ಕೋಲಾರ:- ಶೈಕ್ಷಣಿಕ ಇತಿಹಾಸದಲ್ಲೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯುಸಿಗೆ ೨ನೇ ಪೂರಕ ಪರೀಕ್ಷೆ ನಡೆಸಲು ಸರ್ಕಾರ ಆದೇಶಿಸಿದ್ದು, ಅದರಂತೆ ಆ.೨೧ ರಿಂದ ಜಿಲ್ಲೆಯ ಒಟ್ಟು ೬ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿರುವುದರಿಂದ ಸಕಲ ಸಿದ್ದತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಕಳೆದ ಮಾರ್ಚ್ ವಾರ್ಷಿಕ ಪರೀಕ್ಷೆ, ಮೇ ಪೂರಕ ಪರೀಕ್ಷೆ ಹಾಗೂ ಹಿಂದಿನ ವರ್ಷಗಳಲ್ಲಿ ದ್ವಿತೀಯ ಪಿಯುಸಿ ಅನುತ್ತೀರ್ಣರಾದ ಅಭ್ಯರ್ಥಿಗಳು ಈ ಪರೀಕ್ಷೆ ಬರೆಯುತ್ತಿದ್ದು, ಕೋಲಾರ, ಮಾಲೂರು, ಬಂಗಾರಪೇಟೆ, ಕೆಜಿಎಫ್,ಮುಳಬಾಗಿಲು ಮತ್ತು ಶ್ರೀನಿವಾಸಪುರಗಳಲ್ಲಿ ತಲಾ ಒಂದೊoದು ಕೇಂದ್ರದಲ್ಲಿ ಮಾತ್ರ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಸುಗಮ ಪರೀಕ್ಷೆಗಾಗಿ ಎಲ್ಲಾ ಸಿದ್ದತೆಗಳನ್ನು ಕೈಗೊಂಡಿದ್ದು, ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ಎಲ್ಲಾ ಅಗತ್ಯಗಳ ಕುರಿತು ಗಮನಹರಿಸಲಾಗಿದೆ ಎಂದು ತಿಳಿಸಿದ್ದಾರೆ.
೨೦೦ಮೀ.ವ್ಯಾಪ್ತಿ ನಿಷೇಧಾಜ್ಞೆ ಜಾರಿ
ಪರೀಕ್ಷಾ ಕೇಂದ್ರಗಳ ಸುತ್ತ ೨೦೦ ಮೀಟರ್ ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿಗಳು ಜಾರಿ ಮಾಡಿದ್ದು, ಈ ಭಾಗದಲ್ಲಿನ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷೆ ನಡೆಯುವ ಸಂದರ್ಭದಲಿ ಬಂದ್ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಿಗೆ ಗುರುತಿನ ಚೀಟಿ ಹೊಂದಿರುವ ಪರೀಕ್ಷಾ ಸಿಬ್ಬಂದಿ,ಪ್ರವೇಶಪತ್ರ ಇರುವ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇತರರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್, ಕೈಗಡಿಯಾರ, ಎಲೆಕ್ಟಾನಿಕ್ ವಸ್ತುಗಳನ್ನು ತರುವುದಕ್ಕೂ ನಿಷೇಧವಿದ್ದು, ಮುಖ್ಯ ಅಧೀಕ್ಷಕರು ಮಾತ್ರ ಬೇಸಿಕ್ ಸೆಟ್ ಮೊಬೈಲ್ ಬಳಸಲು ಅವಕಾಶವಿದೆ, ಇತರೆ ಪರೀಕ್ಷಾ ಸಿಬ್ಬಂದಿಯೂ ಮೊಬೈಲ್ ತರುವಂತಿಲ್ಲ, ಪರೀಕ್ಷಾ ಕೇಂದ್ರಗಳಿಗೆ ಫೋಟೋಗ್ರಾಫರ್, ವೀಡಿಯೋ ಗ್ರಾಫರ್‌ಗಳಿಗೂ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಪರೀಕ್ಷಾ ಕಾರ್ಯಕ್ಕೆ ಪರೀಕ್ಷಾ ವಿಷಯಕ್ಕೆ ಸಂಬoಧಿಸಿದ ಉಪನ್ಯಾಸಕರನ್ನು ಆಯಾ ದಿನ ನೇಮಿಸಿಕೊಳ್ಳಬಾರದು ಎಂದು ತಿಳಿಸಿರುವ ಅವರು, ಪರೀಕ್ಷಾ ದುರಾಚಾರಗಳಿಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ಮಾತನಾಡಿ, ಸುಗಮ ಪರೀಕ್ಷೆಗಾಗಿ ಕೇಂದ್ರ ಕಚೇರಿಯ ಜಾಗೃತದಳ, ಉಪನಿರ್ದೇಶಕರ ಕಚೇರಿಯ ಜಾಗೃದಳ, ಪದವಿ ಪೂರ್ವ ಶಿಕ್ಷಣ ಇಲಾಖೆಯ ತಾಲ್ಲೂಕು ಜಾಗೃದಳ ಹಾಗೂ ಪ್ರತಿ ಕೇಂದ್ರಕ್ಕೂ ಸ್ಥಾನಿಕ ಜಾಗೃತಗಳು ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ.
ವೇಳಾಪಟ್ಟಿ ಪ್ರಕಟ
ಆ.೨೧ ಕನ್ನಡ, ಆ.೨೨ ರಂದು ಐಚ್ಚಿಕ ಕನ್ನಡ, ರಸಾಯನ ಶಾಸ್ತ, ಬೇಸಿಕ್ ಗಣಿತ, ಆ.೨೩ ರಂದು ಸಮಾಜಶಾಸ್ತ, ಎಲೆಕ್ಟಾನಿಕ್ಸ್, ಕಂಪ್ಯೂಟರ್ ಸೈನ್ಸ್, ಆ.೨೪ ರಂದು ಲಾಜಿಕ್, ಹಿಂದೂಸ್ತಾನಿ ಮ್ಯೂಸಿಕ್, ಬ್ಯುಸಿನೆಸ್ ಸ್ಟಡೀಸ್, ಆ.೨೫ ರಂದು ಇತಿಹಾಸ, ಸ್ಟಾಟಿಸ್ಟಿಕ್ಸ್, ಆ.೨೬ ರಂದು ಇಂಗ್ಲೀಷ್, ಆ.೨೮ ರಂದು ಜಿಯಾಗ್ರಫಿ, ಪಿಸಿಯಾಲಜಿ, ಭೌತಶಾಸ್ತ, ಆ.೨೯ ರಂದು ಅಕೌಂಟೆನ್ಸಿ, ಜಿಯಾಲಜಿ, ಎಜುಕೇಷನ್, ಹೋಂ ಸೈನ್ಸ್, ಆ.೩೦ ರಂದು ರಾಜ್ಯಶಾಸ್ತ ಮತ್ತು ಗಣಿತ, ಆ.೩೧ ರಂದು ಹಿಂದಿ, ಸೆ.೧ ರಂದು ಅರ್ಥಶಾಸ್ತ, ಬಯಾಲಜಿ, ಸೆ.೨ ರಂದು ತಮಿಳು, ತೆಲುಗು, ಮಲಯಾಳಂ,ಮರಾಠಿ, ಉರ್ದು, ಸಂಸ್ಕೃತ, ಫ್ರೇಂಚ್ ವಿಷಯಗಳ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದೇ ಪರೀಕ್ಷೆ ಬರೆಯಲು ಸಲಹೆ ನೀಡಿರುವ ಅವರು, ಸರ್ಕಾರ ಒಂದು ಶೈಕ್ಷಣಿಕ ವರ್ಷದಿಂದ ಮಕ್ಕಳು ವಂಚಿತರಾಗಬಾರದು ಎಂದು ಕಲ್ಪಿಸಿರುವ ಈ ಸುವರ್ಣಾವಕಾಶವನ್ನು ಬಳಸಿಕೊಂಡು ಉತ್ತೀರ್ಣರಾಗಿ ಮುಂದಿನ ಕಲಿಕೆ ಮುಂದುವರೆಸಲು ತಿಳಿಸಿ ಶುಭ ಕೋರಿದ್ದಾರೆ.