ಕೋಲಾರ:- ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್,ಮಾಸಾಶನ ಹೆಚ್ಚಳ ಸೇರಿದಂತೆ ಎಲ್ಲಾ ಬೇಡಿಕೆಗಳ ಈಡೇರಿಕೆ ಜತೆಗೆ ಪತ್ರಕರ್ತರ ಒಳಿತಿಗಾಗಿ ಏನೆಲ್ಲಾ ಮಾಡಲು ಸಾಧ್ಯವೋ ಅದೆಲ್ಲವನ್ನು ಪ್ರಾಮಾಣಿಕವಾಗಿ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಭರವಸೆ ನೀಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಗಳ ಸಹಯೋಗದಲ್ಲಿ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಬೈಸಿಕಲ್‌ನಲ್ಲಿ ಮನೆಮನೆಗೂ ಪತ್ರಿಕೆ ಹಾಕುವ ಮೂಲಕ ವೃತ್ತಿಯಲ್ಲಿ ತೊಡಗಿದ್ದೇನೆ, ಪತ್ರಕರ್ತ ನೋವು-ನಲಿವು ಎಲ್ಲದರ ಅರಿವು ಇದೆ,ಈ ಜಿಲ್ಲೆಯ ಅನೇಕ ಹಿರಿಯ ಪತ್ರಕರ್ತರಿಂದ ಬರವಣಿಗೆ ಕಲಿತಿದ್ದೇನೆ, ನನಗೆ ಊಟ ಕೊಟ್ಟ ಜಿಲ್ಲೆ ಅನುಭವದಿಂದ ಬೆಳೆಸಿದ್ದಾರೆ, ನನ್ನ ಬೆಳವಣಿಗೆಯಲ್ಲಿ ದಿವಂಗತ ಬಿ.ವಿ.ನರಸಿಂಹಮೂರ್ತಿ, ಪ್ರಹ್ಲಾದರಾವ್,ಬಿ.ವಿ.ಗೋಪಿನಾಥ್, ಮಲ್ಲೇಶ್,ವಾಸುದೇವಹೊಳ್ಳ ಮತ್ತಿತರ ಎಲ್ಲಾ ಸ್ನೇಹಿತರ ಮಾರ್ಗದರ್ಶನವಿದೆ ಎಂದು ಧನ್ಯವಾದ ತಿಳಿಸಿದರು.
ಪತ್ರಿಕಾರಂಗ ಬೆಳೆದಂತೆ ಪತ್ರಕರ್ತರ ಬದುಕು ಬೆಳೆಯಲಿಲ್ಲ, ಇದಕ್ಕೆ ಈವರೆಗೂ ವಾರ್ತಾಇಲಾಖೆಯೂ ಹೆಚ್ಚುಮಹತ್ವ ನೀಡಲಿಲ್ಲ, ಇದೀಗ ಹೇಮಂತ್ ನಿಂಬಾಳ್ಕರ್ ಒಳ್ಳೆಯ ಅಧಿಕಾರಿ ಬಂದಿದ್ದಾರೆ ಇನ್ನು ಮುಂದೆ ಸುಧಾರಣೆಯಾಗಲಿದ ಎಂದು ತಿಳಿಸಿದರು.
ಪತ್ರಕರ್ತರಿಗೆ ಬಸ್‌ಪಾಸ್, ಮಾಸಾಶನ ಹೆಚ್ಚಳ,ಮೃತ ಕುಟುಂಬಗಳಿಗೆ ನೀಡುವ ಭತ್ಯೆ ಏರಿಕೆ ಈ ಬಜೆಟ್‌ನಲ್ಲೇ ಆಗಲಿದೆ, ಉಳಿದ ಬೇಡಿಕೆಗಳಿಗೆ ಸರ್ಕಾರದ ಗ್ಯಾರೆಂಟಿಗಳಿಗೆ ಅನುದಾನ ಒದಗಿಸಬೇಕಾದ್ದರಿಂದ ಸ್ವಲ್ಪ ತಡವಾಗಬಹುದು ಎಂದ ಅವರು, ಪತ್ರಕರ್ತರು ಮಾಸಾಶನ, ಮಾನ್ಯತೆ ಕಾರ್ಡ್ ಪಡೆಯಲು ಇರುವ ನಿಬಂಧನೆಗಳನ್ನು ಸರಳಗೊಳಿಸುವಂತೆ ವಾರ್ತಾ ಇಲಾಖೆ ಆಯುಕ್ತ ನಿಂಬಳ್ಕರ್ ಅವರಿಗೆ ಮನವಿ ಮಾಡಿದರು.
ಪತ್ರಕರ್ತರಹಿತಕ್ಕೆ ಮುಖ್ಯಮಂತ್ರಿ ಬದ್ದತೆ :
ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿದ ವಾರ್ತಾ ಇಲಾಖೆ ರಾಜ್ಯ ಆಯುಕ್ತ ಹೇಮಂತ್ ಎಂ ನಿಬಾಳ್ಕರ್ ಮಾತನಾಡಿ, ನಾನು ಇಲಾಖೆಗೆ ಬಂದು ಏಳು ವಾರಗಳಾಗಿದೆ, ಸಮಸ್ಯೆ ಅರ್ಥಮಾಡಿಕೊಳ್ಳುತ್ತಿದ್ದೇನೆ, ಬಜೆಟ್ ಪೂರ್ವ ಮುಖ್ಯಮಂತ್ರಿಗಳು ಪತ್ರಕರ್ತರ ಬೇಡಿಕೆಗಳ ಕುರಿತು ಗಮನಹರಿಸಿದ್ದಾರೆ, ನಿಮ್ಮೆಲ್ಲಾ ಬೇಡಿಕೆ ಈಡೇರಿಕೆಗೆ ಮುಖ್ಯಮಂತ್ರಿಗಳ ಕೃಪೆ ಅಗತ್ಯವಿದೆ, ಅವರು ಹೇಳಿದ್ದನ್ನು ಕಾರ್ಯರೂಪಕ್ಕೆ ತರುವುದು ನನ್ನ ಜವಾಬ್ದಾರಿ ಎಂದರು.
ಪತ್ರಕರ್ತರ ಮಕ್ಕಳಿಗೆ ಪ್ರಭಾಕರ್ ರೋಲ್ ಮಾಡಲ್ ಆಗಿದ್ದಾರೆ, ಚಳಿ,ಮಳೆ ಲೆಕ್ಕಿಸದೇ ಕೆಲಸ ಮಾಡುವುದು ಪತ್ರಕರ್ತರು,ಪೊಲೀಸರು, ನಮ್ಮದು ತುರ್ತು ಸೇವೆ ಎಂದು ತಿಳಿಸಿ, ಮಕ್ಕಳು ಪರಿಶ್ರಮದಿಂದ ಎಂತಹ ಸಾಧನೆಯನ್ನೂ ಮಾಡಲು ಸಾಧ್ಯ ಎಂದು ತಿಳಿಸಿದರು.
ಬಜೆಟ್‌ನಲ್ಲೇ ಸೇರಿಸಿ ಬಸ್‌ಪಾಸ್ ನೀಡಿ :
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಡಿವಿಜಿಯವರ ಮೇರು ವ್ಯಕ್ತಿತ್ವ ನಮಗೆ ಮಾದರಿ ಎಂದು ತಿಳಿಸಿ, ವಾರ್ತಾ ಇಲಾಖೆ ಸಂವೇದನಾಶೀಲ ಇಲಾಖೆ, ಸರ್ಕಾರ-ಪತ್ರಕರ್ತರ ನಡುವೆ ಸೇತುವೆಯಾಗಿದೆ, ಗ್ರಾಮೀಣ ಪತ್ರಕರ್ತರಿಗೆ ಇದೇ ಬಜೆಟ್‌ನಲ್ಲೇ ಉಚಿತ ಬಸ್‌ಪಾಸ್ ನೀಡುವ ಕುರಿತು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಜತೆಗಿದ್ದ ಪ್ರಭಾಕರ್ ಅವರ ಬದ್ದತೆಯೇ ಅವರನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ, ವೃತ್ತಿ ಬದ್ದತೆಯನ್ನು ಸಮಾಜಯ ಆಶಯಕ್ಕೆ ತಕ್ಕಂತೆ ನಿರ್ವಹಿಸಿದರೆ ಯಶಸ್ಸು ಖಚಿತ ಎಂದ ಅವರು,ದಶಕಗಳಿಂದ ಬಳಸದ ಅನೇಕ ಪದಗಳನ್ನು ಸಮೂಹ ಮಾಧ್ಯಮಗಳು ಬಳಸುತ್ತಿರುವುದು ವಿಷಾದ, ನಕಲಿ ಪತ್ರಕರ್ತರ ಹಾವಳಿ ಜತೆಗೆ ವಿಸಿಟಿಂಗ್ ಕಾರ್ಡ್ ಪತ್ರಕರ್ತರಾಗದಿರಿ ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಿ.ರೂಪ, ಪತ್ರಿಕಾ ರಂಗದಲ್ಲಿ ಗೌರವ, ಘನತೆ ಮೌಲ್ಯ ಉಳಿಸಿಕೊಂಡು ಬಂದಿದ್ದಕ್ಕೆ ಇಂದು ಪ್ರಭಾಕರ್ ಅವರಿಗೆ ಉತ್ತಮ ಅವಕಾಶ ಸಿಕ್ಕಿದೆ ಎಂದು ತಿಳಿಸಿ, ಅಕಾಡೆಮಿ ಕೋಲಾರದಲ್ಲಿ ಕಾರ್ಯಕ್ರಮ ನಡೆಸುತ್ತಿರುವುದಕ್ಕೆ ಸಂತಸವಾಗಿದೆ, ಇಲ್ಲಿಗೆ ಕಾರ್ಯಾಗಾರ ನಡೆಸಲು ಅವಕಾಶ ನೀಡುವ ಕುರಿತು ಗಮನಹರಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ನಮ್ಮ ಕೋಲಾರದ ಹುಡುಗ ಪ್ರಭಾಕರ್ ನಿರೀಕ್ಷಿಸದ ಸ್ಥಾನದಲ್ಲಿ ಈಗ ಕುಳಿತಿದ್ದು, ಅದು ಕೋಲಾರ ಪತ್ರಿಕೋದ್ಯಮಕ್ಕೆ ಕಿರೀಟದಂತಿದ್ದಾರೆ, ನಮ್ಮ ಮಕ್ಕಳಿಗೆ ಅವರೇ ಆದರ್ಶ ಎಂದರು.
ಸರ್ಕಾರಿ ಜಾಹಿರಾತು ನೀಡುವ ಏಜೆನ್ಸಿಗಳ ವಂಚನೆ ಕುರಿತು ಗಮನಕ್ಕೆ ತರುತ್ತಿದ್ದಂತೆ ವಾರ್ತಾ ಇಲಾಖೆ ಆಯುಕ್ತ ನಿಂಬಳ್ಕಾರ್ ಅವರು ದೂರವಾಣಿ ಕರೆ ಮಾಡಿ,ಜಾಹಿರಾತು ಸಂಸ್ಥೆಗಳು, ಬಿಡುಗಡೆ,ಬಾಕಿ ಇರುವ ಅನುದಾನದ ಕುರಿತು ಸಮಗ್ರ ವರದಿ ನೀಡಲು ತಮ್ಮ ಇಲಾಖೆ ಸಿಬ್ಬಂದಿಗೆ ಆದೇಶಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು.
ಶಕ್ತಿ ಯೋಜನೆಯಂತೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಒತ್ತಾಯಿಸಿದ ಅವರು, ಇದೇ ಸಂದರ್ಭದಲ್ಲಿ ಕೋಲಾರ ಪತ್ರಕರ್ತರ ಕಲ್ಯಾಣ ನಿಧಿಗೆ ಮುಖ್ಯಮಂತ್ರಿಗಳ ಪರಿಹಾರನಿಧಿಯಿಂದ ೫೦ ಲಕ್ಷ ಒದಗಿಸುವಂತೆ ಪ್ರಭಾಕರ್ ಅವರಿಗೆ ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ಕೆ.ಎಸ್.ಗಣೇಶ್, ೫೦ ವರ್ಷಗಳ ಕೋಲಾರ ಪತ್ರಕರ್ತರ ಸಂಘದ ಇತಿಹಾಸ, ೨೦ ವರ್ಷಗಳಿಂದ ಹಿರಿಯರು ಒದಗಿಸಿದ ನಿವೇಶನದಲ್ಲಿ ಸಂಘದ ಕಟ್ಟಡ ತಲೆಯೆತ್ತಿದ್ದರ ಕುರಿತು ತಿಳಿಸಿದರಲ್ಲದೇ, ಸಣ್ಣ ಪತ್ರಿಕೆಗಳು ಜಾಹಿರಾತು ಏಜೆನ್ಸಿಗಳಿಂದ ಅನುಭವಿಸುತ್ತಿರುವ ನಷ್ಟದ ಕುರಿತು ಆಯುಕ್ತರು ಹಾಗೂ ಪ್ರಭಾಕರ್ ಅವರ ಗಮನ ಸೆಳೆದರು.
ರಾಜ್ಯ ಕಾರ್ಯಕಾರಿ ಸದಸ್ಯ ವಿ.ಮುನಿರಾಜು, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಕೋಲಾರ ಪತ್ರಕರ್ತರ ಕಲ್ಯಾಣನಿಧಿಗೆ ನೆರವು ಒದಗಿಸುವಂತೆ ಕೋರುವ ಮನವಿ ಪತ್ರ ಓದಿ, ಪ್ರಭಾಕರ್ ಅವರಿಗೆ ಹಸ್ತಂತರಿಸಿದರು.
ರಾಜ್ಯ ಪತ್ರಕರ್ತರ ಸಂಘದ ಖಜಾಂಚಿ ವಾಸುದೇವಹೊಳ್ಳ, ವಸತಿ ಸಚಿವರ ಮಾಧ್ಯಮ ಸಂಯೋಜಕ ಎನ್.ಲಕ್ಷಿö್ಮನಾರಾಯಣ ಅವರ ಸಂದೇಶ ವಾಚಿಸಿದರು. ಕಲಾವಿದ ಪಿಚ್ಚಳ್ಳಿ ಶ್ರೀನಿವಾಸ್ ತಮ್ಮ ಕೆರೆಗಳ ಹಾಡಿನ ಮೂಲಕ ರಂಜಿಸಿದರು.
ಕಾರ್ಯಕ್ರಮದಲ್ಲಿ ೯ ಮಂದಿಗೆ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಪತ್ರಕರ್ತ ೩೫ ಸಾಧಕ ಮಕ್ಕಳನ್ನು ಪುರಸ್ಕರಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್ ಸ್ವಾಗತಿಸಿ, ಖಜಾಂಚಿ ಎ.ಜಿ.ಸುರೇಶ್‌ಕುಮಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ, ಭಾರತ ಐನಕ್ ಕಾರ್ಯಕಾರಿ ಸದಸ್ಯ ಮಹಮದ್ ಯೂನುಸ್, ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭವಾನಿಸಿಂಗ್, ಹಿರಿಯ ಪತ್ರಕರ್ತರಾದ ಜಗನ್ನಾಥ್ ಪ್ರಕಾಶ್, ಜಿಲ್ಲಾ ವಾರ್ತಾಧಿಕಾರಿ ಸೌಮ್ಯ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಸತ್ಯನಾರಾಯಣ ಸೇರಿದಂತೆ ಜಿಲ್ಲೆಯ ಹಿರಿಯ ಪತ್ರಕರ್ತರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸಭೆಯಲ್ಲಿ ಹಾಜರಿದ್ದು, ಸಿ.ಎಸ್.ಶ್ರೀವಿದ್ಯಾ ಪ್ರಾರ್ಥಿಸಿದರು.