ಸಿ.ಎಂ.ಆರ್.ಶ್ರೀನಾಥ್ ಕೋಲಾರಕ್ಕೆ ಉತ್ತಮ ಅಭ್ಯರ್ಥಿ-ಅರಿಕೆರೆ ಮಂಜುನಾಥಗೌಡ

ಕೋಲಾರ,ಸೆ.೨೬: ಜೆಡಿಎಸ್ ಯುವ ಮುಖಂಡ ಸಿಎಂಆರ್ ಶ್ರೀನಾಥ್ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಉತ್ತಮ ಆಯ್ಕೆಯ ಅಭ್ಯರ್ಥಿಯಾಗಿದ್ದಾರೆ ಎಂದು ಜೆಡಿಎಸ್ ಮುಖಂಡ ಅರಿಕೆರೆ ಮಂಜುನಾಥಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ನರಸಾಪುರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂಆರ್ ಶ್ರೀನಾಥ್ ನಾಲಿಗೆ ಮತ್ತು ಮನಸ್ಸಿನ ಮೇಲೆ ಹಿಡಿತವಿರುವ ವ್ಯಕ್ತಿ, ಉತ್ತಮ ವಿದ್ಯಾವಂತರಾಗಿದ್ದು, ಕ್ಷೇತ್ರದಲ್ಲಿ ಹಲವು ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬಂದಿದ್ದಾರೆ. ಉತ್ತಮ ಗುಣ ನಡತೆಗಳನ್ನು ಮೈಗೂಡಿಸಿಕೊಂಡಿದ್ದಾರೆ. ಜಾತ್ಯಾತೀತವಾಗಿ ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಗುಣ ಅವರಲ್ಲಿದೆ. ಕರೋನ ಹಾಗೂ ಹಾಗೂ ಲಾಕ್‌ಡೌನ್ ಸಮಯದಲ್ಲಿ ಜನರಿಗೆ ಸಹಾಯಹಸ್ತ ಚಾಚಿದ್ದಾರೆ. ಪಕ್ಷ ವರಿಗೆ ಅವಕಾಶ ಮಾಡಿಕೊಟ್ಟರೆ ಕೋಲಾರ ತಾಲೂಕಿನ ಜನತೆ ಬೆಂಬಲಿಸಬೇಕೆoದು ಮನವಿ ಮಾಡಿದರು. ಜಿಲ್ಲೆಯ ಜೆಡಿಎಸ್ ನಾಯಕರು ಅಲ್ಪಸಂಖ್ಯಾತ ಸಮಾವೇಶವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಈ ಮೂಲಕ ಜೆಡಿಎಸ್ ಶಕ್ತಿಯನ್ನು ಉಳಿದ ಪಕ್ಷಗಳಿಗೆ ತೋರಿಸಿಕೊಟ್ಟಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಬಿಟ್ಟು ಜೆಡಿಎಸ್ ಸೇರಿದ ಮೇಲೆ ಕೋಲಾರ ಕ್ಷೇತ್ರದಲ್ಲಿ ನನ್ನನ್ನು ಅಭ್ಯರ್ಥಿ ಮಾಡುವ ಪ್ರಯತ್ನಗಳು ನಡೆದವು. ಆದರೆ ನಾನು ಕ್ಷೇತ್ರದ ಅಭ್ಯರ್ಥಿಯಾಗಲು ನಿರಾಕರಿಸಿದ್ದೇನೆ. ಸ್ಥಳೀಯವಾಗಿ ಕ್ಷೇತ್ರದಲ್ಲಿ ಪಕ್ಷದಿಂದ ಅಭ್ಯರ್ಥಿಯಾಗುವ ಹಲವು ನಾಯಕರು ಇದ್ದಾರೆ. ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸಲು ಹೋರಾಟಗಳನ್ನು ಮಾಡಿದ್ದಾರೆ. ಅವರಿಗೆ ಅವಕಾಶ ಸಿಗಬೇಕು ಎನ್ನುವುದು ನನ್ನ ಅಸೆ. ಸಿಎಂಅರ್ ಶ್ರೀನಾಥ್, ಎಂಎಲ್ಸಿ ಗೋವಿಂದರಾಜು, ತಾಲ್ಲೂಕು ಆಧ್ಯಕ್ಷೆ ಕುರ್ಕಿ ರಾಜೇಶ್ವರಿ, ವಕ್ಕಲೇರಿ ರಾಮು, ಬಣಕನಹಳ್ಳಿ ನಟರಾಜ್ ಸೇರಿದಂತೆ ಹಲವು ನಾಯಕರು ಪಕ್ಷವನ್ನು ತಳಮಟ್ಟದಿಂದ ಸಂಘಟನೆ ಮಾಡಿದ್ದಾರೆ ಎಂದರು.
ತಾಲ್ಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಸಮಾವೇಶದಲ್ಲಿ ಕಣ್ಣೀರು ಹಾಕಿದ ಕುರಿತು ಮಾತನಾಡಿದ ಮಂಜುನಾಥ್ ಗೌಡರು, ಭಾವೋದ್ವೇಗಕ್ಕೆ ಒಳಗಾದಾಗ ಕಣ್ಣೀರು ಬರುವುದು ಸಹಜ, ರಾಜೇಶ್ವರಿ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರಿಗೆ ದುಡಿದಿದ್ದಾರೆ. ಪಕ್ಷದಲ್ಲಿ ಅವರಿಗೆ ಉತ್ತಮ ಭವಿಷ್ಯ ಇದೆ ಎಂದರು. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿರುವ ಕುರಿತು ಮಾತನಾಡಿದ ಅವರು ದೊಡ್ಡಬಳ್ಳಾಪುರ ಹಾಗೂ ಬಾಗೇಪಲ್ಲಿ ಎರಡು ಕ್ಷೇತ್ರದಲ್ಲಿ ಸರ್ವೇ ಮಾಡುತ್ತಿದ್ದೇನೆ ಎಂದರು.

Leave a Reply

Your email address will not be published. Required fields are marked *