ಕೋಲಾರ, ಮಹಿಳೆಯರಿಗೆ ಧರ್ಮಸ್ಥಳ ಸಂಸ್ಥೆಯಿoದ ನಾನಾ ಕ್ಷೇತ್ರಗಳಲ್ಲಿ ಪ್ರಗತಿ ಹೊಂದಲು ಸಮಗ್ರವಾದ ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಮೆಚ್ಚುಗೆಯ ಸಂಗತಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಸಿ.ವಿ ಸ್ನೇಹ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಆಶ್ರಯದಲ್ಲಿ ನಡೆದ ಮಹಿಳಾ ಕವಿಗೋಷ್ಠಿ ಮತ್ತು ಅಷ್ಟಲಕ್ಷ್ಮಿ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯ ಪ್ರತಿಯೊಂದು ಕಾರ್ಯಕ್ರಮವನ್ನು ಮಹಿಳಾ ಸಂಘದ ಸದಸ್ಯರು ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಹೊಂದುವoತೆ ಆಗಬೇಕು ಎಂದರಲ್ಲದೆ ಧರ್ಮಸ್ಥಳ ಸಂಸ್ಥೆಯಲ್ಲಿ ಜಾತಿ, ಮತ, ಧರ್ಮದ ಬೇದಭಾವವಿಲ್ಲದೆ ಪ್ರತಿಯೊಬ್ಬರು ಒಗ್ಗಟ್ಟಿನಿಂದ ಭಾಗವಹಿಸುವ ಧರ್ಮಸ್ಥಳ ಸಂಸ್ಥೆಯಾಗಿದೆ ಎಂದು ತಿಳಿಸಿದರು.
ಸಮಾಜ ಸೇವಕ ಸಿಎಂಆರ್ ಶ್ರೀನಾಥ್ ಮಾತನಾಡಿ, ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ಉದ್ಯೋಗಕ್ಕಾಗಿ ವಲಸೆ ಹೋಗುವ ಯುವಶಕ್ತಿಗೆ ಧರ್ಮಸ್ಥಳ ಸಂಸ್ಥೆಯಿoದ ಕಿರು ಉದ್ದಿಮೆಯ ಸ್ಥಾಪನೆ ಮಾಡಿ, ಜಿಲ್ಲೆಯಿಂದ ವಲಸೆ ಹೋಗುವ ಯುವಕರಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗವನ್ನು ದೊರಕಿಸಲು ಸಹಕಾರಿಯಾಗಬೇಕು ಎಂದರು.
ಚಿನ್ನದ ಜಿಲ್ಲೆ ಕೋಲಾರದಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚು ಅವಲಂಬನೆಯಾಗಿದ್ದು, ರೈತರ ಕೃಷಿ ಬೆಳೆಗೆ ಅಗತ್ಯವಾಗಿರುವ ಬಳಕೆ ವಸ್ತುಗಳನ್ನು ಕಿರು ಉದ್ದಿಮೆಯಲ್ಲಿ ತಯಾರಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದಬೇಕಾಗಿದೆ ಎಂದು ತಿಳಿಸಿದರು.
ಧರ್ಮಸ್ಥಳ ಸಂಸ್ಥೆಯ ನಾನಾ ಯೋಜನೆಗಳನ್ನು ಅಳವಡಿಸಿಕೊಂಡು, ಸಂಸ್ಥೆಯನ್ನು ನಿರಂತರವಾಗಿ ಮಹಿಳಾ ಸಂಘದ ಸದಸ್ಯರು ಮತ್ತಷ್ಟು ಬಲಿಷ್ಠ ಸಂಸ್ಥೆಯಾಗಿ ಹೊರವಮ್ಮುವಂತೆ ಶ್ರಮ ಹಾಕಬೇಕು ಎಂದು ನುಡಿದರು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ನಾನಾ ಕ್ಷೇತ್ರಗಳಲ್ಲಿ ಸಹ ಮುಂಚೂಣಿಯಲ್ಲಿ ಸಾಗುತ್ತಿದ್ದು, ಇಬ್ಬರೂ ಸಮಾಜದಲ್ಲಿ ಸಮಾನರು ಎನ್ನುವ ಮನೋಭಾವವನ್ನು ಸಂಸ್ಥೆ ಮಾಡುತ್ತಿದೆ ಎಂದು ಹೇಳಿದರು.
ಸಮಾಜದ ಕೌಟುಂಬಿಕ ವ್ಯವಸ್ಥೆಯಲ್ಲಿ ಪುರುಷರಿಂದ ಮಹಿಳೆಯರ ಮೇಲೆ ದೌರ್ಜನ್ಯ ದಬ್ಬಾಳಿಕೆಗಳನ್ನು ತಪ್ಪಿಸಲು ಪೊಲೀಸ್ ಇಲಾಖೆ ಕಾನೂನಾತ್ಮಕವಾಗಿ ಸರಿದಾರಿಗೆ ತರುವ ಕೆಲಸ ಮಾಡುತ್ತದೆ, ಧರ್ಮಸ್ಥಳ ಸಂಸ್ಥೆಯಿoದ ಇಬ್ಬರನ್ನು ಒಗ್ಗೂಡಿಸಿ ಒಂದು ಮಾಡಿ ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಪ್ರಾಮಾಣಿಕ ಪ್ರಯತ್ನ ವನ್ನು ಮಾಡುತ್ತಿದ್ದಾರೆ ಎಂದರು.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಸುನೀತಾ ಮಾತನಾಡಿ, ಮಹಿಳೆಯರು ತಮ್ಮ ಮೇಲೆ ನಡೆಯುವ ದೌರ್ಜನ್ಯ ದಬ್ಬಾಳಿಕೆಯನ್ನು ತಡೆಯಲು ೧೧೨ ನಂಬರಿಗೆ ದೂರವಾಣಿ ಕರೆ ಮಾಡಿದರೆ ಪೊಲೀಸರು ಬಂದು ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಅಂಕ ಗಳಿಸುವ ಯಂತ್ರವಾಗಿ ಮಾಡಿಕೊಳ್ಳುವ ಬದಲಿಗೆ ಮಾನವೀಯ ಮೌಲ್ಯವನ್ನು ತುಂಬುವ ಕೆಲಸವನ್ನು ಮಾಡಬೇಕಾಗಿದೆ ಎಂದರು.
ರಾಜ್ಯಾದ್ಯಂತ ಧರ್ಮಸ್ಥಳ ಸಂಸ್ಥೆ ಉತ್ತಮ ರೀತಿಯಲ್ಲಿ ಸಮಾಜದಲ್ಲಿ ನೊಂದವರ ಪರವಾಗಿ ಶ್ರಮವಹಿಸಿದ್ದು, ಈ ನಿಟ್ಟಿನಲ್ಲಿ ಕೋಲಾರ ಜಿಲ್ಲೆಯಲ್ಲಿ ಸಹ ಬದಲಾವಣೆಯಾಗಿದ್ದು ಇದಕ್ಕೆ ಸ್ತ್ರೀ ಶಕ್ತಿ ಸಂಘದ ಮಹಿಳೆಯರೇ ಸಾಕ್ಷಿಯಾಗಿದ್ದಾರೆ ಎಂದರು.
ಸಮಾಜದಲ್ಲಿ ದುರ್ಬಲರು ಮತ್ತು ಅಶಕ್ತರು ಯಾವುದೇ ಸೌಲಭ್ಯಗಳನ್ನು ಪಡೆಯದೆ ಇದ್ದ ಇವರಿಗೆ ಸಂಸ್ಥೆ ಸಹಾಯ ಹಸ್ತಕ್ಕೆ ನಿಂತಿರುವುದು ಮೆಚ್ಚುಗೆ ವಿಷಯ ಎಂದರು.
ಹಿರಿಯ ಲೇಖಕಿ ಹಾಗೂ ನಿವೃತ್ತ ಪ್ರಾಂಶುಪಾಲೆ ಸಿ.ಅಶ್ವತ್ಥಮ್ಮ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಟಮಕ ವೆಂಕಟೇಶ್, ಧರ್ಮಸ್ಥಳ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಟಿಎಸ್.ಸಿದ್ದ ಗಂಗಯ್ಯ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸೌಮ್ಯ, ಸಂಸ್ಥೆಯ ಮೇಲ್ವಿಚಾರಕ ವಿಜಯ್ ಕುಮಾರ್, ಹರೀಶ್ ಸೇರಿದಂತೆ ಸಂಸ್ಥೆಯ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.