ಪತ್ರಕರ್ತರ ಮತ್ತು ಪತ್ರಿಕಾ ಸಂಸ್ಥೆಗಳ ನೌಕರರಿಗೆ ಇ-ಶ್ರಮ್ ಕಾರ್ಡ್ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಉಚಿತ ನೊಂದಣಿಗೆ ಚಾಲನೆ

ಕೋಲಾರ:- ಪತ್ರಕರ್ತರು ಹಾಗೂ ಪತ್ರಿಕಾ ಸಂಸ್ಥೆಗಳ ಸಿಬ್ಬಂದಿ, ವಿತರಕರು ಇ-ಶ್ರಮ್ ಕಾರ್ಡ್ ಮಾಡಿಸಿಕೊಂಡು ಆಯುಷ್ಮಾನ್ ಭಾರತ್ ಆರೋಗ್ಯ ವಿಮೆ ಜತೆಗೆ ಕಾರ್ಮಿಕ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಶಬಾನಾ ಅಜ್ಮಿ ಮನವಿ ಮಾಡಿದರು.
ನಗರದ ಪತ್ರಕರ್ತರ ಭವನದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಗುರುವಾರ ನಗರದ ಪತ್ರಕರ್ತರ ಭವನದಲ್ಲಿ ಪತ್ರಕರ್ತರು ಮತ್ತು ಪತ್ರಿಕಾ ಸಂಸ್ಥೆಗಳ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಪತ್ರಿಕಾ ವಿತರಕರುಗಳಿಗೆ ಇ-ಶ್ರಮ್ ಕಾರ್ಡ್ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಕಾರ್ಡ್ಗಳನ್ನು ಉಚಿತವಾಗಿ ನೊಂದಣಿ ಮಾಡಿಸಿ ಸ್ಥಳದಲ್ಲಿಯೇ ವಿತರಿಸಿ ಅವರು ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಪತ್ರಕರ್ತರಾದ ಜೆ.ಜಿ.ಶ್ರೀನಿವಾಸಮೂರ್ತಿ, ವೆಂಕಟೇಶ್, ಸರ್ವಜ್ಞಮೂರ್ತಿ ಅವರಿಗೆ ಇ-ಶ್ರಮ್ ವಿಮಾ ಕಾರ್ಡ್ ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ಗಳನ್ನು ವಿತರಿಸಲಾಯಿತು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಅನೇಕ ಪತ್ರಕರ್ತರು ಸಂಕಷ್ಟದಲ್ಲಿದ್ದಾರೆ, ಇದುವರೆಗೂ ಕಾರ್ಮಿಕ ಇಲಾಖೆ ಸೌಲಭ್ಯಗಳು ನಮಗೆ ಸಿಕ್ಕಿರಲಿಲ್ಲ, ಇದೀಗ ಉತ್ತಮ ಅವಕಾಶ ಲಭ್ಯವಾಗಿದೆ, ಎಲ್ಲಾ ಪತ್ರಕರ್ತರು, ಸಿಬ್ಬಂದಿ ವಿತರಕರು ಇ-ಶ್ರಮ ಕಾರ್ಡ್ ಮೂಲಕ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ ಎಂದರು.
ಇ-ಶ್ರಮ್ ಯೋಜನೆಯಡಿ ನೋಂದಣಿ ಮಾಡಿಕೊಳ್ಳುವುದರಿಂದ ಅಪಘಾತದಲ್ಲಿ ಮೃತಪಟ್ಟರೆ ೨ ಲಕ್ಷ ರೂ ಹಾಗೂ ಗಾಯಗೊಂಡರೆ ೧ ಲಕ್ಷರೂಗಳವರೆಗೂ ಪರಿಹಾರ ಸಿಗಲಿದೆ ಎಂದು ತಿಳಿಸಿ, ಎಲ್ಲಾ ಪತ್ರಕರ್ತರು, ಪತ್ರಿಕಾ ಕಾರ್ಯಾಲಯದ ಸಿಬ್ಬಂದಿ, ವಿತರಕರು, ಪತ್ರಿಕೆ ಹಂಚುವ ಹುಡುಗರು ಈ ಸೌಲಭ್ಯ ಪಡೆದುಕೊಳ್ಳಲು ಮನವಿ ಮಾಡಿದರು.
ಯೋಜನೆಗೆ ಅರ್ಹರಾದ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು, ಪತ್ರಿಕಾ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಪತ್ರಿಕಾ ವಿತರಕರು, ಪತ್ರಿಕೆ ಹಂಚುವ ಹುಡುಗರು ಸಂಘದ ಗುರುತಿನ ಕಾರ್ಡ್, ಅಗತ್ಯ ದಾಖಲೆಗಳನ್ನು ಸಲ್ಲಿಸಿ ೮೬ ಇ-ಶ್ರಮ್ ವಿಮಾ ಕಾರ್ಡ್ ಮತ್ತು ೧೫೫ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ಗಳನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಎಸ್.ಗಣೇಶ್, ನಿಕಟಪೂರ್ವ ಅಧ್ಯಕ್ಷ ವಿ.ಮುನಿರಾಜು, ಹಿರಿಯ ಪತ್ರಕರ್ತರಾದ ಅಬ್ಬಣಿಶಂಕರ್, ಕಾರ್ಮಿಕ ನಿರೀಕ್ಷಕರಾದ ರಾಜೇಶ್ವರಿ ಕೆ, ಕಾರ್ಮಿಕ ಇಲಾಖೆಯ ಸಿಬ್ಬಂದಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *