ಕೋಲಾರ:- ಸಿದ್ದರಾಮಯ್ಯರಿಗೆ ನಾಲಿಗೆ ಮೇಲೆ ಹಿಡಿತವಿಲ್ಲ, ಇಡೀ ಲಿಂಗಾಯತ ಸಮುದಾಯದ ವಿರುದ್ದ ಮಾತನಾಡುವ ಮೂಲಕ ಕಾಂಗ್ರೆಸ್‌ನ ಸಂಸ್ಕೃತಿಯನ್ನು ಪ್ರದರ್ಶಿಸಿದ್ದಾರೆ, ಇದಕ್ಕೆ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ಕೋಲಾರ ವಿಧಾನಕ್ಷೇತ್ರದ ಉಸ್ತುವಾರಿಯೂ ಆಗಿರುವ ಅವರು ತಾಲ್ಲೂಕಿನ ಕೆಂದಟ್ಟಿ ಸಮೀಪ ಪ್ರಧಾನಿ ನರೇಂದ್ರ ಮೋದಿಯವರ ಏ.೩೦ರ ಬೃಹತ್ ರ‍್ಯಾಲಿಗಾಗಿ ನಡೆಯುತ್ತಿರುವ ಸಿದ್ದತೆಗಳ ಪರಿಶೀಲನೆ ನಡೆಸಿ ಅವರು ಮಾತನಾಡುತ್ತಿದ್ದರು.
ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಅಪಾರ ಅನುಭವ ಇರುವ ಸಿದ್ದರಾಮಯ್ಯ ಇಡೀ ಲಿಂಗಾಯತ ಸಮುದಾಯದ ವಿರೋಧ ಕಟ್ಟಿಕೊಂಡಿದ್ದಾರೆ, ಅವರಿಗೆ ಈಗ ಸೋಲಿನ ಭಯ ಕಾಡುತ್ತಿದ್ದು, ನಾಲಿಗೆ ಹಿಡಿತ ತಪ್ಪುತ್ತಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯನಷ್ಟೆ ಸತ್ಯ, ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ, ಜನರ ಒಲವು ನಮ್ಮ ಪರವಿದೆ, ಕಾಂಗ್ರೆಸ್ಸಿನವರು ಏನು ಎಂಬುದು ಜನತೆಗೆ ಗೊತ್ತಿದೆ ಎಂದು ತಿಳಿಸಿದರು.
ಒಲ್ಲದ ಮನಸ್ಸಿಂದ ಕೊತ್ತೂರು ಕಣಕ್ಕೆ
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೊತ್ತೂರು ಮಂಜುನಾಥ್ ಒಲ್ಲದ ಮನಸ್ಸಿನಿಂದ ಕಣಕ್ಕಿಳಿದಿದ್ದು, ರಾಜಕಾಣದಲ್ಲಿ ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಮತ್ತು ಲಾಭ ಪಡೆಯಲು ಅವರನ್ನು ಬಲಿಪಶು ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.
ಕೋಲಾರ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್ ಪ್ರಬಲರಾಗಿದ್ದಾರೆ, ಜನರ ಆಶೀರ್ವಾದ ಅವರ ಮೇಲಿದೆ, ಯಾವುದೇ ಹಳ್ಳಿಗೆ ಹೋದರೂ ಬಿಜೆಪಿ ಎಂದು ಜನ ಕೂಗುತ್ತಿದ್ದಾರೆ, ಹೀಗಿರುವಾಗ ಕಾಂಗ್ರೆಸ್ ಗೆಲ್ಲುವುದಿರಲಿ ೩ನೇ ಸ್ಥಾನ ಕಾಯ್ದುಕೊಂಡರೆ ಸಾಕು ಎಂದರು.
ಹಣ ಚೆಲ್ಲಿ ಜನರನ್ನು ಖರೀದಿಸಬಹುದು ಎಂದು ಕಾಂಗ್ರೆಸ್ಸಿಗರು ಭಾವಿಸಿದ್ದಾರೆ, ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಈ ಪ್ರಯೋಗ ನಡೆಸಿದ್ದಾರೆ ಅದರೆ ಅವರು ಸೇರ್ಪಡೆ ಮಾಡಿಕೊಂಡು ಹೋದ ಕೂಡಲೇ ಕಾರ್ಯಕರ್ತರು,ಮುಖಂಡರು ಬಿಜೆಪಿಗೆ ವಾಪಸ್ಸಾಗುವ ಮೂಲಕ ಟಾಂಗ್ ನೀಡಿದ್ದಾರೆ ಎಂದು ದಾನಹಳ್ಳಿ, ಬೆಣಜೇನಹಳ್ಳಿ ಘಟನೆಗಳಲ್ಲಿ ಮರು ಸೇರ್ಪಡೆ ಪ್ರಕರಣ ಉದಾಹರಿಸಿದರು.
ಏ.೩೦ ಕೋಲಾರಕ್ಕೆ ಪ್ರಧಾನಿ ಮೋದಿ
ಕೋಲಾರದಲ್ಲಿ ಏ.೩೦ ರಂದು ನಡೆಯಲಿರುವ ಬೃಹತ್ ಪ್ರಚಾರ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಸುಮಾರು ೨.೫ ಲಕ್ಷ ಮಂದಿ ಆಗಮಿಸಲಿದ್ದು, ಪಕ್ಷದ ಪರ ಸಂಚಲನ ಸೃಷ್ಟಿಯಾಗಲಿದೆ ಎಂದರು.
೨೦೦ ಎಕರೆಯಲ್ಲಿ ಸಮಾವೇಶ ಮಾಡುತ್ತಿದ್ದು, ೧೦೦ ಎಕರೆಗೆ ಪಾರ್ಕಿಂಗ್‌ಗಾಗಿ ಮೀಸಲಿಡಲಾಗುವುದು ಎಂದ ಅವರು, ಈಗಾಗಲೇ ಎಲ್ಲ ಕಡೆ ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ರಾಜ್ಯ, ರಾಷ್ಟ ನಾಯಕರು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಈಗಾಗಲೇ ಎಸ್‌ಪಿಜಿ ಕಮಾಂಡೋಗಳು ಆಗಮಿಸಿ ಹೆಲಿಪ್ಯಾಡ್‌ಗಳಿಗೆ ಜಾಗ ವೀಕ್ಷಣೆ ನಡೆಸಿದ್ದಾರೆ. ೫ ಎಕರೆಯಲ್ಲಿ ೩ ಹೆಲಿಪ್ಯಾಡ್‌ಗೆ ವ್ಯವಸ್ಥೆ ಮಾಡಲಾಗುವುದು ಎಂದ ಅವರು, ಈ ಕಾರ್ಯಕ್ರಮದ ಮೂಲಕ ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಟವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಆಂಧ್ರಪ್ರದೇಶ ರಾಜ್ಯ ಬಿಜೆಪಿ ಕಾರ್ಯದರ್ಶಿ ಚಿರಂಜೀವಿರೆಡ್ಡಿ, ಕೋಲಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ,ಬೆಗ್ಲಿ ಸಿರಾಜ್, ಮಹಿಳಾ ಮೋರ್ಚಾದ ಅರುಣಮ್ಮ, ಮಮತಾ, ಚೆಲುವಮ್ಮ,ಮುಖಂಡರಾದ ಅಪ್ಪಿಗೌಡ,ಗುರುನಾಥರೆಡ್ಡಿ, ಮಾಲೂರು ಸುಧಾಕರ್ ಮತ್ತಿತರರಿದ್ದರು.