ಕೋಲಾರ:- ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ೧೬ ವರ್ಷದೊಳಗಿನ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿರುವ ಕ್ರೀಡಾಪಟುಗಳಿಗೆ ಕೋಲಾರ ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್‌ನ ರಾಜ್ಯ ಹಣಕಾಸು ವಿಭಾಗದ ಅಧ್ಯಕ್ಷ ಕೆ.ಜಯದೇವ್ ಸಮವಸ್ತರ ವಿತರಿಸಿದರು.
ಕನಕ ಬ್ಯಾಸ್ಕೆಟ್‌ಬಾಲ್ ಕ್ಲಬ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ರಾಜ್ಯಮಟ್ಟಕ್ಕೆ ಹೋಗುತ್ತಿರುವ ಕ್ರೀಡಾಪಟುಗಳಿಗೆ ಸಮವಸ್ತರ ನೀಡಿ ಶುಭ ಕೋರಿದರು.
ಬ್ಯಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಜಿಲ್ಲೆ ತನ್ನದೇ ಆದ ಹಿರಿಮೆ ಹೊಂದಿದ್ದು, ಆ ಗೌರವ ಮರುಕಳಿಸುವಂತೆ ಗೆದ್ದು ಬನ್ನಿ, ಜಿಲ್ಲೆಗೆ ಕೀರ್ತಿ ತನ್ನಿ ಎಂದು ಕಿವಿಮಾತು ಹೇಳಿದರು.
ನಿರಂತರ ಅಭ್ಯಾಸ ಮಾಡುವ ಮೂಲಕ ಕ್ರಿಯಾಶೀಲರಾಗಿರಿ, ಆಗ ಮಾತ್ರ ಪಂದ್ಯದಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂದ ಅವರು, ಶಿಸ್ತು, ಸಂಯಮ ಕಾಪಾಡಿಕೊಳ್ಳಿ, ಇತರೆ ಕ್ರೀಡಾಪಟುಗಳೊಂದಿಗೆ ವಿವಾದಕ್ಕೆಡೆ ನೀಡದೇ ಸ್ನೇಹದಿಂದಿರಿ ಎಂದರು.
ಕೋಲಾರ ಜಿಲ್ಲಾ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್‌ನ ಕಾರ್ಯದರ್ಶಿ ಅಂಚೆ ಅಶ್ವಥ್ಥ್ ಮಾತನಾಡಿ, ಕ್ರೀಡಾ ಸಾಧಕರಿಗೆ ಕೋಲಾರ ಜಿಲ್ಲೆ ಹೆಸರಾಗಿತ್ತು. ಆ ಹೆಸರು ಈಗ ಇಲ್ಲವಾಗಿದ್ದು, ಅದನ್ನು ಮರುಸ್ಥಾಪಿಸಲು ಅನುವಾಗುವಂತೆ ಇಲ್ಲಿ ತರಬೇತಿ ನೀಡಲು ಕ್ರಮವಹಿಸಲಾಗಿದೆ ಎಂದರು.
ರಾಜ್ಯಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳು ಸೋಲು ಗೆಲುವಿನ ಕುರಿತು ಚಿಂತಿಸದೇ ಸ್ಪರ್ಧಾಪೈಪೋಟಿಯಿಂದ ಆಡಿ ಜಿಲ್ಲೆಗೆ ಕೀರ್ತಿ ತನ್ನಿ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕಾರಣವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕೇವಲ ಓದು, ಅಂಕ ಗಳಿಕೆಗೆ ಸೀಮಿತ ಮಾಡುತ್ತಿದ್ದಾರೆ ಎಂದು ವಿಷಾದಿಸಿ, ಪಠ್ಯದಷ್ಟೇ ಕ್ರೀಡೆ ಪ್ರಮುಖ್ಯತೆಗಳಿಸಿದೆ ಎಂದರು.
ಈ ಸಂದರ್ಭದಲ್ಲಿ ಕನಕ ಬ್ಯಾಸ್ಕೆಟ್ ಬಾಲ್‌ನ ಮುದ್ದುರಾಜ್, ರಾಜೇಂದ್ರಪ್ರಸಾದ್, ವಿ.ನಾಗರಾಜ್, ಪುರುಷೋತ್ತಮ್ ತರಬೇತುದಾರರಾದ ರಘುವೀರ್, ತರುಣ್, ಅಭಿಷೇಕ್‌ಗೌಡ ಮತ್ತಿತರರಿದ್ದರು.