ಮೂಡಲಗಿ, ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಾ ಪಲಿತಾಂಶದಲ್ಲಿ ಮೂಡಲಗಿ ಶೈಕ್ಷಣಿಕ ವಲಯದ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಜಿಲ್ಲೆಯ ಹಾಗೂ ವಲಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ‘ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಹೊಂದಿದ ವಿದ್ಯಾರ್ಥಿಗಳಿಗೆ ಸತ್ಕಾರ ಹಾಗೂ ಅಭಿನಂದನಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶೈಕ್ಷಣಿಕವಾಗಿ ವಿದ್ಯಾರ್ಥಿಗಳ ಸರ್ವಾಂಗೀನ ಅಭಿವೃದ್ದಿ ದೃಷ್ಠಿಯಿಂದ ಶಿಕ್ಷಕ ಸಮೂಹ, ಮಾರ್ಗದರ್ಶಿ ಸಂಪನ್ಮೂಲಗಳ ಬಳಕೆ ಮಹತ್ವ ಪಡೆದುಕೊಂಡಿದೆ. ವಿದ್ಯಾರ್ಥಿಗಳ ಜೊತೆಗೆ ಉತ್ತಮ ಬಾಂದವ್ಯದ ಜೊತೆಗೆ ಪಾಲಕ ಪೋಷಕರಿಗೆ ಶಿಕ್ಷಣಾಸಕ್ತರಿಗೆ ಕಲಿಕೆಯ ಕುರಿತು ಪ್ರೋತ್ಸಾಹ ನೀಡಿದಾಗ ಮಾತ್ರ ವಿದ್ಯಾರ್ಥಿಗಳಿಂದ ಇಂತಹ ಗುಣಾತ್ಮಕ ಹಾಗೂ ಗುಣಮಟ್ಟದ ಫಲಿತಾಂಶ ಹೊಂದಲು ಸಾಧ್ಯವಾಗುವದು. ಸಮಗ್ರ ಕಲಿಕೆಗೆ ಹೆಚ್ಚಿನ ಒತ್ತು ನೀಡಿದಾಗ ಮಾತ್ರ ವಿದ್ಯಾರ್ಥಿಗಳು ಸ್ವತಂತ್ರ ಕಲಿಕೆ ಹೊಂದಲು ಹಾಗೂ ಅವರ ಆಸಕ್ತಿಗನುಸಾರ ಕಲಿಕಾ ಮಟ್ಟ ಹೆಚ್ಚಿಸುವಲ್ಲಿ ಸಹಾಯಕವಾಗುವದು ಎಂದರು.
ಶೈಕ್ಷಣಿಕ ವಲಯದಲ್ಲಿ ಎ+ ಶ್ರೇಣಿಯಲ್ಲಿ ೧೫೩೦, ಎ ಶ್ರೇಣಿಯಲ್ಲಿ ೨೨೭೮, ಬಿ+ ಶ್ರೇಣಿಯಲ್ಲಿ ೧೬೬೨, ಬಿ ಶ್ರೇಣಿಯಲ್ಲಿ ೯೬೮, ಸಿ+ ಶ್ರೇಣಿಯಲ್ಲಿ ೪೩೭, ಸಿ ಶ್ರೇಣಿಯಲ್ಲಿ ೪೨ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೈಕ್ಷಣಿಕ ವಲಯದ ಎಸ್.ಎಸ್.ಎಲ್.ಸಿ ಫಲಿತಾಂಶ ದಾಖಲಿಸಿದ್ದಾರೆ. ವಲಯ ವ್ಯಾಪ್ತಿಯ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢ ಶಾಲೆಗಳಿಂದ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕ ಚಟುವಟಿಕೆಗಳನ್ನು ಹಮ್ಮಿಕೊಂಡಿರುವದರ ಫಲವಾಗಿ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆ. ಪ್ರಸಕ್ತ ಸಾಲಿನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಹೊಂದಿರುವ ವಿದ್ಯಾರ್ಥಿಗಳಲ್ಲಿ ತಂದೆ-ತಾಯಿ ಇಲ್ಲದವರು, ಆರ್ಥಿಕವಾಗಿ ಹಿಂದೂಳಿದವರು, ಶೈಕ್ಷಣಿಕ ಮಾರ್ಗದರ್ಶನದ ಕೊರತೆ ಇರುವವರು, ಸಾಮಾಜಿಕವಾಗಿ ಅಸಮರ್ಥರಿಗೆ ಇಲಾಖೆಯಿಂದ, ವೈಯಕ್ತಿಕವಾಗಿ, ಸಂಘ ಸಂಸ್ಥೆಗಳು, ಶಿಕ್ಷಣ ಪ್ರೇಮಿಗಳಿಂದ ಅಗತ್ಯ ನೇರವು ನೀಡುವದಾಗಿ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ತಿಳಿಸಿ ಆತ್ಮ ವಿಶ್ವಾಸ ಮೂಡಿಸಿದರು.
ಈ ಸಂದರ್ಭದಲ್ಲಿ ಮೂಡಲಗಿ ವಲಯ ವ್ಯಾಪ್ತಿಯ ೬೧೫ ಕ್ಕಿಂತ ಹೆಚ್ಚಿನ ಅಂಕ ಪಡೆದ ೩೮ ವಿದ್ಯಾರ್ಥಿಗಳನ್ನು ಸತ್ಕರಿಸಿ ಪ್ರೋತ್ಸಾಹ ನೀಡಿ ಅಭಿನಂದಿಸಿದರು.
ಕಾರ್ಯಮಕ್ರದಲ್ಲಿ ಬೆಳಗಾವಿ ಜಿಲ್ಲಾ ವಸತಿ ಶಿಕ್ಷಣ ಸಂಸ್ಥೆಗಳ ಸಮನ್ವಯಾಧಿಕಾರಿ ರಾಘವೇಂದ್ರ ಗಂಗರಡ್ಡಿ, ಯಾದವಾಡ ಎಮ್.ಡಿ.ಆರ್.ಎಸ್ ಪ್ರಾಚಾರ್ಯ ಜಿ.ಎಮ್ ಸಕ್ರಿ, ತಾಲೂಕಾ ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿ ಸತೀಶ ಬಿ.ಎಸ್, ಶಿಕ್ಷಣ ಸಂಯೋಜಕ ಆರ್.ವಿ ಯರಗಟ್ಟಿ, ಬಿಇಒ ಕಛೇರಿಯ ಸಿಬ್ಬಂದಿ, ಮಾರ್ಗದರ್ಶಿ ಶಿಕ್ಷಕರು, ವದ್ಯಾರ್ಥಿಗಳ ಪಾಲಕ ಪೋಷಕರು ಹಾಜರಿದ್ದರು.