ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕಾರಸಾರ್ವಜನಿಕರ ಸ್ಪಂದನೆಗೆ ಮೆಚ್ಚುಗೆ – ಕೆ.ಎನ್.ಫಣೀಂದ್ರ


ಕೋಲಾರ, ಮಾನ್ಯ ಉಪಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ರವರು ಸಾರ್ವಜನಿಕರ ಕುಂದುಕೊರತೆ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕ ಸ್ಪಂದನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಕುರಿತಂತೆ ಮಾತನಾಡಿದ ಅವರು ಈ ದಿನ ಪ್ರತ್ಯೇಕವಾಗಿ ಅಹವಾಲು ಸ್ವೀಕರಿಸಿ ವಿಲೇಮಾಡಲೆಂದೇ ಮೀಸಲಿಟಿದ್ದರು. ಬೆಳಿಗ್ಗೆ ೧೦.೦೦ ರಿಂದ ಸಂಜೆ ೫.೦೦ ರವರೆಗೆ ೨೬೦ ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ ೧೦೨ ಪ್ರಕರಣಗಳು ಲೋಕಾಯುಕ್ತ ಕಾರ್ಯ ವ್ಯಾಪ್ತಿಗೆ ಬರುವುದರಿಂದ ಅವುಗಳನ್ನು ನೊಂದಾಯಿಸಲಾಯಿತು. ಉಳಿದ ಅರ್ಜಿಗಳನ್ನು ಸಮಯದ ಅಭಾವದಿಂದ ಅಧೀಕ್ಷಕರು, ಲೋಕಾಯುಕ್ತ, ಕೋಲಾರ ಇವರು ಪರಿಶೀಲಿಸಿ ವಿಲೇಮಾಡುವಂತೆ ಸೂಚಿಸಿದರು.
ಸರ್ಕಾರಿ ನೌಕರರು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಅವರಿಗೆ ನೀಡಿರುವ ಹಕ್ಕುಗಳಿಗನುಗುಣವಾಗಿ ಕರ್ತವ್ಯಗಳನ್ನು ಸಹ ನಿರ್ವಹಿಸಬೇಕು. ಸಾರ್ವಜನಿಕರೊಂದಿಗೆ ಜನಸ್ನೇಹಿಯಾಗಿ ವರ್ತಿಸಬೇಕು. ಸಾರ್ವಜನಿಕ ಅರ್ಜಿಗಳ ವಿಲೇವಾರಿಯಲ್ಲಿ ಅನಗತ್ಯ ವಿಳಂಬ ಮಾಡಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸಾರ್ವಜನಿಕರ ಕುಂದುಕೊರತೆಗಳನ್ನು ಶೀಘ್ರವಾಗಿ ವಿಲೇಮಾಡಲು ಇರುವ ತೊಡಕುಗಳನ್ನು ಅಧಿಕಾರಿಗಳು ವಿವರಿಸಿದರು. ತಾಂತ್ರಿಕ ಸಮಸ್ಯೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರಕರಣಗಳನ್ನು ಕನಿಷ್ಠ ೧ ತಿಂಗಳ ಅವಧಿಯಲ್ಲಿ ವಿಲೇಮಾಡಿ ಅನುಪಾಲನಾವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈವರೆಗೆ ಅಧಿಕಾರಿ ನೌಕರರು ಮಾಡಿರುವ ಕಾರ್ಯ ಶ್ಲಾಘನೀಯ ಮುಂದೆಯು ಸಹ ಸಾರ್ವಜನಿಕರಿಗೆ ವಿಳಂಬವಾಗದ ರೀತಿಯಲ್ಲಿ ಸೇವೆಗಳನ್ನು ಒದಗಿಸುತ್ತಾರೆಂಬ ಭರವಸೆಯನ್ನು ವ್ಯಕ್ತಪಡಿಸಿದರು. ಈ ದಿನ ಸ್ವೀಕೃತವಾಗಿರುವ ಅಹವಾಲುಗಳಲ್ಲಿ ಹೆಚ್ಚಿನಾಂಶ ಕಂದಾಯ ಇಲಾಖೆಗೆ ಹಾಗೂ ಪಿ.ಡಿ.ಓಗಳಿಗೆ ಸಂಬoಧಿಸಿದ್ದಾಗಿದ್ದು, ಸಾರ್ವಜನಿಕ ಹಿತಾಸಕ್ತಿ ಒಳಗೊಂಡ ಅರ್ಜಿಗಳು ಹೆಚ್ಚು ಸ್ವೀಕೃತವಾಗಿದೆ. ಅದರಲ್ಲೂ ಒತ್ತುವರಿಗೆ ಸಂಬoಧಪಟ್ಟ ಅಹವಾಲುಗಳ ಸಂಖ್ಯೆ ಹೆಚ್ಚಿದ್ದು, ಅವುಗಳಿಗೆ ಸಂಬoಧಿಸಿದ ಅಧಿಕಾರಿಗಳಿಗೆ ತಕ್ಷಣವೇ ಕ್ರಮವಹಿಸಲು ಸೂಚಿಸಲಾಗಿದೆ. ಒಂದು ತಿಂಗಳ ಗಡುವಿನೊಳಗೆ ಈ ಪ್ರಕರಣಗಳನ್ನು ವಿಲೇ ಮಾಡಲು ನಿರ್ದೇಶಿಸಿದರು.
ಲೋಕಾಯುಕ್ತ ಸಂಸ್ಥೆಯ ಕಾರ್ಯವ್ಯಾಪ್ತಿ ಬಗ್ಗೆ ಹಾಗೂ ಆ ಸಂಸ್ಥೆಗೆ ಸಲ್ಲಿಸಬಹುದಾದ ಅರ್ಜಿಗಳ ಸ್ವರೂಪದ ಬಗ್ಗೆ ಸಾರ್ವಜನಿಕರಿಗೆ ವಿಷದವಾಗಿ ತಿಳಿಯಪಡಿಸಿದರು. ಈ ಸಂಸ್ಥೆಯ ಕಾರ್ಯವ್ಯಾಪ್ತಿಯ ಹೊರಗೆ ತೀರ್ಮಾನವಾಗಬಹುದಾದ ಪ್ರಕರಣಗಳನ್ನು ಅಂತಹ ಕೋರ್ಟ್ಗಳಲ್ಲಿ ಬಗೆಹರಿಸುಕೊಳ್ಳವಂತೆ ಮನವೊಲಿಸಿದರು. ಕಾನೂನು ಸಲಹೆ ಮತ್ತು ಸೇವೆಗಳ ಅಗತ್ಯವಿರುವವರಿಗೆ ಅಲ್ಲಿಂದಲ್ಲೇ ಕಾನೂನು ಸೇವೆಗಳ ಪ್ರಾಧಿಕಾರದ ಮುಖಾಂತರ ವಕೀಲರನ್ನು ಒದಗಿಸಿ ಪ್ರಕರಣಗಳ ಇತ್ಯರ್ಥಕ್ಕೆ ಸಲಹೆ ಸೂಚನೆಗಳನ್ನು ಪಡೆಯಲು ತಿಳಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ ಎಸ್.ಹೊಸಮನಿ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್, ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿ ಧರಣೀದೇವಿ, ಕರ್ನಾಟಕ ಲೋಕಾಯುಕ್ತದ ಉಪ ನಿಬಂಧಕರಾದ ಎನ್.ಚನ್ನಕೇಶವರೆಡ್ಡಿ, ಕರ್ನಾಟಕ ಲೋಕಾಯುಕ್ತ ಕಾನೂನು ಅಭಿಪ್ರಾಯ-೨ ಸಹಾಯಕ ನಿಬಂಧಕರಾದ ಸತೀಶ್ ಎಸ್.ರೆಡ್ಡಿ, ಡಿ.ಸಿ.ಎಫ್ ಏಡುಕೊಂಡಲು, ಕರ್ನಾಟಕ ಲೋಕಾಯುಕ್ತದ ಪೊಲೀಸ್ ಅಧೀಕ್ಷಕ ಬಿ.ಕೆ.ಉಮೇಶ್ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *