ಕೋಲಾರ, ಕರ್ನಾಟಕ ವಿಧಾನಸಭಾ ಮತ ಕ್ಷೇತ್ರಗಳಿಗೆ ಸಾರ್ವತ್ರಿಕ ಚುನಾವಣೆ ೨೦೨೩ ರ ನಿಮಿತ್ತ ಮೇ ೧೦ ರಂದು ಮತದಾನವು ಜರುಗಲಿದ್ದು ಮಾರ್ಚ್ ೨೯ ರಿಂದ ೧೫ನೇ ಮೇ ವರೆಗೆ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಕೋಲಾರ ಜಿಲ್ಲೆಯ ವ್ಯಾಪ್ತಿಯಲ್ಲಿ ಮತದಾನ ಕೊನೆಗೊಳ್ಳುವ ೪೮ ಗಂಟೆಗಳ ಪೂರ್ವದಲ್ಲಿ ಯಥಾವಿಧಿಯಾಗಿ ಮಾದರಿ ನೀತಿ ಸಂಹಿತೆ ಹಾಗೂ ಪ್ರಜಾಪ್ರಾತಿನಿಧ್ಯ ಕಾಯ್ದೆ ೧೯೫೧ರ ಕಲಂ ೧೨೬ರಲ್ಲಿ ವಿಧಿಸಲಾದ ಷರತ್ತುಗಳನ್ನು ತಪ್ಪದೇ ಪಾಲಿಸಬೇಕಾಗಿರುತ್ತದೆ. ಈ ಸಮಯದಲ್ಲಿ ಮತದಾರರಿಗೆ ವಿವಿಧ ಆಸೆ, ಆಮಿಷಗಳನ್ನು ಒಡ್ಡುವುದು, ಬೆದರಿಸಲು ಪ್ರಯತ್ನಿಸುವುದು, ತಮ್ಮ ಪರವಾಗಿ ವರ್ತಿಸಲು ಪುಸಲಾಯಿಸುವುದು, ಮತಗಟ್ಟೆಗಳ ಹತ್ತಿರದಲ್ಲಿ ಪ್ರಚಾರ ಮಾಡುವುದು, ಸಾರ್ವಜನಿಕ ಸಭೆ ನಡೆಸುವುದು, ಮತದಾರರನ್ನು ವಿವಿಧ ಸಾರಿಗೆ ವ್ಯವಸ್ಥೆಗಳ ಮೂಲಕ ಮತಗಟ್ಟೆಗಳಿಗೆ ಕರೆ ತರುವುದು, ಶಾಂತತೆಗೆ ಭಂಗ ಉಂಟುಮಾಡುವುದು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವುದು ಹಾಗೂ ಇನ್ನಿತರ ಅಹಿತಕಾರ ಘಟನೆಗಳು ನಡೆಯುವ ಸಂಭವ ಇದ್ದು, ಇದನ್ನು ತಡೆಗಟ್ಟುವುದು ಹಾಗೂ ಮತದಾನದ ಕಾಪಾಡುವ ಹಿತ ದೃಷ್ಠಿಯಿಂದ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ೧೯೭೩ ರ ಕಲಂ ೧೪೪ ರ ಮೇರೆಗೆ ಜಿಲ್ಲಾದ್ಯಂತ ಮೇ ೮ ರ ಸಂಜೆ ೬.೦೦ ಗಂಟೆಯಿoದ ಪ್ರಾರಂಭಿಸಿ ಮತದಾನದ ದಿನಾಂಕವಾದ ಮೇ ೧೦ ರಂದು ಮತದಾನ ಮುಕ್ತಾಯವಾಗುವವರೆಗೆ ಪ್ರತಿಬಂಧಕಾಜ್ಞೆಯನ್ನು ವಿಧಿಸಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುತ್ತಾರೆ.
ಈ ಪ್ರತಿಬಂಧಕಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ೫ ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು, ಮೆರವಣಿಗೆ ಅಥವಾ ಸಭೆ-ಸಮಾರಂಭ ನಡೆಸುವುದನ್ನು ನಿಷೇಧಿಸಲಾಗಿದೆ. ಚುನಾವಣಾ ಅಭ್ಯರ್ಥಿ/ಬೆಂಬಲಿಗರು ಸೇರಿ ೫ ಕ್ಕಿಂತಲು ಹೆಚ್ಚಿನ ಜನರು ಸೇರುವದನ್ನು ನಿಷೇಧಿಸಲಾಗಿದೆ. ಶಸ್ತ, ಬಡಿಗೆ, ಭರ್ಜಿ, ಬಡ್ಗ, ಗದೆ, ಬಂದೂಕು, ಚೂರಿ, ಲಾಠಿ, ದೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತವನ್ನು ತೆಗೆದುಕೊಂಡುಹೋಗುವುದನ್ನು ಮತ್ತು ಅವುಗಳೊಂದಿಗೆ ತಿರುಗಾಡುವುದನ್ನು ಪ್ರತಿಭಂದಿಸಲಾಗಿದೆ. ಮತಗಟ್ಟೆಗಳ ೧೦೦ ಮೀಟರ್ ಒಳಗೆ ಚುನಾವಣೆ ಪ್ರಚಾರ ನಿಷೇಧಿಸಿದೆ. ಈ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಝರಾಕ್ಸ್ ಅಂಗಡಿ, ಬುಕ್ಸ್ಟಾಲ್, ಸೈಬರ್ ಕೆಫೆಗಳನ್ನು ನಿರ್ಭಂದಿಸಿದೆ.ಕಲ್ಲುಗಳನ್ನು, ಕ್ಷಾರಪದಾರ್ಥ ಇಲ್ಲವೇ ಸ್ಟೋಟಕ ವಸ್ತುಗಳು ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ಮತದಾನದ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ. ಕಲ್ಲುಗಳನ್ನು ಮತ್ತು ಎಸಯುವಂಥಹ ವಸ್ತುಗಳನ್ನು, ಎಸೆಯುವ ಅಥವಾ ಬಿಡುವ ಸಾಧನಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಮನುಷ್ಯ ಶವಗಳ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳ ಪ್ರದರ್ಶನ/ದಹನ ಮಾಡುವುದನ್ನು ಪ್ರತಿಬಂದಿಸಲಾಗಿದೆ. ಮತದಾನದ ಸ್ಥಳದಲ್ಲಿ ಬಹಿರಂಗವಾಗಿ ಘೋಷಣೆ ಮಾಡುವುದು, ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು, ಸನ್ನೆ ಅಥವಾ ನಕಲು ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಅತಿಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವಾಗ ಹಾಗೂ ಸಾರ್ವಜನಿಕ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿ ಬಹಿರಂಗವಾಗಿ ಮೇಲೆ ವಿವರಿಸಿದ ಮಾರಕಾಸ್ತಗಳು, ಸ್ಫೋಟಕ ವಸ್ತುಗಳು, ವಿನಾಶಕಾರಿ ವಸ್ತುಗಳು ಹಾಗೂ ಇತರ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿದ್ದು ಕಂಡು ಬಂದ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ಇರುತ್ತದೆ. ಅಂತಹ ಮಾರಾಕಾಸ್ತಗಳನ್ನು ಸರಕಾರಕ್ಕೆ ಮುಟ್ಟುಗೋಲು ಮಾಡಿಕೊಳ್ಳಲಾಗುವುದು. ಅಲ್ಲದೇ ಸಂಬoಧಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು. ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಗೆ ಹಾಗೂ ಕೋವಿಡ್-೧೯ ಕಾರ್ಯಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ. ಮದುವೆ ಮತ್ತು ಇತರೆ ಧಾರ್ಮಿಕ ಮೆರವಣಿಗೆಗಳು ಯಥಾವಿಧಿಯಾಗಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದmತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ದಕ್ಕೆ ತರದಂತೆ ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು/ನಿಯಮಗಳನ್ನು ಪಾಲಿಸುವುದು. ಚುನಾವಣಾ ಕಾರ್ಯದಲ್ಲಿ ಜಿಲ್ಲಾ ಚುನಾವಣಾಧಿಕಾರಿ/ಚುನಾವಣಾಧಿಕಾರಿ ಅವರಿಂದ ಅನುಮತಿ ಪಡೆದ ಅಧಿಕಾರಿಗಳು/ಸಿಬ್ಬಂದಿಗಳು ಹೊರುಪಡಿಸಿ ಮತಗಟ್ಟೆಗಳ ಸುತ್ತಾ ೧೦೦ ಮೀಟರ್ ಅಂತರದಲ್ಲಿ ಮೊಬೈಲ್ ಫೋನ್, ಕಾರ್ಡ್ಲೆಸ್ ಫೋನ್ ಅಥವಾ ಇನ್ನಿತರ ಎಲೆಕ್ಟಾನಿಕ್ ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಮತಗಟ್ಟೆಗಳ ಸುತ್ತಾ ೧೦೦ ಮೀಟರ್ ಪರಿಮಿತಿಯಲ್ಲಿ ಪ್ರಚಾರಕ್ಕೆ ಸಂಬoಧಿಸಿದ ಪೋಸ್ಟರ್/ಬ್ಯಾನರ್ ಅಥವಾ ಇನ್ನಾವುದೇ ವಸ್ತುಗಳನ್ನು ಬಳಸುವಂತಿಲ್ಲ. ಈ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಕೋವಿಡ್-೧೯ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ಈ ಅವಧಿಯಲ್ಲಿ ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರದ ವ್ಯಾಪ್ತಿಯಿಂದ ಹೊರಗೆ ಹೋಗತಕ್ಕದ್ದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.