ಬೆಂಗಳೂರು,ರಾಷ್ಟಮಟ್ಟದಲ್ಲಿ ಕರ್ನಾಟಕದ ಪತ್ರಕರ್ತರು ಶ್ಲಾಘನೀಯ ಪಾತ್ರ ವಹಿಸಿದ್ದಾರೆ. ಆ ಕಾರಣದಿಂದಲೇ ಕರ್ನಾಟಕವು ಕೂಡಾ ಪತ್ರಿಕೋದ್ಯಮದಲ್ಲಿ ಉತ್ತಮ ಸ್ಥಾನಮಾನಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಭಾರತೀಯ ಕಾರ್ಯನಿರತ ಪತ್ರಕತರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪರಮಾನಂದ ಪಾಂಡೆ ಅಭಿಪ್ರಾಯಪಟ್ಟರು.
ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಏರ್ಪಡಿದ್ದ 132ನೇ ರಾಷ್ಟ್ರೀಯ ಕಾರ್ಯನಿರತ ಸಮಿತಿ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಾ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟವು ದೇಶದಾದ್ಯಂತ ಪತ್ರಕರ್ತರ ಹಿತಾಸಕ್ತಿಯನ್ನು ಕಾಪಾಡುವಲ್ಲೂ ಸಫಲತೆ ಕಂಡಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ಪತ್ರಕರ್ತರು ಇಂದು ಸಾಮಾಜಿಕ ಜಾಲತಾಣದ ಕೆಲವರು ನೀಡುವ ತಪ್ಪು ಮಾಹಿತಿ ಪರಿಣಾಮವಾಗಿ ಜನತೆಯ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಕರ್ನಾಟಕ ಪತ್ರಕರ್ತರ ಸಂಘವು ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆಯಲು ಪತ್ರಕರ್ತರ ಸಹಕಾರ ಕಾರಣ ಎಂದರು. ರಾಜ್ಯ ಪತ್ರಕರ್ತರ ಭವನಕ್ಕಾಗಿ ಹೊಸಕೆರೆ ಹಳ್ಳಿ ಹತ್ತಿರ ನೀಡಿದ ಖಾಲಿ ನಿವೇಶನವು ಆ ಭಾಗದ ಶಾಸಕರಾದ ಎಂ. ಕೃಷ್ಣಪ್ಪನವರ ಕ್ಷೇತ್ರಕ್ಕೆ ಬರುವುದರಿಂದಅವರ ಸಹಕಾರ ಅತ್ಯಗತ್ಯ ಎಂದು ಶಾಸಕರಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಕರಿಸುವಂತೆ ವಿನಂತಿಸಿದರು.
ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಮಾತನಾಡಿ, ತಾನು ಯಾವತ್ತೂ ಪತ್ರಕರ್ತರ ಸಂಘಟನೆಗೆ ಸಹಕಾರ ನೀಡಲು ಸಿದ್ಧ ಎಂದು ಪತ್ರಕರ್ತರಿಗಾಗಿ ನೀಡಿದ ನಿವೇಶನಕ್ಕೆ ಸಂಬಂಧಿಸಿದ ತೊಂದರೆ ನಿವಾರಣೆಗೂ ಸಹಕರಿಸಿ, ಬೇಗದಲ್ಲಿ ಪತ್ರಕರ್ತರು ಕಟ್ಟಡ ನಿರ್ಮಿಸುವಂತಾದರೆ ಅದಕ್ಕಾಗಿ ಆರ್ಥಿಕ ನೆರವನ್ನು ಸಹ ನೀಡುವ ಭರವಸೆ ನೀಡಿದರು.
ಒಕ್ಕೂಟದ ಉಪಾಧ್ಯಕ್ಷ ಹೇಮಂತ್ ತಿವಾರಿ , ಪತ್ರಕರ್ತರ ಹಿತಕಾಪಾಡಲು ನಾನು ಯಾ ವ ಹೋರಾಟಕ್ಕೂ ಸಿದ್ದ ಎಂಬುದಾಗಿ ಭರವಸೆ ನೀಡಿ ಮಾತನಾಡಿದರು.
ವೇದಿಕೆಯಲ್ಲಿ ,ತೆಲಂಗಾಣ ಭಾರತೀಯ ಕಾರ್ಯ ನಿರತ ಪತ್ರಕರ್ತರ ಒಕ್ಕೂಟದ ಕಪ್ಪರ ಪ್ರಸಾದ ರಾವ್, ಪಿ. ನರಸಿಂಹ, ತಮಿಳು ನಾಡಿನ ಅಸದುಲ್ಲಾ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ್, ಖಜಾಂಚಿ ವಾಸುದೇವ ಹೊಳ್ಳ, ಕಾರ್ಯದರ್ಶಿ ಸೋಮಶೇಖರ ಕೆರೆಗೋಡು, ಏಷ್ಯಾ ಪತ್ರಕರ್ತರ ಒಕ್ಕೂಟದ ಸಂಚಾಲಕ ಮದನ ಗೌಡ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಸತ್ಯನಾರಾಯಣ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೆಕಟ್, ಖಜಾಂಚಿ ಶಿವರಾಜ್, ಉಪಾಧ್ಯಕ್ಷರಾದ ಜಿಕ್ರಿಯ, ಜೈಕುಮಾರ್ ಗೌಡ, ಕಾರ್ಯದರ್ಶಿ ಎಚ್. ಎಸ್.ಪರಿಮಳ, ಲಕ್ಷ್ಮಣ್, ಕಾರ್ಯಕಾರಿ ಸಮಿತಿ ಸದಸ್ಯರು, ರಾಷ್ಟ್ರೀಯ ಮಂಡಳಿ ಸದಸ್ಯರು, ತೆಲಂಗಾಣ, ತಮಿಳುನಾಡು, ಕೇರಳ, ಜಾರ್ಖಂಡ್ ,ದೆಹಲಿ ಮುಂತಾದ ಕಡೆಯಿಂದ ಆಗಮಿಸಿದ ಭಾರತೀಯ ಪತ್ರಕರ್ತ ಒಕ್ಕೂಟದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕೋವಿಡ್ ದಿನಗಳಲ್ಲಿ ಕೆಯುಡಬ್ಲ್ಯೂಜೆ ನಾಡಿನಾಧ್ಯಂತ ಪತ್ರಕರ್ತರ ಕುಟುಂಬಕ್ಕೆ ನೀಡಿದ ಬೆಂಬಲ ಇತರ ರಾಜ್ಯ ಸಂಘಕ್ಕೂ ಮಾದರಿ.
ನಂತರ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಹಿರಿಯ ಪತ್ರಕರ್ತರಾದ ಶೇಷಚಂದ್ರಿಕ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಹಿಂದೆಂದಿಗಿಂತ ಹೆಚ್ಚಾಗಿ ಪತ್ರಕರ್ತರ ನೆರವಿಗೆ ಶ್ರಮಿಸುತ್ತಿದೆ. ಕೋವಿಡ್ ದಿನಗಳಲ್ಲಿ ನಾಡಿನಾಧ್ಯಂತ ಪತ್ರಕರ್ತರ ಕುಟುಂಬಗಳಿಗೆ ದೊರಕಿಸಿಕೊಟ್ಟ ಬೆಂಬಲ ನಿಜಕ್ಕೂ ಶ್ಲಾಘನೀಯ, ನಮ್ಮರಾಜ್ಯಸಂಘವು ಮಾಡಿರುವ ಈ ಸೇವೆಯು ಭಾರತದ ಎಲ್ಲಾ ಪತ್ರಕರ್ತರ ಸಂಘಕ್ಕೂ ಮಾದರಿ.
ಪತ್ರಕರ್ತ ನಿಧನ ಹೊಂದಿ ಅತನ ಕುಟುಂಬವು ಅದಾಯದ ಮೂಲಗಳಿಲ್ಲದೆ ಕಂಗಾಲಾದ ಪರಿಸ್ಥಿತಿ ಊಹಿಸಲೂ ಕಷ್ಟ ಇಂತಹ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ನೊಂದವರಿಗೆ ಸರ್ಕಾರದಿಂದ ನೆರವು ನೀಡುಲು ಶ್ರಮಿಸಿದ್ದು ಯಾರೂ ಮರೆಯುವ ಹಾಗಿಲ್ಲ. ಈಗ ರಾಜ್ಯ ಸಂಘಕ್ಕೆ ಹಿರಿಯಣ್ಣ ನಂತಿರುವ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಕೂಡಾ ಜೊತೆಗಿದ್ದು ಪತ್ರಕರ್ತರಿಗೆ ಇನ್ನೂ ಹೆಚ್ಚಿನ ಸಹಕಾರ ,ಸೌಲಭ್ಯಗಳು ಸಿಗುವಂತಾಗಲಿ ಎಂದು ಆಶಿಸಿದರು
ಇಲ್ಲಿನ ವಿಜಯನಗರದ ಶ್ರೀ ಬಸವೇಶ್ವರ ಸುಜ್ಜ಼ಾನ ಮಂಟಪ ದಲ್ಲಿ ನಡೆದ ಸಮಾರಂಭದಲ್ಲಿ ಪತ್ರಕರ್ತೆ ಸವಿತಾ ಸೊಗಸಾಗಿ ಹಾಡು ಹೇಳುವುದರೊಂದಿಗೆ ಕಾರ್ಯಕ್ರಮ ನಿರೂಪಣೆಯನ್ನೂ ನಡೆಸಿಕೊಟ್ಟರು.