ಆಶ್ವಯುಜ ಮಾಸದ ಪಾಡ್ಯದಿಂದ, ದಶಮಿಯವರೆಗೆ ಇರುವ ರಾತ್ರಿಗಳನ್ನು ʼಶರನ್ನವರಾತ್ರಿʼಯೆಂದು ಕರೆಯುತ್ತಾರೆ. ಶರತ್ + ನವ + ರಾತ್ರಿ = ಶರನ್ನವರಾತ್ರಿ – ಶರದೃತು ಪ್ರಾರಂಭದ ಒಂಭತ್ತು ರಾತ್ರಿಗಳು ಎಂದು ಇದರರ್ಥ.
ಪಾಡ್ಯ:ಎಣ್ಣೆಯ ಸ್ನಾನ ಮಾಡಿ, ದೇವರ ಮುಂದೆ, ಎರಡು ಕಲಶ, ಪಟ್ಟದ ಗೊಂಬೆ, ಚಾಮುಂಡೇಶ್ವರಿಯ ಪೋಟೋ ಇಟ್ಟು, ಪ್ರತಿದಿನ ಸಹಸ್ರನಾಮಾರ್ಚನೆಯೊಂದಿಗೆ ಪೂಜಿಸಿ, ಸಿಹಿ ಅಡಿಗೆಯನ್ನು ನೈವೇದ್ಯ ಮಾಡಬೇಕು. ಹಾಗೆಯೇ ಪ್ರತಿದಿನ ಎಲ್ಲಾ ಹೊಸಲಿಗೂ, ಅರಿಶಿನ-ಕುಂಕುಮ, ಚಂದ್ರ, ಹೂ-ಅಕ್ಷತೆ, ಗೆಜ್ಜೆ ವಸ್ತ್ರಗಳೊಂದಿಗೆ ಪೂಜಿಸಬೇಕು. ದಿನವೂ ಹೊಸ್ತಿಲು ಸಾರಿಸಿ, ಅರಿಶಿನ-ಕುಂಕುಮ ಹೂಗಳನ್ನಿಟ್ಟು, ದೇವರಿಗೆ, ಕಲಶಕ್ಕೆ, ಗೊಂಬೆಗಳಿಗೆ ಮತ್ತು ಪೋಟೋಗಳಿಗೆ ಆರತಿಯನ್ನು ಮಾಡಬೇಕು. ಪ್ರತಿದಿನವೂ ಒಂದೊಂದು ತರಹದ ಪಾಯಸ, ಮೊಸರನ್ನ, ಹೆಸರುಬೇಳೆ ಅಥವಾ ಕಡ್ಲೆಬೇಳೆ ಕೋಸಂಬರಿ, ಹಸುವಿನ ಹಾಲು, ಹಣ್ಣು-ಕಾಯಿ, ಎಲೆ-ಅಡಿಕೆಗಳೊಂದಿಗೆ ಪೂಜಿಸಿ, ಆರತಿಯನ್ನು ಮಾಡಬೇಕು. ನವರಾತ್ರಿ ಒಂಬತ್ತು ದಿನವೂ ʼದೇವಿ ಮಹಾತ್ಮೆʼ ಹಾಗೂ ʼಭಗವದ್ಗೀತೆʼಯನ್ನು ಪಠಿಸಬೇಕು.
ನವರಾತ್ರಿಯಲ್ಲಿ ಪ್ರತಿದಿನ ನೈವೇದ್ಯಕ್ಕೆ ಇವು ಶ್ರೇಷ್ಠ!
- ಪಾಡ್ಯ : ಹೋಳಿಗೆ, ಚಿತ್ರಾನ್ನ, ಶ್ಯಾವಿಗೆ ಪಾಯಸ, ಮೊಸರನ್ನ
- ಬಿದಿಗೆ : ಹೆಸರುಬೇಳೆ ಪಾಯಸ, ಮೊಸರನ್ನ
- ತದಿಗೆ : ಸಬ್ಬಕ್ಕಿ ಪಾಯಸ, ಮೊಸರನ್ನ
- ಚೌತಿ : ಪೊಂಗಲ್, ಮೊಸರನ್ನ
- ಪಂಚಮಿ : ಗೋಧಿ ಪಾಯಸ, ಮೊಸರನ್ನ
- ಷಷ್ಠಿ : ಸಜ್ಜಿಗೆ, ವಡೆ, ಮೊಸರನ್ನ
- ಸಪ್ತಮಿ : ಮೊಸರನ್ನ (ಪುಸ್ತಕ ವಾದ್ಯಗಳನ್ನಿಟ್ಟು ಪೂಜಿಸಬೇಕು)
- ಅಷ್ಟಮಿ : ಹೂರಣದ ಕರಿಗಡುಬು, ಚಿತ್ರಾನ್ನ, ಮೊಸರನ್ನ
- ನವಮಿ – ಆಯುಧ ಪೂಜೆ : ಈ ದಿನ ಹಾಲುಹೋಳಿಗೆ, ಹುಳಿಯನ್ನ ಮಾಡಬೇಕು. ಆಯುಧ ಹಾಗೂ ವಾಹನಗಳನ್ನು ತೊಳೆದು ಅವುಗಳಿಗೆ ಅರಿಶಿನ-ಕುಂಕುಮ ವಿಭೂತಿಗಳನ್ನಿಟ್ಟು ಹೂ-ಅಕ್ಷತೆಗಳಿಂದ ಪೂಜಿಸಿ, ನಿಂಬೆಹಣ್ಣು, ತೆಂಗಿನಕಾಯಿ ಮತ್ತು ಕುಂಬಳಕಾಯಿಯನ್ನು ನೀವಳಿಸಿ, ಒಡೆಯಬೇಕು.
- ವಿಜಯದಶಮಿ : ಹೋಳಿಗೆ, ಪಾಯಸ, ಚಿತ್ರಾನ್ನ, ಮೊಸರನ್ನಗಳನ್ನು ನೈವೇದ್ಯ ಮಾಡಬೇಕು. ಸಂಜೆ: ದೇವರಿಗೆ ಮಕ್ಕಳಿಗೆ ಆರತಿಯನ್ನು ಮಾಡಿ, ನಂತರ ಬನ್ನಿಪತ್ರೆಯೊಂದಿಗೆ ಪ್ರಾರ್ಥಿಸಿ, ದೇವರಿಗೆ ಅರ್ಪಿಸಿ, ಗೊಂಬೆ, ಕಲಶ, ಪೋಟೋಗಳನ್ನು ವಿಸರ್ಜಿಸುವುದು. ಹಿರಿಯರಿಗೆಲ್ಲಾ ಬನ್ನಿಪತ್ರೆಯನ್ನು ಕೊಟ್ಟು ನಮಸ್ಕರಿಸಿ, ಅವರಿಂದ ಆಶೀರ್ವಾದ ಪಡೆಯಬೇಕು. ಆನಂತರ ಕುಟುಂಬದವರೆಲ್ಲರೂ ಒಟ್ಟಾಗಿ ದೇವಸ್ಥಾನಕ್ಕೆ ಹೋಗಿ ಪೂಜಿಸಬೇಕು.
ಭೃಗುಪ್ರೋಕ್ತ-ಬನ್ನಿಪೂಜೆಯ ಕ್ರಮ
ದೇವಸ್ಥಾನದವರು ದೇವರನ್ನು ಮೆರವಣಿಗೆಯ ಪಲ್ಲಕ್ಕಿ ಉತ್ಸವದೊಂದಿಗೆ ಬನ್ನೀವೃಕ್ಷದ ಸಮೀಪಕ್ಕೆ ಹೋಗಿ, ವೃಕ್ಷದ ಸುತ್ತಲೂ ರಂಗವಲ್ಲಿ, ಹೂ-ಪತ್ರೆ, ಅಕ್ಷತೆ ಮುಂತಾದವುಗಳಿಂದ ಅಲಂಕರಿಸಿ, ದೇವರ ಮುಂಭಾಗದಲ್ಲಿ ಪುಣ್ಯಾಹವಾಚನದಿಂದ ಸ್ಥಳಶುದ್ಧಿ ಮಾಡಿ, ಬಿಲ್ಲು, ಬಾಣ, ಬತ್ತಳಿಕೆ, ಗುರಾಣಿ, ಖಡ್ಗ ಮುಂತಾದ ಎಲ್ಲಾ ಆಯುಧಗಳನ್ನು ಇಡುತ್ತಾರೆ. ಬಿಲ್ಲಿನಲ್ಲಿ ವಿಷ್ಣು, ರುದ್ರ, ಬ್ರಹ್ಮರನ್ನೂ, ಬಾಣದಲ್ಲಿ ವರುಣನನ್ನೂ, ಶಂಖ-ಚಕ್ರ-ಗದಾ-ಖಡ್ಗಗಳಲ್ಲಿ ಆಯಾ ದೇವತೆಗಳನ್ನೂ, ಬನ್ನೀಮಂಟಪದಲ್ಲಿ ಅಗ್ನಿಯನ್ನೂ ಆವಾಹನೆ ಮಾಡಿ, ವೃಕ್ಷದ ಪೂರ್ವದಲ್ಲಿ ಯಕ್ಷರನ್ನೂ, ದಕ್ಷಿಣದಲ್ಲಿ ರಾಕ್ಷಸರನ್ನೂ, ಪಶ್ಚಿಮದಿಕ್ಕಿನಲ್ಲಿ ಪಿಶಾಚರನ್ನೂ, ಉತ್ತರದಿಕ್ಕಿನಲ್ಲಿ ಮಧು-ಕೈಟಭರನ್ನೂ ಆವಾಹಿಸಿ, ಅಷ್ಟೋಪಚಾರಗಳಿಂದ ಪೂಜಿಸಿ, ಧನ್ವನಾಗ ಎಂಬ ಮಂತ್ರದಿಂದ ಧನುಷ್ಠೇಂಕಾರವನ್ನೂ, ಯಾತಇಷುಃ ಎಂಬ ಮಂತ್ರದಿಂದ ಬಾಣ ಹೂಡಿ, ಅನಂತರ ನಾಲ್ಕು ದಿಕ್ಕುಗಳಿಗೂ ನಾಲ್ಕು ಬಾಣಗಳನ್ನು ಬಿಟ್ಟು, ಬಿಲ್ಲನ್ನು ಕೆಳಗಿರಿಸಿ, ಚಕ್ರದಿಂದ ಯಕ್ಷರನ್ನೂ, ರಾಕ್ಷಸರನ್ನೂ, ಗದೆಯಿಂದ ಪಿಶಾಚರನ್ನೂ, ಖಡ್ಗದಿಂದ ಮಧು-ಕೈಟಭರನ್ನೂ ಕೊಲ್ಲಬೇಕು. ಇಂಥ ಕಾರ್ಯಗಳಿಗೋಸ್ಕರವಾಗಿಯೇ, ಶಾಸ್ತ್ರ ಸೌಕರ್ಯಕ್ಕಾಗಿ ಬಾಳೆಕಂಬವನ್ನು ನೆಟ್ಟು, ಅದನ್ನು ಛೇದನ ಮಾಡುವ ಪದ್ಧತಿಯಿದೆ. ಕೆಲವು ಕಡೆ ಅಧಿಕಾರಿಗಳೂ ಛೇದನವನ್ನು ಮಾಡುತ್ತಾರೆ. ಎಲ್ಲದರ ಔಪಚಾರಿಕ ರೀತಿಯೇ ಈ ಬಾಳೇಕಂಬ ಕಡಿಯುವ ಪದ್ಧತಿ ಇರಬೇಕು. ಅನಂತರ ಎಲ್ಲಾ ಬಿಲ್ಲುಗಳನ್ನೂ, ಆಯುಧಗಳನ್ನೂ ಮಂತ್ರದಿಂದ ಶುದ್ಧವಾದ ನೀರಿನಿಂದ ತೊಳೆದು ದೇವರ ಮುಂದಿರಿಸಿ ನಮಸ್ಕರಿಸಬೇಕು.