ಸರ್ಕಾರಿ ನೌಕರರು ಮಾಹಿತಿ ಹಕ್ಕು ಕಾಯ್ದೆಯನ್ನು ಸ್ಪಷ್ಟವಾಗಿ ಅರಿತಿರಬೇಕು – ಜಿಲ್ಲಾಧಿಕಾರಿ ಅಕ್ರಂ ಪಾಷ

ಕೋಲಾರ, ಸರ್ಕಾರಿ ನೌಕರರು ತಾವು ಕಾರ್ಯನಿರ್ವಹಿಸುತ್ತಿರುವ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಕಾಯ್ದೆಗಳ ಬಗ್ಗೆ ಕಡ್ಡಾಯವಾಗಿ ತಿಳಿದಿರಬೇಕು. ಅದರಲ್ಲಿಯೂ ಮಾಹಿತಿ ಹಕ್ಕು ಕಾಯ್ದೆಯನ್ನು ಸ್ಪಷ್ಟವಾಗಿ ಅರಿತುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ತಿಳಿಸಿದರು.
ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ತರಬೇತಿ ಸಂಸ್ಥೆ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಿಲಾಗಿದ್ದ, ಕೋಲಾರ ಜಿಲ್ಲೆಯ ವಿವಿಧ ಇಲಾಖೆಗಳ “ಸಿ” ವೃಂದದ ನೌಕರರಿಗೆ ಮಾಹಿತಿ ಹಕ್ಕು ಅಧಿನಿಯಮ ೨೦೦೫ರ ಕುರಿತು ಮುಖಾಮುಖಿ ತರಬೇತಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಆಡಳಿತದಲ್ಲಿ ಪಾರದರ್ಶಕತೆ ತರಲು ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕಾಯ್ದೆಯ ಅನುಷ್ಠಾನವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ನೆರೆದಿoದ್ದ ನೌಕರರಿಗೆ ಕಿವಿಮಾತು ಹೇಳಿದರು.
ಕಾಯ್ದೆಗೆ ಆಗಾಗ್ಗೆ ಹೊರಡಿಸಲಾದ ತಿದ್ದುಪಡಿಗಳನ್ನು ಹಾಗೂ ನ್ಯಾಯಾಲಯ ತೀರ್ಪುಗಳನ್ನು ಅಧ್ಯಯನ ಮಾಡುವ ಮೂಲಕ ತಮ್ಮ ಜ್ಞಾನ ಭಂಢಾರವನ್ನು ಹೆಚ್ಚಿಸಿಕೊಳ್ಳಬೇಕು. ಇದರಿಂದ ಕರ್ತವ್ಯ ನಿರ್ವಹಿಸುವಲ್ಲಿ ಎಸಗುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬಹುದು. ನೌಕರರು ತಮ್ಮ ಕಾರ್ಯ ವ್ಯಾಪ್ತಿಯ ಕಡತಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು. ದಾಖಲೆಗಳ ಕೊಠಡಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ನಿಯಮಾವಳಿಗಳನ್ವಯ ಕಡತಗಳನ್ನು ವಿವಿಧ ಅವಧಿಗಳ ಅನುಸಾರ ವಿಂಗಡಣೆ ಮಾಡಿ ಸೂಚಿಯನ್ನು ತಯಾರಿಸಿ ಇಟ್ಟುಕೊಳ್ಳಬೇಕು. ಇದರಿಂದ ಮಾಹಿತಿ ಹಕ್ಕು ಅರ್ಜಿಯನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಸರ್ಕಾರದ ಹಣ ಮತ್ತು ಸಮಯ ಪೋಲಾಗುವುದನ್ನು ತಪ್ಪಿಸಬಹುದು. ಜೊತೆಗೆ ವೈಯಕ್ತಿಕವಾಗಿ ವಿಳಂಬ ಅರ್ಜಿ ವಿಲೇವಾರಿಗಾಗಿ ದಂಡ ತೆರುವುದನ್ನು ತಪ್ಪಿಸಬಹುದು. ಅಂತೆಯೆ ಕಡತಗಳನ್ನು ವಿದ್ಯುನ್ಮಾನ ರೂಪದಲ್ಲಿ ಸಂಗ್ರಹಿಸಿಡಬೇಕು. ಇದರಿಂದ ಕಡತಗಳನ್ನು ಹುಡುಕುವುದು ಸುಲಭವಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಪದ್ಮ ಬಸವಂತಪ್ಪ ಅವರು ನೌಕರರಲ್ಲಿರುವ ಕಾಯ್ದೆಯ ಬಗೆಗಿನ ಆತಂಕವನ್ನು ದೂರಮಾಡುವ ನಿಟ್ಟಿನಲ್ಲಿ ಈ ತರಬೇತಿಯನ್ನು ಆಯೋಜಿಸಲಾಗಿದೆ. ಕಾಯ್ದೆಯನ್ನು ಸ್ಪಷ್ಟವಾಗಿ ಅರಿತಲ್ಲಿ ನೌಕರರು ದೃತಿಗೆಡದೆ ಸಾರ್ವಜನಿಕರು ಕೋರಿರುವ ಮಾಹಿತಿಯನ್ನು ಲೋಪವಿಲ್ಲದಂತೆ ಒದಗಿಸಲು ಕ್ರಮವಹಿಸಬಹುದು. ಸಾರ್ವಜನಿಕರಿಗೆ ನೀಡಬಹುದಾದ ಮಾಹಿತಿಯ ಜೊತೆಗೆ ನೀಡಬಾರದಾದ ಮಾಹಿತಿಯ ಬಗೆಗೂ ಸಹ ತಿಳಿದುಕೊಳ್ಳಬೇಕು. ಒಟ್ಟಾರೆ ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಗಟ್ಟಬೇಕು. ಈ ತರಬೇತಿಯಲ್ಲಿ ನೌಕರರು ಯಾವುದೇ ಅನುಮಾನಗಳನ್ನು ಉಳಿಸಿಕೊಳ್ಳದಂತೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿಯನ್ನು ಕೇಳಿ ತಿಳಿದುಕೊಳ್ಳಬೇಕು. ಅಂತೆಯೇ ನಿಮ್ಮ ಕಛೇರಿಗಳಲ್ಲಿ ಸಹೋದ್ಯೋಗಿಗಳಿಗೆ ಕಾಯ್ದೆಯ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಖ್ಯಾತ ಬರಹಗಾರರು ಹಾಗೂ ಸಂಪನ್ಮೂಲ ವ್ಯಕ್ತಿ ವೈ.ಜಿ. ಮುರಳೀಧರನ್, ಅರ್.ಟಿ.ಐ ಸಂಪನ್ಮೂಲ ವ್ಯಕ್ತಿ ಮಂಜುನಾಥರೆಡ್ಡಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ರಾಮಚಂದ್ರಪ್ಪ, ಉಪ ಪ್ರಾಂಶುಪಾಲರಾದ ಮಲ್ಲಿಕಾರ್ಜುನ, ನಿವೃತ್ತ ಪ್ರಾಂಶುಪಾಲರಾದ ವೆಂಕಟರoಗನ್, ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಹಾಗೂ “ಸಿ” ವೃಂದದ ನೌಕರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *