ಶ್ರೀನಿವಾಸಪುರ ತೋಟಗಾರಿಕೆ ಕಚೇರಿಯೆದುರು ರೈತಸಂಘದಿoದ ನಿರ್ದೇಶಕರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

ಶ್ರೀನಿವಾಸಪುರ, ಕಳಪೆ ಬಿತ್ತನೆ ಆಲೂಗಡ್ಡೆ ಹಾಗೂ ಮಾಂಡೋಸ್ ಚಂಡಮಾರುತದಿoದ ನಷ್ಟವಾಗಿರುವ ಪ್ರತಿ ಎಕರೆಗೆ ೨ ಲಕ್ಷರೂ ಪರಿಹಾರ ನೀಡಿ ನಾಪತ್ತೆಯಾಗಿರುವ ಬೆಳೆ ವಿಮೆ ಕಂಪನಿ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ರೈತಸಂಘದಿoದ ತೋಟಗಾರಿಕೆ ಕಚೇರಿಯೆದುರು ನಷ್ಟ ಬೆಳೆ ಸಮೇತ ಹೋರಾಟ ಮಾಡಿ, ಸಹಾಯಕ ನಿರ್ದೇಶಕರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಜಿಲ್ಲೆಯ ರೈತರ ಅಮಾಯಕತನವನ್ನೇ ಬಂಡವಾಳವಾಗಿಸಿಕೊoಡಿರುವ ವಿಮೆ ಕಂಪನಿಗಳು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ರೈತರಿಂದ ಕೋಟಿಕೋಟಿ ಹಣವನ್ನು ಗೌರವಾನ್ವಿತ ಪ್ರಧಾನಮಂತ್ರಿ ಫಸಲ್ ಭಿಮಾ ವಿಮೆ ಹೆಸರಿನಲ್ಲಿ ಲೂಟಿ ಮಾಡುವ ಕಂಪನಿಗಳ ನಿಯಂತ್ರಣದಲ್ಲಿ ಹಿಡಿದುಕೊಳ್ಳಲು ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು.
ಅತಿವೃಷ್ಠಿ, ಅನಾವೃಷ್ಠಿ ಪ್ರಕೃತಿ ವಿಕೋಪ ಹಾಗೂ ರೋಗಗಳಿಂದ ನಷ್ಟವಾದಾಗ ರೈತರ ಕಷ್ಟಕಾಲದಲ್ಲಿ ನೆರವಾಗಬೇಕಿದ್ದ ವಿಮೆ ಕಂಪನಿಗಳೇ ನಾಪತ್ತೆಯಾಗಿದ್ದರೆ ಇನ್ನು ರೈತರಿಗೆ ನ್ಯಾಯ ಒದಗಿಸಿಕೊಳ್ಳುವ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ನೂರೊಂದು ನೆಪ ಹೇಳಿ ಕಂಪನಿ ಪರ ವಕಾಲತ್ತು ವಹಿಸುವ ಮಟ್ಟಕ್ಕೆ ಇಲಾಖೆಗಳು ಹದಗೆಟ್ಟಿವೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ತಾಲೂಕು ಅಧ್ಯಕ್ಷ ತರ‍್ನಹಳ್ಳಿ ಆಂಜಿನಪ್ಪ ಮಾತನಾಡಿ, ಟೊಮೇಟೊ, ಕ್ಯಾಪ್ಸಿಕಂ ಬೆಳೆಗಳಿಗೆ ಊಜಿ ನುಸಿರೋಗದಿಂದ ಸಂಪೂರ್ಣವಾಗಿ ಬೆಳೆ ನಾಶವಾಗಿ ಹಾಕಿದ ಬಂಡವಾಳ ಕೈಗೆ ಸಿಗದೆ ಮತ್ತೆ ಸಾಲ ಮಾಡಿ ವಾಡಿಕೆಯಂತೆ ಮನೆಯ ಹೆಂಡತಿ, ಮಕ್ಕಳ ಒಡವೆಯನ್ನು ಬ್ಯಾಂಕುಗಳಲ್ಲಿ ಅಡ ಇಟ್ಟು ೩,೫೦೦ರೂ ಹಣ ನೀಡಿ ಪ್ರತಿ ಮೂಟೆ ಬಿತ್ತನೆ ಆಲೂಗಡ್ಡೆಗೆ ನೀಡಿ ಬಿತ್ತನೆ ಮಾಡಿರುವ ರೈತರಿಗೆ ತಾವು ನಿರೀಕ್ಷೆ ಮಾಡಿದ ಇಳುವರಿ ಬಾರದೆ ಪ್ರತಿಮೂಟೆಗೆ ಕನಿಷ್ಠಪಕ್ಷ ೫ ಮೂಟೆಯೂ ಬಾರದೆ ಎಕರೆಗೆ ೧೦ ಮೂಟೆ ಗೋಳಿ ಗಡ್ಡೆ ಬರುವ ಮುಖಾಂತರ ಅದನ್ನೇ ನಂಬಿದ್ದ ರೈತ ತಲೆ ಮೇಲೆ ಕೈ ಒತ್ತು ಕೂರಬೇಕಾದ ಪರಿಸ್ಥಿತಿ ಇದ್ದರೂ ಸಂಬoಧಪಟ್ಟ ಅಧಿಕಾರಿಗಳನ್ನು ಕೇಳಿದರೆ ಹವಾಮಾನ ವೈಫರೀತ್ಯ ಮಾರಾಟಗಾರರು ಹಾಗೂ ಅಧಿಕಾರಿಗಳು ನಿಮ್ಮ ನೆರವಿಗೆ ನಿಲ್ಲಲು ಸಾಧ್ಯವಿಲ್ಲ ಎಂಬ ರೈತ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಊಜಿ ರೋಗ ಅಂಗಮಾರಿ ಅರ್ಧ ಬೆಳೆಯನ್ನು ಕಸಿದುಕೊಂಡರೆ ಮಾಂಡೋಸ್ ಚಂಡಮಾರುತ ರೈತರ ವರ್ಷದ ಗಂಜಿಯಾದ ರಾಗಿ ಬೆಳೆಯನ್ನು ಹಾಗೂ ವಾಣಿಜ್ಯ ಬೆಳೆಗಳನ್ನು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿ ಹೋಗುವ ಹಾಗೆ ಕಸಿದುಕೊಂಡಿದೆ.
ಹಾಕಿದ ಬಂಡವಾಳ ಕೈಗೆ ಬಾರದೆ ಸರ್ಕಾರ ನೀಡುವ ಪರಿಹಾರಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ರೈತರಿಗೆ ಒಂದು ವಾರದೊಳಗೆ ಪರಿಹಾರದ ಹಣ ಬಿಡುಗಡೆ ಮಾಡಿ ಬೆಳೆ ವಿಮೆ ಕಟ್ಟಿಸಿಕೊಂಡು ನಾಪತ್ತೆಯಾಗಿರುವ ಕಂಪನಿ ಮಾಲೀಕರ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸು ದಾಖಲಿಸಿ ಕಂಪನಿಯ ಪರವಾನಗಿಯನ್ನು ಕಪ್ಪುಪಟ್ಟಿಗೆ ಸೇರಿಸಿ, ನಷ್ಟವಾಗಿರುವ ಪ್ರತಿ ಎಕರೆಗೆ ೨ ಲಕ್ಷರೂ ಪರಿಹಾರ ಘೋಷಣೆ ಮಾಡಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತೋಟಗಾರಿಕೆ ಇಲಾಖೆ ಸಹಾಯಕ ನಿದೇರ್ಶಕರು, ಬೆಳೆ ನಷ್ಟದ ಬಗ್ಗೆ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮುಖಾಂತರ ವರದಿ ಕಳುಹಿಸಿದ್ದೇವೆ. ಬೆಳೆ ವಿಮೆ ಪಾವತಿಸದ ಕಂಪನಿ ವಿರುದ್ಧ ಕ್ರಮಕೈಗೊಳ್ಳಲು ಸಹ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದೇವೆ, ಪರಿಹಾರ ಬಂದ ತಕ್ಷಣ ರೈತರ ಖಾತೆಗಳಿಗೆ ಜಮಾ ಮಾಡುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೋಟೆ ಶ್ರೀನಿವಾಸ್, ವೆಂಕಟ್, ಮುನಿರಾಜು, ಶೇಷಾದ್ರಿ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಂಗಸoದ್ರ ತಿಮ್ಮಣ್ಣ, ಶೇಖ್ ಷಫೀಉಲ್ಲಾ, ವೆಂಕಟಸ್ವಾಮಿ, ವೆಂಕಟೇಶ್, ಯಲುವಳ್ಳಿ ಪ್ರಭಾಕರ್, ಸಂದೀಪ್‌ರೆಡ್ಡಿ, ಸಂದೀಪ್‌ಗೌಡ ಮುಂತಾದವರಿದ್ದರು.

Leave a Reply

Your email address will not be published. Required fields are marked *