ಪತ್ರಿಕೋದ್ಯಮ ಮತ್ತು ಪತ್ರಕರ್ತರ ಒಳಿತಿಗಾಗಿ ಶ್ರಮಿಸುವೆ – ಕೆ.ವಿ.ಪ್ರಭಾಕರ್

ಕೋಲಾರ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಹುದ್ದೆಯನ್ನು ರಾಜ್ಯದ ಪತ್ರಿಕೋದ್ಯಮ ಮತ್ತು ಪತ್ರಕರ್ತರ ಒಳಿತಿಗಾಗಿ ಶ್ರಮಿಸುವ ಅವಕಾಶ ಎಂದು ಭಾವಿಸಿ ಕಾರ್ಯನಿರ್ವಹಿಸುವುದಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ನುಡಿದರು.
ಬುಧವಾರ ಸಂಜೆ ಬೆಂಗಳೂರಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ತಮಗೆ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಪತ್ರಕರ್ತರು ಯಾವುದೇ ಸಂದರ್ಭದಲ್ಲಿ ವೃತ್ತಿಯ ಮೌಲ್ಯಗಳಿಗೆ ಕಳಂಕ ಬಾರದಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.
ಮುಖ್ಯಮಂತ್ರಿಗಳಿಗೆ ರಾಜಕೀಯ ಸಲಹೆಗಾರ, ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿಯಾಗುವ ಅವಕಾಶ ಇದ್ದರೂ ಸಹ ತಮ್ಮನ್ನು ಇದುವರೆಗೂ ಸಾಕಿ, ಸಲುಹಿದ ಪತ್ರಿಕೋದ್ಯಮಕ್ಕೆ ಸಂಬoಧಿಸಿದ ಅವಕಾಶವನ್ನೇ ಬಳಸಿಕೊಳ್ಳಬೇಕು ಎಂಬ ಉದ್ದೇಶದಿಂದ ಮಾಧ್ಯಮ ಸಲಹೆಗಾರ ಜವಾಬ್ದಾರಿಯನ್ನೇ ಆಯ್ಕೆ ಮಾಡಿಕೊಂಡಿದ್ದಾಗಿ ಪ್ರಭಾಕರ್ ವಿವರಿಸಿದರು.
ತಾವು ಪತ್ರಿಕೋದ್ಯಮದಲ್ಲಿ ಈ ಹಂತವನ್ನು ಕ್ರಮಿಸಲು ಕಾರಣರಾದ ಕೋಲಾರದ ಹಿರಿಯ ಪತ್ರಕರ್ತರಾದ ದಿವಂಗತ ಬಿ.ವಿ.ನರಸಿಂಹಮೂರ್ತಿ, ಎಂ.ಮಲ್ಲೇಶ್ ಹಾಗೂ ಬಿ.ಎನ್.ಗುರುಪ್ರಸಾದ್, ಹಿರಿಯ ಪತ್ರಕರ್ತರಾದ ಕೆ.ಪ್ರಹ್ಲಾದರಾವ್, ಬಿ.ವಿ.ಗೋಪಿನಾಥ್, ಎಂ.ವಾಸುದೇವಹೊಳ್ಳ ಅವರುಗಳನ್ನು ಪ್ರಭಾಕರ್ ಇದೇ ವೇಳೆ ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಮೊದಲಿನಿಂದಲೂ ಪ್ರಭಾಕರ್ ತಮಗೆ ಸಿಕ್ಕಿದ ಅವಕಾಶಗಳನ್ನು ಬಳಸಿಕೊಂಡು ಪತ್ರಕರ್ತರು ಮತ್ತು ಪತ್ರಿಕೋದ್ಯಮದ ನೆರವಿಗೆ ಬಳಸಿದ್ದಾರೆ. ಈಗಲೂ ಸಹ ಅವರ ಕಡೆಯಿಂದ ನಾಡಿನ ಪತ್ರಿಕೋದ್ಯಮಕ್ಕೆ ಪ್ರಯೋಜನ ಸಿಗಲಿದೆ ಎಂದು ನುಡಿದರು.
ಪ್ರಭಾಕರ್ ಅವರ ಹುಟ್ಟೂರಿನ ಪರವಾಗಿ ಅಭಿನಂದಿಸಿದ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಪ್ರಭಾಕರ್ ಈ ಹಂತಕ್ಕೆ ಬೆಳೆಯಲು ಸ್ವಯಂಕೃಷಿ ಮತ್ತು ಪರಿಶ್ರಮವೇ ಕಾರಣ. ಅವರು ಅತ್ಯಂತ ಸುಗಮವಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಜವಾಬ್ದಾರಿಯನ್ನು ನಿರ್ವಹಿಸಲಿ ಎಂದು ಹಾರೈಸಿದರು.
ಕೆಯುಡಬ್ಲೂö್ಯಜೆ ಖಜಾಂಚಿ ಎಂ.ವಾಸುದೇವಹೊಳ್ಳ ಮಾತನಾಡಿ, ಮೊದಲಿನಿಂದಲೂ ಪ್ರಭಾಕರ್ ಮುನ್ನುಗ್ಗುವ ಸ್ವಭಾವ ಹೊಂದಿದ್ದು, ಅದು ಅವರ ಯಶಸ್ಸಿನ ಸೋಪಾನವಾಗಿದೆ ಎಂದು ನುಡಿದರು.
ಹಿರಿಯ ಪತ್ರಕರ್ತರಾದ ಜಿ.ಎನ್.ಮೋಹನ್, ಕಂ.ಕ ಮೂರ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ಪ್ರಭಾಕರ್ ಅವರನ್ನು ಅಭಿನಂದಿಸಿ ಮಾತನಾಡಿದರು.
ಈ ವೇಳೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪರವಾಗಿ ಕೆ.ವಿ.ಪ್ರಭಾಕರ್ ಅವರನ್ನು ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು, ಕೋಲಾರವಾಣಿ ಸಂಪಾದಕ ಬಿ.ಎನ್.ಮುರಳಿಪ್ರಸಾದ್, ಕೃಷ್ಣಾಪುರ ದೇವರಾಜ್, ಬಂಗಾರಪೇಟೆ ನಾಗಮಣಿ, ಶ್ರೀನಿವಾಸ್ ಶಾಲು ಹೊದಿಸಿ ಅಭಿನಂದಿಸಿದರು.

Leave a Reply

Your email address will not be published. Required fields are marked *