ಮೂಡಲಗಿ, ಈ ಭಾಗದಲ್ಲಿ ಮಹಿಳಾ ಕಾನೂನು ಪದವಿಧರರ ಕೊರತೆ ಇರುವುದರಿಂದ ಮಕ್ಕಳ ಪಾಲಕರು ತಮ್ಮ ಹೆಣ್ಣು ಮಕ್ಕಳಿಗೆ ಕಾನೂನಿನ ಮಹತ್ವದ ಬಗ್ಗೆ ಅರಿವು ಮೂಡಿಸಿ, ವಕೀಲರನ್ನಾಗಿ ಮಾಡಿ ದೇಶದಲ್ಲಿ ಒಳ್ಳೆಯ ನ್ಯಾಯ ಒದಗಿಸುವ ಕಾರ್ಯದಲ್ಲಿ ತೊಡಗಿಕೊಂಡಲ್ಲಿ ದೇಶಕ್ಕೆ ಒಳ್ಳೆಯ ಕೊಡುಗೆ ನೀಡಿದ ಕಿರ್ತಿ ನಿಮ್ಮದಾಗುತ್ತದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಮೂರ್ತಿಗಳಾದ ಪ್ರಸನ್ನ ಬಿ.ವರಾಳೆ ಹೇಳಿದರು.
ಶನಿವಾರದಂದು ಮೂಡಲಗಿಯಲ್ಲಿ ನ್ಯಾಯಾಲಯದ ನೂತನ ಕಟ್ಟಡ ಹಾಗೂ ನ್ಯಾಯಾಧೀಶರ ವಸತಿ ಗೃಹವನ್ನು ಉದ್ಘಾಟಸಿ ಮಾತನಾಡಿದ ಅವರು, ಈ ನ್ಯಾಯಾಲಯದಲ್ಲಿ ೬೫೦ ಸಿವಿಲ್ ಕೇಸ್, ೧೭೫೦ ಕ್ರಿಮಿನಲ್ ಕೇಸ್ ಇದ್ದು ಇಲ್ಲಿವರೆಗೂ ಇವು ಇತ್ಯರ್ಥಗೊಂಡಿಲ್ಲ ಆದ್ದರಿಂದ ಜನರು ನಮ್ಮ ಮೇಲೆ ಇಟ್ಟಿರುವ ನಂಬಿಕೆ ಕಳೆದುಕೊಳ್ಳುವ ಮೊದಲು ನ್ಯಾಯಾಧೀಶರು ಮತ್ತು ನ್ಯಾಯವಾದಿಗಳು ಕಕ್ಷಿದಾರರ ಒಳಿತಿಗಾಗಿ ಬೇಗನೇ ಕೇಸ್‌ಗಳನ್ನು ಇತ್ಯರ್ಥಗೊಳಿಸಬೇಕು. ನ್ಯಾಯಾಲಯವು ದೇವಾಲಯವಿದ್ದಂತೆ ಇಲ್ಲಿ ಬರುವ ನೊಂದ ಜನರಿಗೆ ಸೂಕ್ತ ನ್ಯಾಯ ಒದಗಿಸುವಲ್ಲಿ ಎಲ್ಲರೂ ಪ್ರಮಾಣಿಕವಾಗಿ ಕಾರ್ಯ ಮಾಡಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಜಿಲ್ಲಾ ಕರ್ನಾಟಕ ಉಚ್ಚ ನ್ಯಾಯಾಲಯದ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಮಾತನಾಡಿ, ಈ ಭಾಗದಲ್ಲಿ ೨೦೧೨ರಲ್ಲಿ ನ್ಯಾಯಾಲಯ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭಾಗಿ ಸಾಕಷ್ಟು ಜನರಿಗೆ ಸೂಕ್ತ ನ್ಯಾಯ ಒದಗಿಸುವಲ್ಲಿ ಪ್ರಮಾಣಿಕ ಕಾರ್ಯ ಮಾಡಿದ್ದು, ಈಗ ನ್ಯಾಯಾಲಯಕ್ಕೆ ಸ್ವಂತ ಕಟ್ಟಡ ನಿರ್ಮಾಣವಾಗಿ ಉದ್ಘಾಟನೆಗೊಳ್ಳುತ್ತಿರುವುದು ಈ ಭಾಗದ ಜನರಿಗೆ ಮತ್ತಷ್ಟು ಸಂತಸ ತಂದಿದೆ. ಈ ನ್ಯಾಯಾಲಯದ ನ್ಯಾಯಾಧೀಶರಾಗಿ ಜ್ಯೋತಿ ಪಾಟೀಲ ಅವರು ಮಹಿಳೆಯಾಗಿದ್ದರೂ ಕೂಡಾ ಉತ್ತಮವಾದ ನ್ಯಾಯ ಒದಗಿಸುತ್ತಿದ್ದಾರೆ ಹಾಗೇ ಇನ್ನು ಮುಂದೆ ಸಹ ನೊಂದ ಜನರಿಗೆ ತ್ವರಿತವಾಗಿ ನ್ಯಾಯ ನೀಡುವ ಕಾರ್ಯವನ್ನು ನ್ಯಾಯಾಧೀಶರಾದ ಜ್ಯೋತಿ ಪಾಟೀಲ ಅವರು ಮಾಡಬೇಕು. ಹಾಗೂ ನಮ್ಮ ದೇಶದಲ್ಲಿ ನಾಲ್ಕು ಅಂಗಗಳು ಇವೆ ಅದರಲ್ಲಿ ನ್ಯಾಯಾಂಗ ಮತ್ತು ಪತ್ರಿಕಾರಂಗದ ಮೇಲೆ ಜನರು ನಂಬಿಕೆ ಇಟ್ಟಿದ್ದಾರೆ ಇನ್ನೂಳಿದ ಅಂಗಗಳು ಜನರ ನಂಬಿಕೆ ಕಳೆದುಕೊಂಡಿದ್ದು, ನ್ಯಾಯಾಂಗದಲ್ಲಿ ನಾವು ಕೆಲಸ ಮಾಡುತ್ತಿರುವುದರಿಂದ ಜನರಿಗೆ ತ್ವರಿತವಾಗಿ ನ್ಯಾಯ ನೀಡಿ ನಂಬಿಕೆ ಉಳಿಸಿಕೊಳ್ಳಬೇಕು ಹಾಗೂ ವಕೀಲರು ಬಡ ಜನರಿಗೆ ಉಚಿತವಾಗಿ ಕೇಸ್ ನಡೆಯುವುದರಿಂದ ಮತ್ತಷ್ಟು ಜನರ ನಂಬಿಕೆಗೆ ನಾವು ಪಾತ್ರರಾಗುತ್ತೇವೆ ಎಂದ ಅವರು, ಈ ಭಾಗದಲ್ಲಿ ಹೆಣ್ಣು ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಿ ಅತೀ ಹೆಚ್ಚು ವಕೀಲರನ್ನಾಗಿ ಮಾಡಬೇಕು ಎಂದು ಸಾರ್ವಜನಿಕರಿಗೆ ತಿಳಿ ಹೇಳಿದರು.
ವೇದಿಕೆಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಸಚಿನ್ ಶಂಕರ ಮಗದುಮ್, ಕೆ.ಎಸ್.ಹೇಮಲೇಖಾ, ಅನೀಲ್ ಬಿ.ಕಟ್ಟಿ, ರಾಮಚಂದ್ರ ಡಿ.ಹುದ್ದಾರ, ವಿಜಯಕುಮಾರ ಎ.ಪಾಟೀಲ, ಕರ್ನಾಟಕ ಉಚ್ಚ ನ್ಯಾಯಾಲಯದ ಮಹಾವಿಲೇಖನಾಧಿಕಾರಿ ಕೆ.ಎಸ್.ಭರತಕುಮಾರ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಉಪಾಧ್ಯಕ್ಷ ವಿನಯ ಬಿ.ಮಾಂಗಲೇಕರ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಕಲ್ಮೇಶ ಟಿ.ಕಿವಡ, ಮೂಡಲಗಿ ನ್ಯಾಯಾಧೀಶೆ ಜ್ಯೋತಿ ಪಾಟೀಲ, ಚಿಕ್ಕೋಡಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ವಿ.ಎನ್.ಪಾಟೀಲ, ಮೂಡಲಗಿ ವಕೀಲರ ಸಂಘದ ಅಧ್ಯಕ್ಷ ಸುಧೀರ ಗೋಡಿಗೋಡರ ಹಾಗೂ ವಕೀಲ ಸಂಘದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.