ಕೋಲಾರ:- ಆರ್ಥಿಕ ಅಸಮಾನತೆ ಹೋಗಲಾಡಿಸುವ ಶಕ್ತಿ ಇರುವ ಸಹಕಾರಿ ರಂಗದ ಸೌಲಭ್ಯಗಳನ್ನು ಪತ್ರಕರ್ತರು ಸದುಪಯೋಗಪಡಿಸಿಕೊಳ್ಳಬೇಕು, ಸ್ವಾವಲಂಬಿ ಜೀವನಕ್ಕೆ ದಾರಿ ಕಂಡುಕೊಳ್ಳಬೇಕು ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ೨೦೨೧-೨೨ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಪತ್ರಕರ್ತರೂ ಸಹಕಾರಿ ರಂಗದ ಸದಸ್ಯರಾಗುವ ಮೂಲಕ ಆರ್ಥಿಕ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದೀರಿ, ಆದರೆ ಸಹಕಾರ ರಂಗ ಉಳಿಯಲು ಸದಸ್ಯರಲ್ಲಿ ಪ್ರಾಮಾಣಿಕತೆ,ಬದ್ದತೆ ಅಗತ್ಯವಾಗಿದೆ ಎಂಬುದನ್ನು ಮರೆಯಬಾರದು, ಪಡೆದ ಸಾಲವನ್ನು ಸಕಾಲದಲ್ಲಿ ಪಾವತಿಸುವ ಮೂಲಕ ಮತ್ತಷ್ಟು ಮಂದಿಗೆ ಸಾಲ ಸೌಲಭ್ಯ ಸಿಗುವಂತೆ ನೆರವಾಗಬೇಕು ಎಂದರು
ಸಹಕಾರ ರಂಗ ಉಳಿಸಿ ಬೆಳೆಸುವ ಹೊಣೆ ಪತ್ರಕರ್ತರಿಗೂ ಇದೆ, ಇಲ್ಲಿ ಪಾರದರ್ಶಕತೆ,ಪ್ರಾಮಾಣಿಕತೆ ಇರಬೇಕು ತಪ್ಪಿದಲ್ಲಿ ಸಹಕಾರ ರಂಗ ಉಳಿಯುವುದಿಲ್ಲ ಎಂಬುದನ್ನು ಮರೆಯಬಾರದು, ಪತ್ರಕರ್ತರ ಸಹಕಾರ ಸಂಘವನ್ನು ಕೆ.ಎಸ್.ಗಣೇಶ್ ಮತ್ತು ಅವರ ತಂಡ ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದೆ, ಇದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಪತ್ರಕರ್ತರಿಗೆ ಸಂಘ ಹೆಮ್ಮರವಾಗಿ ಬೆಳೆದು ನೆರಳು ನೀಡಲಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಸದಸ್ಯರಿಗೆ ಸಾಲ ತೆಗೆದುಕೊಳ್ಳುವಾಗ ಇರುವ ಮುತುವರ್ಜಿ ಸಾಲ ಮರುಪಾವತಿಸುವಾಗಲೂ ಇರಬೇಕು, ಮರುಪಾವತಿಯಲ್ಲಿ ಲೋಪ ಎಸಗುವ ಸದಸ್ಯರಿಗೆ ಮತ್ತೊಮ್ಮೆ ಸಾಲ ನೀಡಬಾರದು ಎಂದರು.
ಸಹಕಾರ ಸಂಘದ ಆಡಳಿತ ಮಂಡಳಿ ಸಾಲ ವಸೂಲಾತಿ ವಿಷಯದಲ್ಲಿ ನಿಷ್ಠೂರ ಹಾಗೂ ಕಠಿಣವಾಗಿ ವರ್ತಿಸಬೇಕು, ಏಕೆಂದರೆ ಸಹಕಾರ ಸಂಘದ ನೆರಳಲ್ಲಿ ಅನೇಕರು ಜೀವನ ಕಟ್ಟಿಕೊಳ್ಳುವ ಆಶಯ ಹೊಂದಿರುತ್ತಾರೆ, ಕೆಲವರು ಸಾಲ ಮರುಪಾವತಿಸದೇ ಮಾಡುವ ತಪ್ಪಿನಿಂದ ಮತ್ತಷ್ಟು ಸದಸ್ಯರಿಗೆ ಅನ್ಯಾಯವಾಗುತ್ತದೆ ಎಂಬ ಅರಿವು ಇರಬೇಕು ಎಂದರು.
ಯಶಸ್ವಿನಿ ಆರೋಗ್ಯ ವಿಮೆ ಯೋಜನೆ ಮತ್ತೆ ಜಾರಿಯಾಗುತ್ತಿದ್ದು, ಇದರ ಪ್ರಯೋಜನ ಸಂಘದ ಎಲ್ಲಾ ಸದಸ್ಯರಿಗೂ ಸಿಗುವಂತೆ ಮಾಡಬೇಕು ಎಂದರು.
ಆಯವ್ಯಯ ಮಂಡನೆ ೧.೩೨ಲಕ್ಷ ಲಾಭ ಆಯವ್ಯಯ ಮಂಡಿಸಿದ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ ಈವರೆಗೂ ೮೩.೧೪ ಲಕ್ಷ ವಹಿವಾಟು ನಡೆಸುವ ಮೂಲಕ ೧.೩೨ ಲಕ್ಷ ಲಾಭ ಗಳಿಸಿದೆ ಎಂದು ತಿಳಿಸಿದರು.
ಸಭೆಯಲ್ಲಿ ಚಂದ್ರಶೇಖರ್ ಪ್ರಾರ್ಥಿಸಿ, ಸಂಘದ ನಿರ್ದೇಶಕ ಎ.ಜಿ.ಸುರೇಶ್‌ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ಗಂಗಾಧರ್ ವಂದಿಸಿದ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಸಂಘದ ನಿರ್ದೇಶಕರಾದ ಎ.ಸದಾನಂದ,ಹೆಚ್.ಎನ್.ಮುರಳಿಧರ್, ಎಸ್.ಎನ್.ಪ್ರಕಾಶ್, ಬಿ.ಸುರೇಶ್, ಎಂ.ನಾಗರಾಜಯ್ಯ, ಎಂ.ನಾರಾಯಣಪ್ಪ, ರಾಮಮೂರ್ತಿ, ಪಿಎನ್.ದಾಸ್, ಎನ್.ಮುನಿಯಪ್ಪ,ವೆಂಕಟೇಶಬಾಬಾ ಸೇರಿದಂತೆ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಸಂಘದ ನೂರಾರು ಮಂದಿ ಸದಸ್ಯರು ಹಾಜರಿದ್ದರು.