ಕೆಜಿಎಫ್. ಸ್ಟೂಡೆಂಟ್ ಪೊಲೀಸ್ ಕೆಡೆಟ್ ತಂಡಗಳನ್ನು ಕೆಜಿಎಫ್‌ನಲ್ಲಿ ಹೊಸದಾಗಿ ಪ್ರಾರಂಭಿಸಿದ್ದು, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಹನೆ, ತಾಳ್ಮೆ ಬಹಳ ಮುಖ್ಯವೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ.ಧರಣೀದೇವಿ ಅವರು ನುಡಿದರು.
ಅವರು ಕೆಜಿಎಫ್‌ನ ಡಾ|| ಟಿ.ತಿಮ್ಮಯ್ಯ ತಾಂತ್ರೀಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಏರ್ಪಡಿಸಿದ್ದ ಸ್ಟೂಡೆಂಟ್ ಪೊಲೀಸ್ ಕೆಡೆಟ್ (ಎಸ್.ಪಿ.ಸಿ.) ಯೋಜನೆಯನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಪ್ರಾರಂಭಿಕವಾಗಿ ಹತ್ತು ಶಾಲಾ, ಕಾಲೇಜುಗಳಲ್ಲಿ ಎಸ್.ಪಿ.ಸಿ. ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದು, ಅದರಂತೆ, ಶಾಲಾ, ಕಾಲೇಜು ವಿದ್ಯಾರ್ಥಿಗಳ ತಂಡಗಳನ್ನು ಹೊಸದಾಗಿ ರಚಿಸಲಾಗಿದೆ. ಅವುಗಳ ಮೇಲುಸ್ತುವಾರಿಯನ್ನು ಆಯಾ ಶಾಲಾ, ಕಾಲೇಜುಗಳ ಮುಖ್ಯಸ್ಥರನ್ನು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯ ಸಂಯೋಜಕರನ್ನು ಸಮನ್ವಯಾಧಿಕಾರಿಗಳನ್ನಾಗಿ ನೇಮಿಸಲಾಗಿದೆ ಜಿಲ್ಲಾ ರಕ್ಷಣಾಧಿಕಾರಿ ಡಾ|| ಕೆ.ಧರಣೀದೇವಿ ಅವರು ವಿವರಿಸಿದರು.
ಎಸ್‌ಪಿಸಿಯ ಮೂಲ ಉದ್ದೇಶವು ವಿದ್ಯಾರ್ಥಿಗಳಲ್ಲಿ ಪೊಲೀಸರ ಕರ್ತವ್ಯ, ಕಾನೂನಿನ ಅರಿವು, ಸಂಚಾರ ನಿಯಂತ್ರಣದ ಬಗ್ಗೆ, ಅಪರಾಧಗಳಿಗೆ ಕಡಿವಾಣ, ವಿದ್ಯಾರ್ಥಿಗಳಲ್ಲಿ ಮಾನಸಿಕ ಸ್ಥೇರ್ಯ ತುಂಬುವುದು, ಉತ್ತಮ ನಡವಳಿಕೆಯ ಹಾದಿ ಹಾಗೂ ದೈಹಿಕವಾಗಿ ಸದೃಢತೆ ಮೂಡಿಸುವುದಾಗಿದೆ. ಎಲ್ಲಾ ಶಾಲಾ, ಕಾಲೇಜುಗಳ ಪ್ರತಿಯೊಬ್ಬ ವಿದ್ಯಾರ್ಥಿಯು ಸಹ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಎಸ್ಪಿ ಡಾ|| ಕೆ.ಧರಣೀದೇವಿ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಿವೈಎಸ್ಪಿ ವಿ.ಎಲ್.ರಮೇಶ್, ಸರ್ಕಲ್ ಇನ್ಸ್ಪೆಕ್ಟರ್ ಟಿ.ಆರ್.ಕುಮಾರಸ್ವಾಮಿ, ಎಸ್.ಟಿ. ಮಾರ್ಕೋಂಡಯ್ಯ, ಆನಂದ್‌ಕುಮಾರ್, ಸಂಜೀವರಾಯಪ್ಪ, ಆರ್.ವೆಂಕಟೇಶ್, ಸಶಸ್ತç ಮೀಸಲು ಪಡೆಯ ಇನ್ಸ್ಪೆಕ್ಟರ್ ವಿ.ಸೋಮಶೇಖರ್, ಜಿಲ್ಲಾ ಪೊಲೀಸ್ ಕಛೇರಿಯ ಸಹಾಯಕ ಆಡಳಿತಾಧಿಕಾರಿ ಜಿ.ವಿಶ್ವನಾಥ, ಜಿಲ್ಲೆಯ ಎಲ್ಲಾ ಪಿಎಸ್‌ಐಗಳು ಸೇರಿದಂತೆ ಶಾಲಾ, ಕಾಲೇಜುಗಳ ಮುಖ್ಯಸ್ಥರು ಹಾಜರಿದ್ದರು.