ಶಾಸಕಿ ರೂಪಕಲಾ ಕನಸಿನ ಕೆಜಿಎಫ್ ತಾಲ್ಲೂಕು ಸುಸಜ್ಜಿತ ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೆ ಬೇಗಮಂಗಲ – ವಿಕೋಟಾ ರಸ್ತೆಯಲ್ಲಿ ೨೫ ಎಕರೆ ಜಮೀನಿನ ಗಡಿ ಗುರುತಿಸುವ ಕಾರ್ಯ ಯಶಸ್ವಿ

ಕೋಲಾರ:- ಕೆಜಿಎಫ್ ತಾಲ್ಲೂಕಿಗೆ ಪ್ರತ್ಯೇಕವಾದ ಹಾಗೂ ಜಿಲ್ಲೆಯಲ್ಲೇ ಅತ್ಯಂತ ಸುಸಜ್ಜಿತ ಕೃಷಿ ಉತ್ಪನ್ನ ಮಾರುಕಟ್ಟೆ ಮಂಜೂರು ಮಾಡಿಸಿಕೊಳ್ಳುವಲ್ಲಿ ಸಫಲರಾಗಿರುವ ಶಾಸಕಿ ರೂಪಕಲಾ ಶಶಿಧರ್, ಇದೀಗ ನೂತನ ಎಪಿಎಂಸಿ ಮಾರುಕಟ್ಟೆ ಪ್ರಾಂಗಣ ನಿರ್ಮಾಣಕ್ಕೆ ಬೇತಮಂಗಲ-ವಿಕೋಟೆ ಮುಖ್ಯ ರಸ್ತೆಯಲ್ಲಿ ಗುರುತಿಸಿರುವ ೨೫ ಎಕರೆ ಜಮೀನಿನ ಗಡಿ ಗುರುತಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸಿದರು.
ಶನಿವಾರ ಶಾಸಕಿ ರೂಪಕಲಾ ಶಶಿಧರ್ ನೇತೃತ್ವದಲ್ಲಿ ಬೇತಮಂಗಲ ವಿ.ಕೋಟೆ ಮುಖ್ಯ ರಸ್ತೆಯ ಕದಿರಿಗಾನಕುಪ್ಪ ಗ್ರಾಮದ ಸ.ನಂ.೩ ರಲ್ಲಿ ೨೦.೦೦ ಎಕರೆ ಮತ್ತು ಎನ್,ಜಿ.ಹುಲ್ಕೂರು ಗ್ರಾಮದ ಸ.ನಂ.೭೧ ರಲ್ಲಿ ೫.೦೦ ಎಕರೆ ಒಟ್ಟು ೨೫.೦೦ ಎಕರೆ ಜಮೀನು ಮಂಜೂರು ಮಾಡಿಸಿರುವ ಶಾಸಕರು ಸ್ವಾಧೀನದಲ್ಲಿದ್ದ ಕೆಲವರ ಮನವೊಲಿಸಿ ಗಡಿ ಗುರುತಿಸುವ ಕಾರ್ಯ ಮುಗಿಸಿ ಬಂಗಾರಪೇಟೆ ಎ.ಪಿ.ಎಂ.ಸಿ. ಅಧಿಕಾರಿಗಳಿಗೆ ತಾಲ್ಲೂಕು ಆಡಳಿತದಿಂದ ಹಸ್ತಾಂತರಿಸಿದರು.
ಕೆಜಿಎಫ್ ಮಾರುಕಟ್ಟೆ ಜಿಲ್ಲೆಗೆ ಮಾದರಿ:
ಅಧಿಕಾರಿಗಳೊಂದಿಗೆ ಗಡಿ ಗುರುತಿಸುವ ಕಾರ್ಯ ಮುಗಿಯುವರೆಗೂ ಸ್ಥಳದಲ್ಲೇ ಇದ್ದ ಶಾಸಕರು ಪತ್ರಕರ್ತರೊಂದಿಗೆ ಮಾತನಾಡಿ, ತಾವು ಸದನದಲ್ಲಿ ಒತ್ತಡ ಹಾಕಿ ರಾಜ್ಯ ಸರ್ಕಾರ, ಸಚಿವರು, ಮುಖ್ಯಮಂತ್ರಿಗಳ ಮನವೊಲಿಸಿ ತಮ್ಮ ಕ್ಷೇತ್ರವೂ ಆಗಿರುವ ಕೆಜಿಎಫ್ ತಾಲ್ಲೂಕಿಗೆ ಎಪಿಎಂಸಿ ಮಾರುಕಟ್ಟೆ ಮಂಜೂರು ಮಾಡಿಸಿಕೊಳ್ಳುವಲ್ಲಿ ನಡೆಸಿದ ನಿರಂತರ ಪ್ರಯತ್ನ ಫಲ ನೀಡಿದ್ದು, ಈ ಮಾರುಕಟ್ಟೆ ಜಿಲ್ಲೆಯಲ್ಲೇ ಅತ್ಯಂತ ಸುಸಜ್ಜಿತ ಮಾರುಕಟ್ಟೆಯಾಗಲಿದೆ ಎಂದು ತಿಳಿಸಿದರು.
ಈ ಮಾರುಕಟ್ಟೆಗೆ ಹೊಂದಿಕೊoಡoತೆ ಆಂಧ್ರಪ್ರದೇಶದ ವಿಕೋಟೆ ರಿಂಗ್ ರೋಡ್ ಹಾದು ಹೋಗಲಿದೆ ಜತೆಗೆ ಚೆನ್ನೆ – ಬೆಂಗಳೂರು ಎಕ್ಸ್ಪ್ರೆಸ್ ಕಾರಿಡಾರ್ ಸಹಾ ಹಾದು ಹೋಗಿದ್ದು, ಮಾರುಕಟ್ಟೆಯಿಂದ ಕೇವಲ ೩ ಕಿ.ಮೀ ದೂರದಲ್ಲಿ ಸುಂದರಪಾಳ್ಯದ ಸಮೀಪ ಈ ಕಾರಿಡಾರ್‌ಗೆ ಸಂಪರ್ಕರಸ್ತೆಯೂ ಇದೆ ಎಂದು ತಿಳಿಸಿದರು.
ಅದೇ ರೀತಿ ರಾಜ್ಯ ಸರ್ಕಾರದಿಂದ ಎಪಿಎಂಸಿ ಮಾರುಕಟ್ಟೆ ಸಮೀಪವೇ ಚೆನ್ನೆ ಕಾರಿಡಾರ್‌ಗೆ ಹೊಂದಿಕೊoಡoತೆ ಟ್ರಕ್ ಟರ್ಮಿನಲ್ ನಿರ್ಮಿಸಲು ೪೦ ಎಕರೆ ಜಮೀನನ್ನು ಈಗಾಗಲೇ ಜಿಲ್ಲಾಧಿಕಾರಿಗಳು ಗುರುತಿಸಿದ್ದಾರೆ. ಇದರಿಂದಾಗಿ ಕೆಜಿಎಫ್ ಎಪಿಎಂಸಿ ಮಾರುಕಟ್ಟೆ ತರಕಾರಿ,ಕೃಷಿ ಉತ್ಪನ್ನಗಳ ಸಾಗಾಣೆ, ಮಾರುಕಟ್ಟೆ ವಿಸ್ತರಣೆಗೆ ಇಡೀ ಜಿಲ್ಲೆಯಲ್ಲೇ ಅತ್ಯಂತ ಅನುಕೂಲಕರ ಪ್ರದೇಶದಲ್ಲಿದೆ ಎಂದು ತಿಳಿಸಿದರು.
ಸ್ವಾಧೀನದಾರರಿಂದ ಇದ್ದ ಅಡಿ ್ಡನಿವಾರಣೆ :
ಸದರಿ ಎಪಿಎಂಸಿ ಮಾರುಕಟ್ಟೆ ಜಾಗದಲ್ಲಿ ಕೆಲವು ರೈತರು, ದರಖಾಸ್ತು ಮೂಲಕ ಜಮೀನಿಗೆ ಅರ್ಜಿ ಹಾಕಿಕೊಂಡಿದ್ದು, ಮಾರುಕಟ್ಟೆಗೆ ಜಾಗ ನೀಡುವುದರಿಂದ ತಮ್ಮ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗಲಿದೆ ಎಂದು ಅಳಲು ತೋಡಿಕೊಂಡಿದ್ದರು. ಇದನ್ನರಿತ ಶಾಸಕರು, ಸ್ಥಳದಲ್ಲೇ ಇದ್ದು, ಸದರಿ ರೈತರ ಮನವೊಲಿಸಿ, ಬೇರೊಂದು ಕಡೆ ನಿಮಗೆ ಪರ್ಯಾಯವಾಗಿ ಅಗತ್ಯವಿರುವ ಕೃಷಿ ಭೂಮಿ ಒದಗಿಸುವ ಭರವಸೆ ನೀಡಿ ಮಾರುಕಟ್ಟೆ ಜಾಗದ ಗಡಿ ಗುರುತಿಸುವ ಕಾರ್ಯ ಸುಗಮವಾಗಿ ನಡೆಯುವಂತೆ ನೋಡಿಕೊಂಡರು.
ಈ ಮಾರುಕಟ್ಟೆಯಿಂದಾಗಿ ಕೆಜಿಎಫ್ ತಾಲ್ಲೂಕಿನ ಆರ್ಥಿಕತೆ ಉತ್ತಮಗೊಳ್ಳಲಿದೆ, ಇಲ್ಲಿನ ರೈತರು ಚೆನ್ನೆ,ವಿಕೋಟಾಗೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಲು ಹೋಗಬೇಕಿದ್ದರಿಂದಾಗಿ ಆಗುತ್ತಿದ್ದ ಸಾಗಾಣಿಕಾ ವೆಚ್ಚವೂ ಕಡಿಮೆಯಾಗಲಿದೆ, ಹೊಸ ತಾಲ್ಲೂಕಿನ ಸಮಗ್ರ ಅಭಿವೃದ್ದಿಗೆ ಈ ಮಾರುಕಟ್ಟೆ ದಾರಿಮಾಡಿಕೊಡಲಿದೆ ಎಂದರು.
ಆದಷ್ಟು ಶೀಘ್ರವಾಗಿ ಕಾಂಪೌoಡ್ ನಿರ್ಮಾಣ ಮಾಡಲು ಅಥವಾ ತಂತಿ ಬೇಲಿ ಅಳವಡಿಸಲು ಎ.ಪಿ.ಎಂ.ಸಿ, ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಸದರಿ ಜಮೀನಿನಲ್ಲಿ ಯಾವುದೇ ಅನಧಿಕೃತ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಲು ಸ್ಥಳೀಯರಗೆ ಮನವಿ ಮಾಡಿ, ಜಮೀನಿನ ಅಳತೆ ಕಾರ್ಯದಲ್ಲಿ ಭಾಗವಹಿಸದ್ದ ಅಧಿಕಾರಿಗಳು, ಬಂದೋಬಸ್ತ್ ಮಾಡಿದ್ದ ಪೊಲೀಸ್ ಸಿಬ್ಬಂದಿಗೆ ಶಾಸಕರು ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಜಾತಾ, ಎಪಿಎಂಸಿ ಮಾಜಿ ಅಧ್ಯಕ್ಷ ವಿಜಯರಾಘವರೆಡ್ಡಿ, ಮಾಜಿ ನಿರ್ದೇಶಕರಾದ ರಾಮಚಂದ್ರ, ಸುಂದರಪಾಳ್ಯ ಗ್ರಾ.ಪಂ ಅಧ್ಯಕ್ಷ ರಾಮ್‌ಬಾಬು , ವೆಂಗಸoದ್ರ ಗ್ರಾ.ಪಂ ಅಧ್ಯಕ್ಷ ಶಂಕರ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಪ್ರಭಾಕರ್, ರಾಜಸ್ವ ನಿರೀಕ್ಷಕಿ ಪ್ರೇಮ, ಪಿಡಿಒ ಚಂದ್ರಕಲಾ ಗ್ರಾಮ ಲೆಕ್ಕಾಧಿಕಾರಿ ಮೀನ, ಭೂಮಾಪಕರಾದ ಮೌಲಾಖಾನ್, ಮುಖಂಡರಾದ ಕೃಷ್ಣಪ್ಪ, ಚಂದ್ರಕಾoತ್, ಜಯರಾಮರೆಡ್ಡಿ, ಅಫ್ರೋಜ್, ನಾರಾಯಣಸ್ವಾಮಿ, ಸೀನಪ್ಪ, ಅಪ್ಪಾಜಿ ಗೌಡ,ರಾಜೇಂದ್ರ, ಸುರೇಂದ್ರಗೌಡ, ವೆಂಕಟರಾಮ್, ಕೃಷ್ಣಮೂರ್ತಿ, ರಿಝ್ವಾನ್, ಶ್ರೀನಿವಾಸನಾಯುಡು, ಮುನಿರಾಜು, ಮುರಳಿ, ರಮೇಶ್‌ಬಾಬು, ಕದಿರೆಪ್ಪ ಮತ್ತಿತರರಿದ್ದರು.

Leave a Reply

Your email address will not be published. Required fields are marked *