ಕೋಲಾರ, ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ವಿಧ್ಯಾಭ್ಯಾಸ ಕೊಡಿಸುವುದರಲ್ಲಿ ಹಿಂದೆ ಉಳಿದಿದ್ದು, ಪ್ರತಿ ಮಗುವೂ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಮತ್ತು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಂ.ಶಿವಣ್ಣ (ಕೋಟೆ) ರವರು ತಿಳಿಸಿದರು.
ಇಂದು ನಗರದ ಟಿ.ಚನ್ನಯ್ಯ ರಂಗಮoದಿರದಲ್ಲಿ ಕರ್ನಾಟಕ ಸಫಾಯಿ ಕರ್ಮಚಾರಿಗಳ ಆಯೋಗ ಮತ್ತು ಅಭಿವೃದ್ಧಿ ನಿಗಮ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪೌರಕಾರ್ಮಿಕರ ಪರಿಸ್ಥಿತಿ ಈಗಲೂ ಶೋಚನೀಯವಾಗಿದೆ. ಜಿಲ್ಲೆಯಲ್ಲಿ ಸ್ಯಾನೇಟರಿ ಶೌಚಾಲಯಗಳನ್ನು ಇನ್‌ಸ್ಯಾನೇಟರಿ ಶೌಚಾಲಯಗಳನ್ನಾಗಿ ಪರಿರ್ವತಿಸಲು ಆದ್ಯತೆ ನೀಡಬೇಕಾಗಿದೆ. ಜಿಲ್ಲೆಯಲ್ಲಿ ಇನ್ನೂ ಮಲಗುಂಡಿಗಳು ಅಸ್ಥಿತ್ವದಲ್ಲಿದ್ದು, ಸಂಬoಧ ಪಟ್ಟ ಅಧಿಕಾರಿಗಳು ನಿರಂತರ ಸರ್ವೇ ನಡೆಸಿ ಸೂಕ್ತ ಕ್ರಮವನ್ನು ವಹಿಸಬೇಕು ರಾಜ್ಯದಲ್ಲಿ ಆರೇಳು ಸಾವಿರ ಮ್ಯಾನುಯೆಲ್ ಸ್ಕಾವೆಂಜರ್ ಇದ್ದಾರೆ ಪೌರಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದಾಗಿ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದರು.
ಪೌರಕಾರ್ಮಿಕರ ಅವರ ಆರೋಗ್ಯದ ಕಡೆ ಗಮನ ಹರಿಸಬೇಕು. ಅವರ ಆಯಸ್ಸು ಕೇವಲ ೫೦ರಿಂದ ೬೦ ವರ್ಷ ಅಷ್ಟೇ ಅವರಿಗೆ ನಿವೇಶನ, ಮನೆ ಕೂಡ ಕಲ್ಪಿಸಲಾಗುತ್ತದೆ. ಗೌರವ ಕೂಡ ನೀಡಲಾಗುತ್ತಿದೆ. ಪ್ರಧಾನಿ ಮೋದಿಯವರು ಪೌರಕಾರ್ಮಿಕರಿಗೆ ಪಾದಪೂಜೆ ಮಾಡಿ ಗೌರವ ಸಲ್ಲಿಸಿದ್ದಾರೆ. ಕೆಲಸದಲ್ಲಿ ಬದ್ಧತೆ ತೋರಿಸಿ ಸರಕಾರದ ಸೌಲಭ್ಯ ಸರಿಯಾಗಿ ಬಳಸಿಕೊಳ್ಳಬೇಕು. ಪೌರಕಾರ್ಮಿಕರಿಗೂ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಪೌರಕಾರ್ಮಿಕರಾದ ಮಲ್ಲಮ್ಮ ಒಂದು ದಿನವೂ ರಜೆ ಪಡೆದಿರಿಲಿಲ್ಲ. ಬೆಳಿಗ್ಗೆ ಕೆಲಸ ಮಾಡಿ ನಂತರ ಮಗಳ ಮದುವೆಗೆ ಹೋದ ಉದಾಹರಣೆ ಇದೆ ಎಂದರು.
ರಾಜ್ಯಾದ್ಯoತ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಆಸ್ಪತ್ರೆ, ಪಂಚಾಯಿತಿ, ಕಾರ್ಖಾನೆ, ಹಾಸ್ಟೆಲ್‌ಗಳಲ್ಲಿ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರಿಗೂ ಕನಿಷ್ಠ ವೇತನ ನೀಡಬೇಕು. ರಾಜ್ಯದಾದ್ಯಂತ ಸಮೀಕ್ಷೆ ನಡೆಸಬೇಕು. ಗುರುತಿನ ಚೀಟಿ ನೀಡಬೇಕು. ಇದರಿಂದ ಸೌಲಭ್ಯ ಒದಗಿಸಲು ಸುಲಭವಾಗುತ್ತದೆ. ಎಲ್ಲಾ ಕಾರ್ಪೊರೇಷನ್ ನಲ್ಲಿ ಕೆಲಸ ಮಾಡುವ ಮಹಿಳಾ ಪೌರಕಾರ್ಮಿಕರಿಗೆ ದ್ವಿಚಕ್ರ ವಾಹನ ನೀಡಲು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ. ಈಗಾಗಲೇ ವಿಧಾನಸೌಧದಲ್ಲಿ ಕೆಲವು ಮಹಿಳೆಯರಿಗೆ ನೀಡಲಾಗಿದೆ. ಕೊರೊನಾ ಸಮಯದಲ್ಲಿ ಎಲ್ಲರೂ ಮನೆಯಿಂದ ಕೆಲಸ ಮಾಡಿದರು. ಆದರೆ, ಪೌರಕಾರ್ಮಿಕರು ಬೀದಿಗಿಳಿದು ತಮ್ಮ ಕೆಲಸವನ್ನು ನಿರ್ವಹಿಸಿದರು ಎಂದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಪೌರಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು. ಸಿಂಗಪುರ್ ಪ್ರವಾಸ ಕೂಡ ಆಯೋಜಿಸಲಾಗಿದೆ. ರಾಜ್ಯದಿಂದಲೂ ೩೫೦ ಪೌರಕಾರ್ಮಿಕರು ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಕೋಲಾರದಿಂದ ಐವರಿಗೆ ಈ ಅವಕಾಶ ದೊರೆತಿದೆ. ಅಲ್ಲಿನ ಸ್ವಚ್ಛತಾ ವಿಧಾನದ ಬಗ್ಗೆ ತರಬೇತಿ ಪಡೆಯಲಿದ್ದಾರೆ. ಅಂಬೇಡ್ಕರ್ ಮೆಮೋರಿಯಲ್ ಸ್ಥಾಪಿಸಲು ಕೆಜಿಎಫ್ ಪ್ರದೇಶದಲ್ಲಿ ಐದು ಎಕರೆ ಜಾಗವನ್ನು ನಿಗಧಿಗೊಳಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ ಹಾಗೂ ಉನ್ನತ ಶಿಕ್ಷಣ ಮಾಡುವವರಿಗೆ ವಿದ್ಯಾರ್ಥಿವೇತನ ನೀಡಿ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಚಂದ್ರಕಲಾ, ನಗರಸಭೆ ಅಧ್ಯಕ್ಷೆ ಶ್ವೇತ ಶಬರೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ಪ್ರೊಫೆಷನರಿ ಐ.ಎ.ಎಸ್. ಅಧಿಕಾರಿ ವಿನಯ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕಲ್ಲೇಶ್, ಸಹಾಯಕ ನಿರ್ದೇಶಕ ಚನ್ನಬಸಪ್ಪ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಪಲ್ಲವಿ, ಪೌರಾಯುಕ್ತೆ ಬಿ.ಎಸ್.ಸುಮ, ಪೌರಕಾರ್ಮಿಕರ ಸಂಘದ ಪದ್ಮ, ರವಣಪ್ಪ, ವೆಂಕಟರವಣಪ್ಪ, ಜಿಲ್ಲಾ ಜಾಗೃತಿ ಸಮಿತಿಯ ಆನಂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.