ಕೋಲಾರ, ಕೋಲಾರ, ೨೦೨೩ರ ವಿಧಾನಸಭೆ ಚುನಾವಣೆಯಲ್ಲಿ ಗಡಿಭಾಗದಲ್ಲಿ ಅಕ್ರಮವಾಗಿ ಮದ್ಯ ಮಾರಾಟ- ಸಾಗಾಣಿಕೆಗೆ ಕಡಿವಾಣ ಹಾಕಲು ಕರ್ನಾಟಕ ಮತ್ತು ಆಂದ್ರಪ್ರದೇಶ ಮತ್ತು ತಮಿಳುನಾಡು ಅಂತರರಾಜ್ಯ ಅಬಕಾರಿ ಅಧಿಕಾರಿಗಳ ಸಮನ್ವಯ ಸಭೆ ಕೋಲಾರದ ಹೊರವಲಯದ ಖಾಸಗೀ ಹೋಟೆಲ್ ನಲ್ಲಿ ನಡೆಯಿತು.
ಸಭೆಯಲ್ಲಿ ಆಂದ್ರಪ್ರದೇಶದ ಅನ್ನಮಯ್ಯ ಜಿಲ್ಲೆ, ಸತ್ಯಸಾಯಿ ಜಿಲ್ಲೆ, ಚಿತ್ತೂರು ಜಿಲ್ಲೆ, ಹಿಂದೂಪುರ ಜಿಲ್ಲೆ, ಹಾಗೂ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಹಾಗೂ ಕೋಲಾರ ಜಿಲ್ಲೆಯ ಅಬಕಾರಿ ಅಧಿಕಾರಿಗಳು ಉಪಸ್ಥಿತಿಯಲ್ಲಿ ಕರ್ತವ್ಯ ನಿರ್ವಹಣೆ ಬಗ್ಗೆ ಚರ್ಚೆ ನಡೆಸಿದರು.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸಂದರ್ಭದಲ್ಲಿ ಯಾವುದೇ ರೀತಿಯ ಅಕ್ರಮ ಮದ್ಯ ಸಾಗಾಣಿಕೆ- ಮಾರಾಟ ನಡೆಯದಂತೆ ಕಟ್ಟೆಚ್ಚರ ವಹಿಸಬೇಕು. ದಾಳಿ ಮಾಡುವಾಗ ಜಂಟಿ ಕಾರ್ಯಾಚರಣೆ ಮಾಡಬೇಕು. ಒಬ್ಬರಿಗೊಬ್ಬರು ಸಹಕಾರ ನೀಡುವ ಮನೋಭಾವನೆ ಬೆಳೆಸಿಕೊಂಡು ಅಕ್ರಮ ಮದ್ಯದ ವಿರುದ್ದ ಸಮರ ನಡೆಸಬೇಕೆಂದು ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಚುನಾವಣೆಯಲ್ಲಿ ಸಂದರ್ಭದಲ್ಲಿ ಗಡಿಭಾಗದಲ್ಲಿ ಅಬಕಾರಿ ಚೆಕ್ ಪ್ರೋಸ್ಟ್ ತೆರೆಯಬೇಕು. ಪ್ರತಿ ದಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಗಸ್ತು ತಿರುಗುತ್ತಿರಬೇಕು. ಅಕ್ರಮ ಮದ್ಯ ಸಾಗಾಣಿಕೆ- ಮಾರಾಟದ ಬಗ್ಗೆ ದೂರುಗಳು ಬಂದಾಗ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು ಎಂದು ಸಭೆಯಲ್ಲಿ ಚರ್ಚೆ ನಡೆಯಿತು.
ಅಕ್ರಮ ಮದ್ಯ ಸಾಗಾಣಿಕೆ ಮತ್ತು ಮಾರಾಟ ವಿಚಾರದಲ್ಲಿ ಕರ್ನಾಟಕ, ಆಂದ್ರಪ್ರದೇಶ, ತಮಿಳುನಾಡಿನ ಗಡಿ ಜಿಲ್ಲೆಯಲ್ಲಿರುವ ಈಗಾಗಲೇ ಆರೋಪಿಗಳು, ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವವರ ಮೇಲೆ ಹದ್ದಿನ ಕಣ್ಣಿಟ್ಟಿರಬೇಕು. ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಅಕ್ರಮ ಮದ್ಯ ಸಾಗಾಣಿಕೆಗೆ ಅವಕಾಶ ನೀಡದಂತೆ ಮನವರಿಕೆ ಮಾಡಿಕೊಡುವ ಕೆಲಸ ಆಗಬೇಕು.
ಚುನಾವಣೆ ಸಂದರ್ಭದಲ್ಲಿ ಅಬಕಾರಿ ಅಧಿಕಾರಿಗಳು ಯಾವುದೇ ಕಾರಣಕ್ಕೂ ರಾಜಕಾರಣಿಗಳ ಜೊತೆಗೆ ನಂಟಸ್ಥನ ಬೆಳಸಬಾರದು. ಒಂದು ವೇಳೆ ಅಕ್ರಮಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿ ಪರೋಕ್ಷವಾಗಿ ಪ್ರೋತ್ಸಾಹ ನೀಡುವುದು ಕಂಡು ಬಂದರೆ ಅಂತಹವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.
ಚುನಾವಣೆಯ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಅಧಿಕಾರಿಗಳು ಹೆಚ್ಚು ಜಾಗೃತರಾಗಬೇಕು. ಚುನಾವಣೆಯನ್ನು ಚಾಲೆಂಜ್ ಆಗಿ ತೆಗೆದುಕೊಂಡು ಕರ್ತವ್ಯ ಮಾಡಿ ಇಡೀ ರಾಜ್ಯಕ್ಕೆ ಮಾದರಿಯಾಗುವ ಕೆಲಸ ಮಾಡುವುದಕ್ಕೆ ಸಭೆಯಲ್ಲಿ ಅಧಿಕಾರಿಗಳು ಸಹಮತ ವ್ಯಕ್ತ ಪಡಿಸಿದರು.
ಈ ಸಭೆಯಲ್ಲಿ ಬೆಂಗಳೂರು (ಉತ್ತರ) ಅಬಕಾರಿ ಇಲಾಖೆಯ ಜಂಟಿ ಆಯುಕ್ತ ಎಫ್. ಹೆಚ್.ಚಲವಾದಿ, ಜಾ&ತ.ಬೆಂಗಳೂರು (ದಕ್ಷಿಣ) ಜಂಟಿ ಆಯುಕ್ತರಾದ ಎ.ಎಲ್.ನಾಗೇಶ್, ಕೋಲಾರ ಅಬಕಾರಿ ಉಪ ಆಯುಕ್ತ ಹಚ್.ರಮೇಶ್ ಕುಮಾರ್, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಮತ್ತು ಬಿ.ಡಿ.ಯು- ೮ ಜಿಲ್ಲೆಗಳ ಅಬಕಾರಿ ಉಪ ಆಯುಕ್ತರು, ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.