತ್ರಿಯ ಮೊದಲ ಮೂರು ದಿನ ಮಹಾಕಾಳಿ ಅಥವಾ ದುರ್ಗೆಯನ್ನೂ, ಆನಂತರದ ಮೂರು ದಿನ ಮಹಾಲಕ್ಷ್ಮಿಯನ್ನೂ, ಕೊನೆಯ ಮೂರು ದಿನ ಮಹಾಸರಸ್ವತಿಯನ್ನೂ ಪೂಜಿಸಲಾಗುವುದು.
ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ | ಶರಣ್ಯೇತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ || ರೂಪಂದೇಹಿ ಜಯಂದೇಹಿ ಯಶೋದೇಹಿ ದ್ವಿಷೋಜಹಿ | ದೇಹಿ ಸೌಭಾಗ್ಯ ಮಾರೋಗ್ಯಂ ದೇಹಿ ದೇವಿ ಪರಂಸುಖಂ || ಪತ್ನೀಂಮನೋರಮಾಂ ದೇಹಿ ಮನೋವೃತ್ತಾನುಸಾರಿಣೀಮ್ | ವಿದ್ಯಾವಂತಂ ಯಶಸ್ವಂತಂ ಲಕ್ಷ್ಮೀವಂತಂ ಜನಂ ಕುರು ||
ಅರ್ಥಪೂರ್ಣವಾದ ಪ್ರಾರ್ಥನಾ ಶ್ಲೋಕಗಳಿಂದ ದೇವಿಯಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಾರ್ಥಿಸಿಕೊಳ್ಳಲಾಗುವುದು.
ನವರಾತ್ರಿಯ ಅಂತರಂಗ
ಇಲ್ಲಿ ಮಹಾಕಾಳಿಯು ತಾಮಸ ಗುಣಕ್ಕೂ, ಮಹಾಲಕ್ಷ್ಮಿಯು ರಾಜಸ ಗುಣಕ್ಕೂ, ಮಹಾಸರಸ್ವತಿಯು ಸಾತ್ವಿಕ ಗುಣಕ್ಕೂ ಸಂಕೇತವಾಗಿದ್ದಾರೆ. ನವರಾತ್ರಿ ಆಚರಿಸುವ ಆಸ್ತಿಕರು ತಾಮಸದಿಂದ ರಾಜಸದೆಡೆಗೆ, ರಾಜಸದಿಂದ ಸಾತ್ವಿಕದೆಡೆಗೆ ಬಂದಾಗ ಹಬ್ಬದ ಆಚರಣೆ ಹೆಚ್ಚು ಅರ್ಥಪೂರ್ಣವಾಗುತ್ತದೆ. ನಮ್ಮ ಅಂತರಂಗದಲ್ಲಿ ಹುದುಗಿರುವ ತಾಮಸ, ರಾಜಸ ಗುಣಗಳ ಮೇಲೆ ಸಾತ್ವಿಕ ಗುಣಕ್ಕೆ ಜಯ ಲಭಿಸಿದಾಗ ಆಚರಿಸುವುದೇ ʼವಿಜಯದಶಮಿʼ; ಆಗಲೇ ನಮ್ಮ ವಿದ್ಯೆ ಪರಿಪೂರ್ಣವಾಗುವುದರಿಂದು ಅದು ʼವಿದ್ಯಾದಶಮಿʼಯೂ ಹೌದು, ವಿಜಯದಶಮಿಯೂ ಹೌದು. ನಮ್ಮಲ್ಲಿ ಹುದುಗಿರುವ ಕಾಮ-ಕ್ರೋಧ, ಲೋಭ-ಮೋಹ, ಮದ-ಮಾತ್ಸರ್ಯಗಳೆಂಬ ಷಡ್ವೈರಿಗಳೇ, ಮಹಿಷಾಸುರ, ರಕ್ತಬೀಜಾಸುರ, ಮುಂತಾದ ಭಯಂಕರ ರಾಕ್ಷಸರುಗಳು. ನಮ್ಮಲ್ಲಿ ಸುಪ್ತವಾಗಿರುವ ಆತ್ಮಶಕ್ತಿಯೇ ʼಶ್ರೀದೇವಿʼ. ಈ ಆತ್ಮಶಕ್ತಿಯನ್ನು ಸಾಧನೆಗಳಿಂದ ಜಾಗೃತಗೊಳಿಸಿ, ಕಾಮಾದಿ ಷಡ್ವೈರಿಗಳನ್ನು ಗೆಲ್ಲಲು ಬಳಸಿ, ವಿಜಯ ಸಾಧಿಸಿದರೆ ಮಾನವನು ಭವಬಂಧನದಿಂದ ಮುಕ್ತನಾಗಿ ಸಿದ್ಧ-ಬುದ್ಧನಾಗಬಲ್ಲ. ದುಷ್ಟಶಕ್ತಿಯು ಶಿಷ್ಟಶಕ್ತಿಯನ್ನು ತುಳಿಯಲೆತ್ನಿಸಿದಾಗ, ಸಾಧನೆ-ಸಾಹಸಗಳ ಮೂಲಕ ಹೋರಾಟ ನಡೆಸಿದರೆ, ಶಿಷ್ಟ ಶಕ್ತಿಗೆ ಜಯ ಖಚಿತ; ಎಂಬುವುದೇ ನವರಾತ್ರಿಯ ಸಂದೇಶ.
ಆಚರಣೆಯ ವಿಧಾನ
ಗಂಡಸರು, ಹೆಂಗಸರು, ಮಕ್ಕಳು ಎಲ್ಲರೂ ಈ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಸಾಲಂಕೃತವಾದ ವೇದಿಕೆಯಲ್ಲಿ ʼಶ್ರೀದೇವಿಯ ಮೂರ್ತಿʼಯನ್ನು ಪ್ರತಿಷ್ಠಾಪಿಸಿ, ಅಲಂಕರಿಸಿ, ಆರಾಧಿಸಿ, ನವರಾತ್ರಿ ಕಳೆದ ನಂತರ ವಿಧಿಯುಕ್ತವಾಗಿ ನದಿಯಲ್ಲಿ ಪ್ರತಿಮೆಯನ್ನು ವಿಸರ್ಜಿಸಲಾಗುತ್ತದೆ. ಅಲ್ಲದೆ ಮನೆ ಮನೆಯಲ್ಲಿ ನಾನಾ ವಿಧದ ಬೊಂಬೆಗಳನ್ನು ಪ್ರದರ್ಶಿಸಲಾಗುತ್ತದೆ. ಕರ್ನಾಟಕ, ಪಶ್ಚಿಮಬಂಗಾಳ, ಅಸ್ಸಾಂ, ಬಿಹಾರ, ಒರಿಸ್ಸಾ, ಮುಂತಾದ ರಾಜ್ಯಗಳಲ್ಲಿ ಈ ಹಬ್ಬವನ್ನು ʼನಾಡಹಬ್ಬʼದ ರೀತಿಯಲ್ಲಿ ಆಚರಿಸಲಾಗುತ್ತದೆ. ಕೆಲವೆಡೆ 7 ನೇ ದಿನದಿಂದ 9 ನೇ ದಿನದವರೆಗೆ ಮೂರು ದಿನ ಪುಸ್ತಕಗಳನ್ನು ಇಟ್ಟು ಈ ಮೂರು ದಿನ ʼಸರಸ್ವತಿ ಪೂಜೆʼಯನ್ನು ನಡೆಸುತ್ತಾರೆ. ನವಮೀ ದಿನ ಆಯುಧ, ವಾಹನಾದಿಗಳನ್ನು ಪೂಜಿಸಲಾಗುವುದು.
ಮುತ್ತೈದೆಯರ ಅಥವಾ ಸುಮಂಗಲಿಯರ ಪೂಜೆ
ಈ ಹಬ್ಬ ʼತಾಯಿ – ದುರ್ಗೆʼ ತವರು ಮನೆಗೆ ಮರಳುವುದರ ಸೂಚಕವೂ ಹೌದು. ತನ್ನ ಮಗಳು ಉಮೆಯನ್ನು ಶಿವನಿಗೆ ಕೊಟ್ಟು, ಹಿಮವಂತ ವಿವಾಹ ಮಾಡಿದ. ಮದುವೆಯಾದ ಬಳಿಕ ಶಿವ ತನ್ನ ಪತ್ನಿಗೆ ವರ್ಷದಲ್ಲಿ 10 ದಿನ ಮಾತ್ರ ತವರು ಮನೆಗೆ ತೆರಳಲು ಅನುಮತಿಸಿದನಂತೆ. ಅದರ ಸೂಚನೆಗಾಗಿಯೋ ಎಂಬಂತೆ, ಈಗಲೂ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಆಮಂತ್ರಿಸಿ, ಮುತ್ತೈದೆ ಅಥವಾ ಸುಮಂಗಲಿಯಾಗಲೆಂದು ಪೂಜಿಸಿ, ಗೌರವಿಸುವುದು ವಾಡಿಕೆ.
ಮೈಸೂರು ದಸರಾ ಜಗತ್ಪ್ರಸಿದ್ಧ, ಆದ್ದರಿಂದ ಕರ್ನಾಟಕದಲ್ಲೆಲ್ಲಾ ಇದನ್ನು ʼನಾಡಹಬ್ಬʼವೆಂದು ಆಚರಿಸುತ್ತಾರೆ. ʼನಾಡು-ನುಡಿ-ಸಂಸ್ಕೃತಿʼಗಳಿಗೆ ಸಂಬಂಧಿಸಿದ ಕಲೆ, ನೃತ್ಯ, ನಾಟಕ, ಉಪನ್ಯಾಸ, ಭಾವಗೀತೆ ಮುಂತಾದವುಗಳ ಮೂಲಕ ನಾಡಿನ ಜನತೆಗೆ ನಾಡಿನ ʼಹಿರಿಮೆ-ಗರಿಮೆ-ಮಹಿಮೆʼಗಳನ್ನು ಪರಿಚಯಿಸುವ ಕಾರ್ಯ ಶ್ಲಾಘನೀಯವಾದುದು. ಈ ಶರದುತ್ಸವ ನಾಡಹಬ್ಬಕೆಕ ಸೂಕ್ತಕಾಲ. ನಾಡಿನ ಕವಿಗಳು, ಕಲಾವಿದರು, ದಾರ್ಶನಿಕರು, ಮುಂತಾದವರ ಬಗ್ಗೆ ಜನರಿಗೆ ಅರಿವು ಮೂಡಿಸಿ, ನಾಡಿನ ವಿಜಯ ವೈಜಯಂತಿಯನ್ನು ಹಾರಿಸುವಂತಾದಾಗ ನವರಾತ್ರಿ – ನವೋತ್ಸಾಹವನ್ನು ತುಂಬುತ್ತದೆ.
ವಿಜಯದಶಮಿ
ಶಮೀ ಶಮಯತೇ ಪಾಪಂ, ಶಮೀ ಶತ್ರು ನಿವಾರಿಣೀ |
ಅರ್ಜುನಸ್ಯ ಧನುರ್ಧಾರಿಣೀ, ರಾಮಸ್ಯ ಪ್ರಿಯಕಾರಿಣೀ ||
“ಓ ಶಮೀ ವೃಕ್ಷವೇ! ನೀನು ಶ್ರೀರಾಮನಿಂದ ಪೂಜಿಸಲ್ಪಟ್ಟು, ಶ್ಲಾಘನೆಗೆ ಪಾತ್ರವಾಗಿರುವೆ. ಅಜ್ಞಾನವಾಸ ಕಾಲದಲ್ಲಿ ಅರ್ಜುನನ ಧನುಸ್ಸನ್ನು ಧರಿಸಿ, ಮುಂದೆ ಜಯ ತಂದುಕೊಟ್ಟಿರುವೆ. ಪಾಪವನ್ನೂ, ಶತ್ರು ಬಾಧೆಯನ್ನೂ ನಿವಾರಿಸುವ ನೀನು ನನ್ನ ಕಾರ್ಯದಲ್ಲಿ ಜಯ ಸಿಗುವಂತೆ ಅನುಗ್ರಹಿಸು”.
ವಿಜಯದಶಮಿಯಂದು ಈ ಶ್ಲೋಕವನ್ನು ಹೇಳಿ ಶಮೀಪತ್ರೆಯನ್ನು ಪರಸ್ಪರ ವಿನಿಮಯ ಮಾಡಿಕೊಂಡು ಶುಭಕೋರುವುದು ವಾಡಿಕೆಯಾಗಿದೆ. ʼಶಮೀʼ ಎಂಬುದು ವಿಜಯದ ಶಮೀ ಕೂಡಾ ಹೌದು. ಆಶ್ವೀನಸ್ಯ ಸಿತೇ ಪಕ್ಷೇ, ದಶಮ್ಯಾಂ ತಾರಕೋದಯೇ | ಸಕಾಲೋ ವಿಜಯೋ ಜ್ಞೇಯಃ ಸರ್ವಕಾರ್ಯಾರ್ಥ ಸಿದ್ಧಯೇ || ಆಶ್ವಯುಜ ಶುಕ್ಲ ದಶಮಿಯಂದು, ನಕ್ಷತ್ರಗಳು ಉದಯಿಸುವ ಕಾಲಕ್ಕೆ ʼವಿಜಯʼ ಎಂದು ಹೆಸರು. ಸಕಲ ಕಾರ್ಯಗಳ ಸಿದ್ಧಿಗೆ ಅದು ಪ್ರಶಸ್ತ ಮುಹೂರ್ತ. ಈ ದಿನದಂದು ದೇವಿಯು ಮಹಿಷಾಸುರ, ಶುಂಭ-ನಿಶುಂಭಾದಿಗಳನ್ನು ಜಯಿಸಿದ ದಿನ; ಷಣ್ಮುಖನು ತಾರಕಾಸುರನನ್ನು ಕೊಂದ ದಿನ. ಶ್ರೀರಾಮನು ರಾವಣನನ್ನು ಗೆದ್ದು ಶಮೀವೃಕ್ಷವನ್ನು ಪೂಜಿಸಿ, ಅಯೋಧ್ಯೆಗೆ ತೆರಳಿದ ದಿನ. ಪಾಂಡವರು ಅಜ್ಞಾತವಾಸವನ್ನು ಯಶಸ್ವಿಯಾಗಿ ಪೂರೈಸಿ, ಶಮೀವೃಕ್ಷಕ್ಕೆ ಕಟ್ಟಿದ್ದ ಆಯುಧಗಳನ್ನು ಪಡೆದು ಬನ್ನಿ ಹಂಚಿದ ದಿನ. ವಿದೇಶೀ ಆಕ್ರಮಣವನ್ನು ತಡೆದು, ಹಿಂದೂ ಸಂಸ್ಕೃತಿ ಧರ್ಮ ರಕ್ಷಣೆಗಾಗಿ ವಿಜಯನಗರ ಸಾಮ್ರಾಜ್ಯವು ಸ್ಥಾಪನೆಯಾದ ದಿನ. ವಿದ್ಯಾರಂಭ, ಉದ್ಯಮಾರಂಭ, ಯುದ್ಧಾರಂಭ ಮೊದಲಾದ ಏನನ್ನೇ ಈ ದಿನ ಆರಂಭಿಸಿದರೂ, ಜಯ ಖಚಿತ ಎಂಬ ಭಾವನೆ ಜನಜನಿತ. ಅಂತೆಯೇ ಇಂದು ಶಾರದಾಪೂಜೆ, ಲಕ್ಷ್ಮೀಪೂಜೆ, ಆಯುಧಪೂಜೆ, ವಾಹನಾದಿ ಪೂಜೆಗಳನ್ನು ಮಾಡಲಾಗುತ್ತದೆ. ದಶಮಿಗೂ ಮೊದಲು ನವದಿನಗಳಂದು ನವೋತ್ಸಾಹದಿಂದ ಮನೆ-ಮನೆಗಳಲ್ಲಿ, ಗುಡಿ-ಗೋಪುರಗಳಲ್ಲಿ ಜನಮನ ಸ್ಪಂದಿಸುವ ನಾಡಹಬ್ಬಆಚರಿಸಲಾಗುತ್ತದೆ. ಶಾಕ್ತರಾದ ಕನ್ನಡಿಗರಿಗೆ ಹಿಂದಿನಿಂದಲೂ ಇದು ದೊಡ್ಡ ಹಬ್ಬ. ಕ್ರಿ.ಶ. 1513ರಲ್ಲಿ ತನ್ನ ವಿಜಯದ ಸವಿನೆನಪಿಗಾಗಿ ʼಶ್ರೀಕೃಷ್ಣದೇವರಾಯʼನು ಕಟ್ಟಿಸಿದಿ ʼಮಹಾನವಮೀ ದಿಬ್ಬʼ ಇಂದೂ ಮೂಕವಾಗಿ ಗತವೈಭವ ಸಾರುತ್ತಿದೆ. ʼಮೈಸೂರು ದಸರಾʼ ಹಾಗೂ ʼಜಂಬೂ ಸವಾರಿʼಯಂತೂ ಜಗತ್ಪ್ರಸಿದ್ಧ. ಅಂದಿನ ಮೈಸೂರು ರಾಜರುಗಳು ನಡೆಸುತ್ತಿದ್ದ ಸೀಮೋಲ್ಲಂಘನ ಮತ್ತು ಶಮೀ ಪೂಜೆ ಇಂದೂ ನಡೆದುಬಂದಿದೆ. ರನ್ನನ ಕಾವ್ಯದ ಕೊಂಬನು ಊದಿ; ದೇಹದೊಳೆಲ್ಲಾ ಶೌರ್ಯವ ತುಂಬಿ; ಪಂಪನ ಹೆಸರನು ಸೊಂಟಕೆ ಸುತ್ತಿ; ರನ್ನನ ಭೀಮನ ಗದೆಯನು ಎತ್ತಿ; ಹಕ್ಕನ-ಬುಕ್ಕನ ಶಸ್ತ್ರವ ಹೂಡಿ; ವಿದ್ಯಾರಣ್ಯರ ಚರಿತೆಯ ಹಾಡಿ; ದಸರೆಯ ಹಬ್ಬವ ಹಬ್ಬಿಸಿರಿ; ಕನ್ನಡ ನಾಡನು ಹಿಗ್ಗಿಸಿರಿ ಎಂಬ ಕವಿ ದಿನಕರ ದೇಸಾಯಿಯವರ ವಾಣಿ ಈ ನಮ್ಮ ನಾಡಹಬ್ಬದ ವೈಭವವನ್ನು ಸಾರುತ್ತದೆ.
ಶಮೀ ಬಂಗಾರದ ಕಥೆ
ಹಿಂದೆ ರಘುರಾಜನು ʼವಿಶ್ವಜಿತ್ʼ ಯಜ್ಞವನ್ನಾಚರಿಸಿ, ಸತ್ಪಾತ್ರಿರಿಗೆ ಸಕಲವನ್ನೂ ದಾನ ಮಾಡಿ, ಬರಿಗೈಯುಳ್ಳವನಾಗಿದ್ದ. ಆ ವೇಳೆಗೆ ಬಂದ ವರತಂತು ಮಹರ್ಷಿಗಳ ಶಿಷ್ಯನಾದ ಕೌತ್ಸನು ಗುರುದಕ್ಷಿಣೆ ನೀಡಲು 14 ಕೋಟಿ ಸುವರ್ಣನಾಣ್ಯಯಾಚಿಸಿದ. ದೇಹಿ ಎಂದವನಿಗೆ ನಾಸ್ತಿ ಎನ್ನಲಾಗದೆ ರಘುರಾಜನು 2 ದಿನ ನಿಲ್ಲುವಂತೆ ಪ್ರಾರ್ಥಿಸಿದ. ಮರುದಿನ ಕುಬೇರನ ಭಂಡಾರಕ್ಕೆ ಲಗ್ಗೆ ಹಾಕಲು ಮನಸ್ಸು ಮಾಡಿದ್ದ. ಬೆಳಗಾಗುವಷ್ಟರಲ್ಲಿ ಕುಬೇರ ತಾನಾಗಿ ಅರಮನೆಯ ಸಮೀಪದ ಬನ್ನಿಯ ಉದ್ಯಾನದಲ್ಲಿ 18 ಕೋಟಿಗೂ ಹೆಚ್ಚು ಸುವರ್ಣಮುದ್ರಿಕೆಗಳ ಮಳೆಗರೆದಿದ್ದ. ರಘುರಾಜನಿಗೆ ಶಮೀವೃಕ್ಷದಿಂದ ಬಂಗಾರ ದೊರೆತದ್ದರಿಂದ “ಬಂಗಾರ ತಕ್ಕೊಂಡು ಬಂಗಾರದಾಂಗೆ ಇರೋಣ” ಎಂಬಂತೆ ಬನ್ನೀ ಬಂಗಾರದ ಸಂಕೇತವಾಯಿತು. ಒಟ್ಟಾರೆ ಮಳೆಗರೆದು, ಇಳೆ-ತಣಿದು, ಬೆಳೆ-ಬೆಳೆದು, ಹೊಳೆ-ತೊರೆಗಳೆಲ್ಲಾ ತುಂಬಿನಿಂತ ಈ ಸುಸಮಯದಲ್ಲಿ ಆಚರಿಸುವ ʼನವರಾತ್ರಿʼ ಹಾಗೂ ʼವಿಜಯದಶಮಿʼಯು ಪ್ರಕೃತಿ ಮಾತೆಯ ಪೂಜೆಯಾಗಿ, ದುಷ್ಟಶಕ್ತಿಯ ಮೇಲೆ ಸಂಸ್ಕೃತಿ ಪ್ರಚಾರಸಾಧನವಾಗಿ, ಆಧ್ಯಾತ್ಮಿಕ ವೃದ್ಧಿಯ ಕುರುಹಾಗಿ ನಿಲ್ಲಬಲ್ಲ ಹಬ್ಬವಾಗಿದೆ ಎನ್ನಬಹುದು.
ಹೊಸ್ತಿಲ ಬಳಿ ನಿಂತಿರುವ ನವದುರ್ಗೆಯರನ್ನು ತುಂಬು ಹೃದಯದಿಂದ ಬರಮಾಡಿಕೊಳ್ಳುತ್ತಾ, ನಾಡಹಬ್ಬವನ್ನು ಸಂಭ್ರಮದಿಂದ ಆಚರಿಸೋಣ. ನಮ್ಮ ಸಂಸ್ಕೃತಿಯ ಹಿರಿಮೆ-ಗರಿಮೆಯನ್ನು ಹೆಮ್ಮೆಯಿಂದ ನಮ್ಮ ಮುಂದಿನ ಪೀಳಿಗೆಯವರಿಗೆ ಪರಿಚಯಿಸೋಣ. ತಾಯಿ ದುರ್ಗೆಯ ಕೃಪೆಯನ್ನು ಪಡೆಯೋಣ, ಎಲ್ಲರಿಗೂ ಶುಭವಾಗಲಿ!