ಬೆಂಗಳೂರು: ವಿಜಯಪುರದಲ್ಲಿ ನಡೆಯಲಿರುವ ೩೭ನೇ ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಭಾಗವಹಿಸುವುದಾಗಿ ತಿಳಿಸಿದ್ದಾರೆ. ಶಾಸಕರಾದ ಶ್ರೀ ಬಸನಗೌಡ ಪಾಟೀಲ ಯತ್ನಾಳ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗ ವಿಧಾನಸೌಧದಲ್ಲಿ ಭೇಟಿ ಮಾಡಿದಾಗ ಸಿಎಂ ಈ ಭರವಸೆ ನೀಡಿದ್ದಾರೆ. ಡಿಸೆಂಬರ ಅಂತ್ಯದವರೆಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಡಿಸೆಂಬರನಲ್ಲಿ ಸಮ್ಮೇಳನ ಮಾಡುವುದು ಗಡಿಬಿಡಿಯಾಗುತ್ತದೆ.
ಆದ್ದರಿಂದ ೨೦೨೩ರ ಜನೇವರಿ ಮೊದಲ ವಾರದಲ್ಲಿ ಸಮ್ಮೇಳನದ ದಿನಾಂಕ ನಿಗದಿ ಮಾಡಿ, ಉದ್ಘಾಟನೆಗೆ ಆಗಮಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಮುಖ್ಯಮಂತ್ರಿಗಳ ಸಲಹೆಗೆ ನಿಯೋಗವು ಸಮ್ಮತಿ ವ್ಯಕ್ತಪಡಿಸಿತು. ಗಡಿಭಾಗ ಜಿಲ್ಲೆಯಾದ ವಿಜಯಪುರದಲ್ಲಿ ಅಚ್ಚುಕಟ್ಟಾಗಿ ಸಮ್ಮೇಳನವನ್ನು ಸಂಘಟಿಸಲು ತಿಳಿಸಿ, ಶುಭ ಹಾರೈಸಿದರು. ಐಎಫ್ ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ.ಮಲ್ಲಿಕರ‍್ಜುನಯ್ಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಪುಂಡಲೀಕ ಭೀ ಬಾಳೋಜಿ, ರಾಜ್ಯ ಪ್ರಧಾನ ಕರ‍್ಯರ‍್ಶಿ ಜೆ.ಸಿ.ಲೋಕೇಶ, ವಿಜಯಪುರ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಪ್ರಧಾನ ಕರ‍್ಯರ‍್ಶಿ ಮೋಹನ ಪಿ. ಕುಲರ‍್ಣಿ, ರಾಜ್ಯ ಕರ‍್ಯಕಾರಿ ಸಮಿತಿ ಸದಸ್ಯರಾದ ಡಿ. ಬಿ. ವಡವಡಗಿ, ವಾಸುದೇವ ಹೊಳ್ಳ, ಮುನಿರಾಜು, ಸೋಮಶೇಖರ ಗಾಂಧಿ,
ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ವಿ. ಶಟಗಾರ, ಚನ್ನವೀರ ಸಗರನಾಳ ಮತ್ತಿತರರು ಹಾಜರಿದ್ದರು.