ಕೋಲಾರ, ಮಧ್ಯಸ್ಥರು ಅನೇಕ ಪ್ರಕರಣಗಳನ್ನು ರಾಜಿ ಮಾಡಿಸುವುದರಿಂದ ನ್ಯಾಯಾಲಯದ ಮತ್ತು ಪ್ರಕರಣದೊಳಗಿನ ವ್ಯಕ್ತಿಗಳ ಸಮಯ ಉಳಿಯುತ್ತದೆ. ಆದ್ದರಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಮಧ್ಯಸ್ಥಗಾರರಿಗೆ ಎರಡು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಾಗಾರವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಆರ್ ನಾಗರಾಜ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಬೆಂಗಳೂರು ಮಧ್ಯಸ್ಥಿಕಾ ಕೇಂದ್ರ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕೋಲಾರ ಇವರುಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಮಧ್ಯಸ್ಥಗಾರರಿಗೆ ಎರಡು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂವಿಧಾನದ ಪ್ರಕಾರ ಪ್ರತಿಯೊಬ್ಬರಿಗೂ ನ್ಯಾಯ ದೊರಕಬೇಕು. ಮಧ್ಯಸ್ಥಿಕೆದಾರರು ಹೇಳುವ ಕಾರಣಗಳಿಂದ ಪ್ರಕರಣದೊಳಗಿನ ವ್ಯಕ್ತಿಗಳು ರಾಜಿಯಾಗುವಂತೆ ಕಾರ್ಯನಿರ್ವಹಿಸಬೇಕು. ಯಾವುದೇ ಕೆಲಸವನ್ನು ಕೈಗೊಂಡರೆ ನಿಷ್ಠೆಯಿಂದ ಪೂರ್ಣಗೊಳಿಸಬೇಕು. ಈ ಕಾರ್ಯಾಗಾರದಲ್ಲಿ ಜ್ಞಾನವನ್ನು ಪಡೆಯುವುದರಿಂದ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸಲು ಉಪಯೋಗವಾಗುತ್ತದೆ. ಗ್ರಾಮೀಣ ಭಾಗದ ಜನರಿಗೆ ಅವರದೇ ಆದ ಭಾಷೆಯಲ್ಲಿ ಸಂವಹನ ನಡೆಸಿ ಸಂಧಾನ ಮಾಡಿಸಬೇಕು. ಸಮಾಜಕ್ಕೆ ಮಧ್ಯಸ್ಥಿಕೆದಾರರ ಸೇವೆ ಬಹುಮುಖ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಜಿ. ಶ್ರೀಧರ್ ರವರು ಮಾತನಾಡಿ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಶಿಸ್ತು ಬಹುಮುಖ್ಯ ಅಂಶವಾಗಿರುತ್ತದೆ. ಯಾವುದೇ ಪ್ರಕರಣಗಳನ್ನು ಸಂಧಾನ ಮಾಡಿಸಲು ವಕೀಲರು ನೈಪುಣ್ಯತೆಯನ್ನು ಹೊಂದಿರಬೇಕು. ಜನರಿಗೆ ಸಮಾನತೆಯಿಂದ ಕೂಡಿದ ನ್ಯಾಯವನ್ನು ಒದಗಿಸಲು ವಕೀಲರು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಕಾರ್ಯಾಗಾರದಲ್ಲಿ ಬೆಂಗಳೂರು ಮಧ್ಯಸ್ಥಿಕ ಕೇಂದ್ರದ ತರಬೇತುದಾರರಾದ ಅನುರಾಧ.ಎಸ್.ಆರ್, ಲತಾಪ್ರಸಾದ್, ಮಂಜುಳ.ಎನ್.ತೇಜಸ್ವಿನಿ, ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ, ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸುನಿಲ ಎಸ್ ಹೊಸಮನಿ, ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ದೇವರಾಜು, ಪ್ರಧಾನ ಮುಖ್ಯ ನ್ಯಾಯಾಧಿಕಾರಿ ಮತ್ತು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶರಾದ ಬಾಲಚಂದ್ರ ಎನ್.ಭಟ್, ವಕೀಲರಾದ ಧನರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.