ಕೋಲಾರ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ ರ ಪ್ರಕರಣ ೧೨೧ ೧೨೨ ಮತ್ತು ೧೬೦ ೧೬೧ ಅನ್ವಯ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣಾ ಕ್ಷೇತ್ರಗಳಿಗೆ ಸದಸ್ಯ ಸ್ಥಾನಗಳನ್ನು ನಿರ್ಣಯಗೊಳಿಸಬೇಕಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಜನಪ್ರತಿನಿಧಿಗಳ ಸಭೆಯನ್ನು ಆಯೋಜಿಸಲಾಗಿತ್ತು.
ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಅಕ್ರಂಪಾಷ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ್ದರು.
೨೦೧೧ರ ಜನಗಣತಿಯಂತೆ ಗ್ರಾಮೀಣ ಜನಸಂಖ್ಯೆಯ ಮಾಹಿತಿ ಆಧಾರದ ಮೇಲೆ ಕೋಲಾರ ಜಿಲ್ಲೆಯಲ್ಲಿ ಒಟ್ಟು ೧೦,೬೭,೦೬೩ ಜನಸಂಖ್ಯೆ ಹೊಂದಿದ್ದು, ಇವರಲ್ಲಿ ೫,೪೦,೫೯೮ ಪುರುಷರು ಹಾಗೂ
೫,೨೬,೪೬೫ ಮಹಿಳೆಯರು ಇರುತ್ತಾರೆ. ಜಿಲ್ಲೆಯಲ್ಲಿ ಪ್ರಸ್ತುತ ೧೦೭ ತಾಲ್ಲೂಕು ಪಂಚಾಯಿತಿ ಸದಸ್ಯರ ಸಂಖ್ಯೆ ಇದ್ದು ಜಿಲ್ಲಾ ಪಂಚಾಯಿತಿ ಸದಸ್ಯರ ಸಂಖ್ಯೆ ೨೯ ಆಗಿರುತ್ತದೆ.
ಕೆಜಿಎಫ್ ತಾಲ್ಲೂಕಿನಲ್ಲಿ ೧೨ ತಾಲ್ಲೂಕು ಪಂಚಾಯಿತಿ, ಬಂಗಾರಪೇಟೆಯಲ್ಲಿ ೧೬, ಶ್ರೀನಿವಾಸಪುರ ತಾಲ್ಲೂಕಿನಲ್ಲಿ ೧೮, ಮಾಲೂರು ತಾಲ್ಲೂಕಿನಲ್ಲಿ ೨೦, ಮುಳಬಾಗಿಲು ತಾಲ್ಲೂಕಿನಲ್ಲಿ ೨೧ ಹಾಗೂ ಕೋಲಾರ ತಾಲ್ಲೂಕಿನಲ್ಲಿ ೨೦, ತಾಲ್ಲೂಕು ಪಂಚಾಯಿತಿಗಳನ್ನು ಗುರುತಿಸಲಾಗಿದೆ. ಅದರಂತೆ ಕೆಜಿಎಫ್ ತಾಲ್ಲೂಕಿನಲ್ಲಿ ೩, ಬಂಗಾರಪೇಟೆ ತಾಲ್ಲೂಕಿನಲ್ಲಿ ೪, ಶ್ರೀನಿವಾಸಪುರ ತಾಲ್ಲೂಕಿನಲ್ಲಿ ೫, ಮಾಲೂರು ತಾಲ್ಲೂಕಿನಲ್ಲಿ ೫, ಮುಳಬಾಗಿಲು ತಾಲ್ಲೂಕಿನಲ್ಲಿ ಆರು ಹಾಗೂ ಕೋಲಾರ ತಾಲ್ಲೂಕಿನಲ್ಲಿ ಆರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ವಿಂಗಡಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮಗಳ ಅನ್ವಯ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಮರುವಿಂಗಡನೆ ಗೊಳಿಸಲಾಗುತ್ತಿದೆ. ತಾಲ್ಲೂಕು ಪಂಚಾಯಿತಿ ಚುನಾಯಿತರ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸುವಾಗ ೧ ಲಕ್ಷ ಮೀರಿದ ಆದರೆ ೨,೩೦,೦೦೦ ಮೀರಿರದ ಗ್ರಾಮೀಣ ಜನಸಂಖ್ಯೆಯನ್ನು ಹೊಂದಿರುವ ತಾಲ್ಲೂಕುಗಳಲ್ಲಿ ಪ್ರತಿ ೧೦೦೦೦ಕ್ಕೆ ಕಡಿಮೆ ಇಲ್ಲದ ಜನಸಂಖ್ಯೆಗೆ ಒಬ್ಬ ಚುನಾಯಿತ ಸದಸ್ಯರು ಇರಬೇಕೆಂಬ ನಿಯಮಾವಳಿಗಳು ಚಾಲ್ತಿಯಲ್ಲಿದೆ. ಜಿಲ್ಲಾ ಪಂಚಾಯಿತಿಗಳಲ್ಲಿ ಜಿಲ್ಲೆಯ ತಾಲ್ಲೂಕುಗಳಿಂದ ೨೫ಕ್ಕೂ ಕಡಿಮೆ ಇಲ್ಲದಂತೆ ಚುನಾಯಿತ ಸದಸ್ಯರು ಇರತಕ್ಕದ್ದು, ಪ್ರತಿಯೊಂದು ತಾಲ್ಲೂಕಿನಿಂದ ಚುನಾಯಿತರಾಗುವ ಸದಸ್ಯರ ಸಂಖ್ಯೆಯನ್ನು ೪೦, ಜನಸಂಖ್ಯೆಗೆ ಅಥವಾ ಭಾಗಕ್ಕೆ ಒಬ್ಬ ಸದಸ್ಯರಂತೆ ನಿಗದಿಪಡಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ಹೊಸದಾಗಿ ರಚಿಸುವ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಹೆಸರನ್ನು ನಿಗದಿಪಡಿಸುವಾಗ ೨೦೧೫ರ ಅಧಿಸೂಚನೆಯಲ್ಲಿ ಇದ್ದಂತೆ ನಿಗದಿಪಡಿಸಲಾಗಿದೆ. ಒಂದು ವೇಳೆ ಅಧಿಸೂಚನೆಯಲ್ಲಿ ಇಲ್ಲದಿದ್ದಲ್ಲಿ ಆಯಾ ಕ್ಷೇತ್ರಗಳಲ್ಲಿನ ಅತಿ ಹೆಚ್ಚು ಜನಸಂಖ್ಯೆ ಇರುವ ಗ್ರಾಮದ ಹೆಸರನ್ನು ಆ ಚುನಾವಣಾ ಕ್ಷೇತ್ರದ ಹೆಸರನ್ನಾಗಿ ಪರಿಗಣಿಸಲಾಗಿದೆ.
ಕೆಲವು ವೇಳೆ ಅತಿ ಹೆಚ್ಚು ಜನಸಂಖ್ಯೆ ಇರುವ ಗ್ರಾಮದ ಹೆಸರನ್ನಲ್ಲದೆ ಐತಿಹಾಸಿಕ ಶೈಕ್ಷಣಿಕ ಸಾಂಸ್ಕöÈತಿಕ ವಾಣಿಜ್ಯ ಇತ್ಯಾದಿ ಮಹತ್ವವಿರುವ ಗ್ರಾಮದ ಹೆಸರನ್ನು ಪರಿಗಣಿಸಲಾಗಿದೆ ಎಂದು ತಿಳಿಸಿದರು.
ಈ ಪ್ರಕ್ರಿಯೆಯಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸುಲಭವಾಗಿ ಸಂಚರಿಸುವoತಹ ಮತ್ತು ಯಾವುದೇ ಅಡೆತಡೆಗಳು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ.
ಗ್ರಾಮ ಪಂಚಾಯಿತಿಗಳನ್ನು ಒಟ್ಟುಗೂಡಿಸುವ ಸಂದರ್ಭದಲ್ಲಿ ಅಕ್ಕಪಕ್ಕದ ಭೌಗೋಳಿಕವಾಗಿ ಹೊಂದಿಕೊoಡಿರುವ ಗ್ರಾಮ ಪಂಚಾಯಿತಿಗಳನ್ನು ಒಟ್ಟುಗೂಡಿಸಲಾಗಿದೆ. ಜಿಲ್ಲಾ ಪಂಚಾಯತ್ ಕ್ಷೇತ್ರದೊಳಗೆ ಬರುವ ಪೂರ್ಣ ಗ್ರಾಮ ಪಂಚಾಯಿತಿಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಒಟ್ಟುಗೂಡಿಸಿ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳನ್ನು ನಿರ್ಧರಿಸಲಾಗಿದೆ. ಒಂದು ವೇಳೆ ಆ ರೀತಿ ಸಾಧ್ಯವಾಗದಿದ್ದಲ್ಲಿ ಕೆಲವು ಗ್ರಾಮಗಳನ್ನು ಗುಂಪು ಮಾಡಲಾಗಿದೆ. ಈ ಸಂದರ್ಭದಲ್ಲಿಯೂ ಸಹ ಮೂಲ ಗ್ರಾಮಗಳನ್ನು ಬೇರೆಯಾಗಿ ವಿಂಗಡಿಸದೆ ಕಂದಾಯ ಗ್ರಾಮದೊಂದಿಗೆ ಇರುವಂತೆ ನೋಡಿಕೊಳ್ಳಲಾಗಿದೆ.
ತಾಲ್ಲೂಕು ಪಂಚಾಯಿತಿಗಳನ್ನು ಜಿಲ್ಲಾ ಪಂಚಾಯತಿ ಕ್ಷೇತ್ರದೊಳಗೆ ಒಟ್ಟುಗೂಡಿಸುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಒಂದು ತಾಲ್ಲೂಕು ಪಂಚಾಯಿತಿ ಕ್ಷೇತ್ರವು ಎರಡು ಜಿಲ್ಲಾ ಪಂಚಾಯತಿ ಕ್ಷೇತ್ರಗಳಿಗೆ ವಿಭಜನೆಯಾದಂತೆ ನೋಡಿಕೊಳ್ಳಲಾಗಿದೆ
ಪ್ರತಿಯೊಂದು ಚುನಾವಣೆ ಕ್ಷೇತ್ರಗಳ ಜನಸಂಖ್ಯೆಯಲ್ಲಿ ಸಾಧ್ಯವಾಗುವಷ್ಟರ ಮಟ್ಟಿಗೆ ಹೆಚ್ಚಿನ ವ್ಯತ್ಯಾಸ ಬರದಂತೆ, ನಿಗಾ ವಹಿಸಲಾಗಿದೆ.
ಎಲ್ಲ ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಪ್ರಸ್ತುತ ಸೀಮಾ ನಿರ್ಣಯ ನಿಗಧಿಪಡಿಸುವ ಕಾರ್ಯವನ್ನು ಮಾಡಲಾಗಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ಪ್ರಜಾಪ್ರತಿನಿಧಿಗಳು ಲಿಖಿತ ಮೂಲಕ ಮನವಿ ನೀಡಿದಲ್ಲಿ ಅದರ ಸಾಧಕ ಬಾದಕಗಳನ್ನು ನೀಯಾಮಾವಳಿಗಳನ್ನು ಮೀರಿದಂತೆ ಪರಿಗಣಿಸಲಾಗುವುದು ಎಂದರು.
ಸಭೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಜಿ.ಕೊತ್ತೂರು ಮಂಜುನಾಥ್, ಮಾಲೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ವೈ.ನಂಜೇಗೌಡ, ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ವಿಧಾನಪರಿಷತ್ ಶಾಸಕರಾದ ಎಂ.ಎಲ್.ಅನಿಲ್‌ಕುಮಾರ್, ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಣಿಕ್ಯಾಳ್, ಚುನಾವಣಾ ತಹಿಶೀಲ್ದಾರ್ ನಾಗವೇಣಿ, ಚುನಾವಣಾ ಶಿರಸ್ತೆದಾರ್ ಮಂಜುಳಾ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷದ ಮುಖಂಡರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.