ಕೋಲಾರ, ಪೊಲೀಸರು ತಮ್ಮ ಕರ್ತವ್ಯದ ಜೊತೆಜೊತೆಗೆ ತಮ್ಮ ಕುಟುಂಬಕ್ಕೂ ಸಮಯ ಮೀಸಲಿಡಬೇಕು ಎಂದು ಕಂದಾಯ ಸಚಿವರಾದ ಆರ್.ಅಶೋಕ್ ರವರು ಅಭಿಪ್ರಾಯಪಟ್ಟರು.
ಇಂದು ಕರ್ನಾಟಕ ರಾಜ್ಯ ಪೊಲೀಸ್ ಮತ್ತು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇವರ ವತಿಯಿಂದ ಏರ್ಪಡಿಸಲಾಗಿದ್ದ ಕೋಲಾರ ನಗರ ಸಂಚಾರಿ ಪೊಲೀಸ್ ಠಾಣೆ ಮತ್ತು ಪೊಲೀಸ್ ಸಮುದಾಯ ಭವನದ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಮುದಾಯ ಭವನದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಕೌಟುಂಬಿಕ ಸಮಾರಂಭಗಳನ್ನು ನಡೆಸಲು, ಸಣ್ಣಪುಟ್ಟ ಸಭೆ ಸಮಾರಂಭಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಸಮಾಜದಲ್ಲಿ ಪೊಲೀಸ್ ಸಿಬ್ಬಂದಿಯ ಜವಾಬ್ದಾರಿ ಗುರುತರವಾಗಿದೆ. ಆದರೆ ಅದರ ಹೊರತಾಗಿಯೂ ರಾಜ್ಯದಲ್ಲಿ ಭಯೋತ್ಪಾದನೆ, ಹತ್ಯೆ, ದೇಶದ್ರೋಹಿ ಸಂಘಟನೆಗಳು ನಡೆಸುವ ದುಷ್ಕೃತ್ಯಗಳು ಮುಂತಾದ ಯಾವುದೇ ಅಹಿತಕರ ಘಟನೆಗಳನ್ನು ಸಮರ್ಥವಾಗಿ ಎದುರಿಸುವ ಹಾಗೂ ದೇಶ ರಕ್ಷಣೆಯ ಸಮಯದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಅಪರಾಧಿಗಳನ್ನು ಸೆದೆಬಡಿಯುವ ಎದೆಗಾರಿಕೆ ಉಳ್ಳವರು. ಅಂಥ ಪೊಲೀಸ್ ವ್ಯವಸ್ಥೆಯನ್ನು ಸರ್ಕಾರ ಮತ್ತಷ್ಟು ಸದೃಡಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ ಎಂದರು.
ಮಾನ್ಯ ಮುಖ್ಯಮಂತ್ರಿಗಳು ಹಿಂದೆ ಸ್ವತಃ ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಪೊಲೀಸರ ಕಷ್ಟಗಳೇನು ಎಂಬುದನ್ನು ಅರಿತಿದ್ದಾರೆ ಮತ್ತು ಸರ್ಕಾರ ಅವರ ಕಷ್ಟಗಳಿಗೆ ಆಸರೆಯಾಗಿ ನಿಲ್ಲುತ್ತದೆ. ಅಪರಾಧ ಪ್ರಕರಣಗಳನ್ನು ತಗ್ಗಿಸುವುದು, ಸ್ವಸ್ಥ ಸಮಾಜವನ್ನು ನಿರ್ಮಿಸುವುದು ಮುಂತಾದ ಜನಸ್ನೇಹಿ ಕಾರ್ಯಗಳಲ್ಲಿ ಇಂದು ಪೊಲೀಸ್ ಇಲಾಖೆ ತೊಡಗಿಕೊಂಡಿದೆ. ರಕ್ಷಣೆ ವಿಷಯದಲ್ಲಿ ಪೊಲೀಸ್ ರಹಿತ ಸಮಾಜವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಪೊಲೀಸರು ಕರ್ತವ್ಯನಿಷ್ಟೆಯಿಂದ ಕಾರ್ಯ ನಿರ್ವಹಿಸುತ್ತಿರುವುದರಿಂದ ಸಾಮಾನ್ಯ ಜನತೆ ನೆಮ್ಮದಿಯ ಜೀವನ ನಡೆಸುವಂತಾಗಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು ಮತ್ತು ಜಿಲ್ಲಾ ವರಿಷ್ಟಾಧಿಕಾರಿಗಳ ಅವಿರತ ಪ್ರಯತ್ನದಿಂದ ಇಂದು ಈ ಸಮುದಾಯ ಭವನ ತಲೆಯೆತ್ತಿ ನಿಂತಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ, ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ, ಸರ್ಕಾರದ ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಶಾಸಕರಾದ
ಡಾ|| ವೈ.ಎ.ನಾರಾಯಣಸ್ವಾಮಿ, ಮಾಜಿ ಸಚಿವರಾದ ವರ್ತೂರು ಆರ್.ಪ್ರಕಾಶ್, ಕೆ.ಜಿ.ಎಫ್ ಮಾಜಿ ಶಾಸಕ ಸಂಪoಗಿ, ಮಾಲೂರು ಮಾಜಿ ಶಾಸಕ ಮಂಜುನಾಥ್ ಗೌಡ, ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಯುಕೇಶ್ ಕುಮಾರ್, ಜಿಲ್ಲಾ ರಕ್ಷಣಾಧಿಕಾರಿಗಳಾದ ಡಿ.ದೇವರಾಜ್, ಪ್ರೊಬೆಷನರಿ ಐ.ಎ.ಎಸ್ ಅಧಿಕಾರಿ ವಿನಾಯಕ್ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.