ಕೋಲಾರ, ಹೆಚ್ಐವಿ ಸೋಂಕು ತಡೆಗಟ್ಟಲು ಸಾರ್ವಜನಿಕರಲ್ಲಿ ಸೂಕ್ತ ಅರಿವು ಹಾಗೂ ಜಾಗೃತಿ ಮೂಡಿಸಲು ಡಿಸೆಂಬರ್ ೦೧ ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದರು.
ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಹೆಚ್ಐವಿ ಸೋಂಕು ವೈರಾಣುವಿನಿಂದ ಹರಡುವ ಖಾಯಿಲೆಯಾಗಿದ್ದು, ಇದು ಯುವ ಜನರು ಮತ್ತು ದುಡಿಯುವ ವಯೋಮಾನದಲ್ಲಿರುವ ವ್ಯಕ್ತಿಗಳು ಹಾಗೂ ಗರ್ಭಿಣಿ ಸ್ತಿಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ ಎಂದರು.
ರಕ್ತ ಪರೀಕ್ಷೆಯನ್ನು ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಯ ಐ.ಸಿ.ಟಿ.ಸಿ ಕೇಂದ್ರಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಮಾಡಲಾಗುತ್ತಿದೆ. ಕೋಲಾರ ಜಿಲ್ಲೆಯಲ್ಲಿ ೨೦೨೨-೨೩ನೇ ಸಾಲಿನ ಏಪ್ರಿಲ್-೨೦೨೨ ರಿಂದ ಅಕ್ಟೋಬರ್-೨೦೨೨ ಮಾಹೆಯವರೆಗೆ ಸಾಮಾನ್ಯ ಜನರಲ್ಲಿ ಸುಮಾರು ೪೯೪೮೬ ರಷ್ಟು ಪರೀಕ್ಷಿಸಿದ್ದು, ೨೪೨ ಹೆಚ್ಐವಿ ಸೋಂಕಿತರನ್ನು ಪತ್ತೆ ಮಾಡಲಾಗಿದೆ. ಸುಮಾರು ೧೬೯೬೭ ಗರ್ಭಿಣಿ ಸ್ತಿಯರನ್ನು ಪರೀಕ್ಷಿಸಲಾಗಿ ೮ ಹೆಚ್ಐವಿ ಸೋಂಕಿತರನ್ನು ಪತ್ತೆ ಮಾಡಲಾಗಿದೆ ಎಂದು ಹೇಳಿದರು.
“ಸಮಾನಗೊಳಿಸು” “ನಮ್ಮೆಲ್ಲರ ಪ್ರಾಮಾಣಿಕ ಪ್ರಯತ್ನದಿಂದ ಅಸಮಾನತೆಯನ್ನು ಪರಿಹರಿಸೋಣ ಮತ್ತು ಏಡ್ಸ್ ಅನ್ನು ಕೊನೆಗೊಳಿಸೋಣ” ಈ ವರ್ಷದ ಘೋಷವಾಕ್ಯವಾಗಿದೆ. ಹೆಚ್ಐವಿ ಸೋಂಕು ಅಸುರಕ್ಷಿತ ಲೈಂಗಿಕ ಸಂಪರ್ಕಿದಿoದ, ಸೋಂಕಿತ ರಕ್ತ ಮತ್ತು ರಕ್ತದ ಉಪ ಪದಾರ್ಥಗಳಿಂದ, ಸೋಂಕಿತ ತಾಯಿಯಿಂದ ಮಗುವಿಗೆ, ಸೋಂಕಿತ ಸೂಜಿ, ಸಿರಿಂಜ್ ಮತ್ತು ಶಸ್ತಕ್ರಿಯಾ ಸಾಧನಗಳಿಂದ ಈ ವಿಧಾನಗಳಿಂದ ಮಾತ್ರ ಹರಡುತ್ತದೆ ಎಂದು ತಿಳಿಸಿದರು.
ಡಿಸೆಂಬರ್ ೦೧ ರಂದು ಬೆಳಿಗ್ಗೆ ೯.೩೦ ಗಂಟೆಗೆ ಪ್ರವಾಸಿ ಮಂದಿರದಿoದ ಜಾಥಾ ಕಾರ್ಯಕ್ರಮ ಹಾಗೂ ಬೆಳಿಗ್ಗೆ ೧೧.೩೦ ಗಂಟೆಗೆ ಶ್ರೀ ಟಿ.ಚನ್ನಯ್ಯ ರಂಗಮoದಿರ, ಕೋಲಾರ ಇಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೋಲಾರ ಹಾಗೂ ಮಾಲೂರು ತಾಲ್ಲೂಕಿನ ೨೮ ಸ್ಥಳಗಳಲ್ಲಿ ಮ್ಯಾಜಿಕ್ ಶೋ ಮೂಲಕ ಸಾರ್ವಜನಿಕರಿಗೆ ಹೆಚ್ಐವಿ/ಏಡ್ಸ್ ಅರಿವು ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಜಗದೀಶ್ ಅವರು ಮಾತನಾಡಿ, ದೇಶದ ಪ್ರಮುಖ ಆರೋಗ್ಯ ಸಮಸ್ಯೆಗಳಲ್ಲಿ ಒಂದಾದ ಹೆಚ್ಐವಿ ಒಬ್ಬ ವ್ಯಕ್ತಿಯ ಸಮಸ್ಯೆಯಾಗದೆ, ಇಡೀ ಸಮಾಜದ ಆರೋಗ್ಯ ಮತ್ತು ಸಾಮಾಜಿಕ ಮತ್ತು ಅಭಿವೃದ್ಧಿಗೆ ಸವಾಲಾಗಿದೆ. ಅವರು ಎಲ್ಲರಂತೆ ಬದುಕುವ ಹಕ್ಕು ಹಾಗೂ ಸಾರ್ವತ್ರಿಕವಾಗಿ ಎಲ್ಲರಿಗೂ ಸಿಗಬೇಕಾದ ಸಾಮಾಜಿಕ ಸವಲತ್ತುಗಳಿಂದ ವಂಚಿತರನ್ನಾಗಿಸಿದೆ. ಸೋಂಕುಗಳಿoದ ಮುಕ್ತವಾದ, ಕಳಂಕ ಮತ್ತು ತಾರಮ್ಯರಹಿತ ಸಮಾಜ ನಿರ್ಮಾಣ ಹಾಗೂ ಹೆಚ್ಐವಿ ಸಂಬoಧಿತ ಮರಣಗಳನ್ನು ಸೊನ್ನೆಗೆ ತರಲು ಪ್ರಯತ್ನಿಸೋಣ ಎಂದು ಹೇಳಿದರು.
ಎಸ್.ಎನ್.ಆರ್ ಜಿಲ್ಲಾ ಆಸ್ಪತ್ರೆ-೨, ಆರ್.ಎಲ್.ಜಾಲಪ್ಪ ಆಸ್ಪತ್ರೆ, ಇಟಿಸಿಎಂ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ಮುಳಬಾಗಿಲು, ಸಾರ್ವಜನಿಕ ಆಸ್ಪತ್ರೆ ಶ್ರೀನಿವಾಸಪುರ, ಸಾರ್ವಜನಿಕ ಆಸ್ಪತ್ರೆ ಬಂಗಾರಪೇಟೆ, ಸಾರ್ವಜನಿಕ ಆಸ್ಪತ್ರೆ ಮಾಲೂರು, ಸಾರ್ವಜನಿಕ ಆಸ್ಪತ್ರೆ ಕೆ.ಜಿ.ಎಫ್, ಬೆಮೆಲ್ ಮೆಡಿಕಲ್ ಸೆಂಟರ್, ಸಮುದಾಯ ಆರೋಗ್ಯ ಕೆಂದ್ರ ಗೌನಿಪಲ್ಲಿ ಇಲ್ಲಿ ಐ.ಸಿ.ಟಿ.ಸಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಈ ಕೇಂದ್ರಗಳಲ್ಲಿ ಆಪ್ತ ಸಮಾಲೋಚಕರು ಹಾಗೂ ಪ್ರಯೋಗಶಾಲಾ ತಂತ್ರಜ್ಞರು ಸಾಮಾನ್ಯ ಪ್ರಕರಣಗಳಿಗೆ ಹಾಗೂ ಎಲ್ಲಾ ಗರ್ಭಿಣಿಯರಿಗೆ ಆಪ್ತ ಸಮಾಲೋಚನೆ ಮತ್ತು ಹೆಚ್ಐವಿ ರಕ್ತ ಪರೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ|| ಚಂದನ್, ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮ ಸೇರಿದಂತೆ ಮತ್ತಿತರರು ಉಪಸ್ಥಿರಿದ್ದರು.