ದೂರು ನೀಡಲು ಬರುವ ಮಹಿಳೆಯರೊಂದಿಗೆ ಉತ್ತಮವಾಗಿ ಸಂವಹನ ನಡೆಸಿ – ಎಸ್.ಪಿ. ಎಂ.ನಾರಾಯಣ.

ಕೋಲಾರ, ಮಹಿಳೆಯರು ಠಾಣೆಯ ಬಳಿ ದೂರುಗಳನ್ನು ನೀಡಲು ಬಂದಾಗ ಅಧಿಕಾರಿಗಳು ಅವರೊಂದಿಗೆ ಸೂಕ್ತವಾಗಿ ಸಂವಹನ ನಡೆಸಿ ದೂರುಗಳನ್ನು ಸ್ವೀಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅವರು ನಿರ್ದೇಶನ ನೀಡಿದರು.
ಇಂದು ನಗರದ ಕವಾಯತು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಸಮಸ್ಯೆಗಳಾದಾಗ ಅವರು ಠಾಣೆಗೆ ದೂರನ್ನು ನೀಡಲು ಬರುತ್ತಾರೆ. ಇಂತಹ ದೂರುಗಳನ್ನು ಮಹಿಳೆಯರು ತಂದಾಗ ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ನಡೆದ ವಿಚಾರದ ಬಗ್ಗೆ ದೂರುಗಳನ್ನು ಸ್ವೀಕರಿಸಿ ಮುಂದಿನ ಕ್ರಮವನ್ನು ವಹಿಸಬೇಕೆಂದು ತಿಳಿಸಿದರು.
ಮಧ್ಯರಾತ್ರಿಯ ವೇಳೆಯಲ್ಲಿ ಟೀ ಅಂಗಡಿಗಳು, ಮದ್ಯದ ಅಂಗಡಿಗಳು, ಹೋಟೆಲ್‌ಗಳು ಸೇರಿದಂತೆ ಇತರೆ ಅಂಗಡಿಗಳು ತೆರೆಯುವುದನ್ನು ಸಂಪೂರ್ಣವಾಗಿ ನಿಯಂತ್ರಿಸುವ ಕೆಲಸ ಮಾಡಬೇಕು. ಈ ಸಂಬoಧ ರಾತ್ರಿ ಪಾಳಯದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳು ಸೂಕ್ತವಾಗಿ ಕಾರ್ಯ ನಿರ್ವಹಿಸಬೇಕು. ಇವುಗಳನ್ನು ಸಮಯಕ್ಕೆ ಸರಿಯಾಗಿ ಮುಚ್ಚಿಸುವ ಕೆಲಸ ಮಾಡಬೇಕು ಎಂದರು.
ದ್ವಿ ಚಕ್ರ ವಾಹನ ಚಾಲಕರು ತಪ್ಪದೆ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಬೇಕು. ತ್ರಿಬಲ್ ರೈಡಿಂಗ್ ಮಾಡುವ ಮೂಲಕ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವುದು ಹೆಚ್ಚಾಗಿ ಕಂಡುಬರುತ್ತಿರುತ್ತದೆ. ಇವುಗಳನ್ನು ನಿಯಂತ್ರಿಸುವುದರ ಜೊತೆಗೆ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಂಚಾರಿ ಪೊಲೀಸ್ ಮಾಡಬೇಕೆಂದು ಹೇಳಿದರು.
ಜಿಲ್ಲೆಯಲ್ಲಿ ಈಗಾಗಲೇ ಕೆಲವರನ್ನು ಸನ್ನಡತೆಯ ಆಧಾರದ ಮೇಲೆ ರೌಡಿ ಶೀಟರ್ ಪಟ್ಟಿಯಿಂದ ಹೆಸರನ್ನು ಕೈ ಬಿಡಲಾಗಿದೆ. ಸಾರ್ವಜನಿಕ ವಲಯದಲ್ಲಿ ಗಲಾಟೆ ಮತ್ತು ದೊಂಬಿಗಳನ್ನು ಮಾಡುವವರು ಇದ್ದರೆ ಅವರನ್ನು ಹೊಸದಾಗಿ ರೌಡಿಶೀಟರ್ ಪಟ್ಟಿಗೆ ಸೇರ್ಪಡೆ ಮಾಡಿ. ಪುಂಡು ಪೋಕರಿಗಳ ಹಾವಳಿಯನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿರ್ನಾಮ ಮಾಡಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದರು.
ಸಾರ್ವಜನಿಕರಿಗೆ ಸಮಸ್ಯೆಯಾದಲ್ಲಿ ಕೂಡಲೇ ಪೊಲೀಸ್ ಇಲಾಖೆಯ ೧೧೨ ಟೋಲ್ ಫ್ರೀ ನಂಬರ್‌ಗೆ ಕರೆಮಾಡಿ ದೂರುಗಳನ್ನು ನೀಡಬಹುದು ಎಂದ ಅವರು, ರಾತ್ರಿ ಹೈವೇ ಸಂಚರಿತ ವಾಹನಗಳು ಸರಿಯಾದ ಸುರಕ್ಷಿತ ಕ್ರಮವನ್ನು ಕೈಗೊಳ್ಳಬೇಕು. ಹೊರ ರಾಜ್ಯಗಳಿಂದ ಬರುವ ವಾಹನಗಳ ಮೇಲೆ ನಿಗಾ ವಹಿಸಬೇಕು. ಇದರ ಜೊತೆಗೆ ಅಪಘಾತಗಳು ಸಂಭವಿಸಿದಾಗ ಅವರನ್ನು ರಕ್ಷಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಿನಾಥ್, ಪ್ರೊಬೆಷನರಿ ಐ.ಎ.ಎಸ್ ಅಧಿಕಾರಿ ವಿನಾಯಕ್, ಎಲ್ಲಾ ಪೊಲೀಸ್ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *