ಕೋಲಾರ:- ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ನೇತೃತ್ವದಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು ಗುರುವಾರ ಬೆಳಗ್ಗೆ ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್, ಜಿಪಂ ಸಿಇಒ ಯುಕೇಶ್‌ಕುಮಾರ್ ಅವರನ್ನು ಪ್ರತ್ನೇಕವಾಗಿ ಭೇಟಿಯಾಗಿ ಹೊಸವರ್ಷದ ಶುಭಾಷಯ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಮಾತನಾಡಿ, ಜಿಲ್ಲೆಯ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ಜಿಲ್ಲಾಡಳಿತದ ಕಾರ್ಯಾಂಗದ ಹೊಣೆ ಹೊತ್ತಿರುವ ನೌಕರರು ಬದ್ದತೆಯಿಂದ ಕೆಲಸ ಮಾಡಿ, ಹೊಸ ವರ್ಷದಲ್ಲಿ ಜಿಲ್ಲೆಯ ಜನತೆಗೆ ಉತ್ತಮ ಸೇವೆ ನೀಡೋಣ, ಜನರ ಸಮಸ್ಯೆಗಳ ಪರಿಹಾರಕ್ಕೆ ಬದ್ದತೆ ತೋರೋಣ ಎಂದು ಶುಭ ಕೋರಿದರು.
ನೌಕರರಲ್ಲಿ ಬದ್ದತೆ ಅಗತ್ಯ-ದೇವರಾಜ್
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಿ.ದೇವರಾಜ್ ನೌಕರರ ಸಂಘದ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ, ಸರ್ಕಾರಿ ನೌಕರರು ತಮ್ಮ ಹುದ್ದೆಗೆ ನಿಗಧಿಯಾದ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಿದರೆ ಯಾವುದೇ ಸಮಸ್ಯೆ ಎದುರಾಗದು, ಕಚೇರಿಗೆ ಬರುವ ಜನರನ್ನು ಅಲೆಸದೇ ಅವರ ಕೆಲಸವನ್ನು ಮಾಡಿಕೊಡುವ ಶಕ್ತಿ ಹೊಸ ವರ್ಷ ನಿಮಗೆ ನೀಡಲಿ ಎಂದು ಹಾರೈಸಿದರು.
ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿ,ನೌಕರರು ಕೆಲಸ ಮಾಡುವುದು ಕಷ್ಟ ಎಂಬ ಭಾವನೆ ಇದೆ, ಇದು ಸರಿಯಲ್ಲ ಎಂದ ಅವರು, ನಿಮ್ಮ ಹುದ್ದಗೆ ನಿಗಧಿಯಾದ ಕೆಲಸವನ್ನು ಬದ್ದತೆಯಿಂದ ಮಾಡಿ, ಯಾವುದೇ ಬಾಹ್ಯ ಸಮಸ್ಯೆ ನಿಮಗೆ ಎದುರಾದರೆ ಪೊಲೀಸ್ ಇಲಾಖೆ ನಿಮ್ಮ ಜತೆಗೆ ಇರುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಪಂ ಸಿಇಒ ಯುಕೇಶ್‌ಕುಮಾರ್, ಅಭಿನಂದನೆ ಸ್ವೀಕರಿಸಿ, ಸರ್ಕಾರಿ ನೌಕರರ ಜವಾಬ್ದಾರಿ ಹೆಚ್ಚಿನದಾಗಿದೆ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಹೊಣೆ ನಮ್ಮದಾಗಿದ್ದು, ಅದರನ್ನು ಚಾಚು ತಪ್ಪದೇ ನಿರ್ವಹಿಸೋಣ ಹೊಸ ವರ್ಷದಲ್ಲಿ ಜನರ ಸಮಸ್ಯೆಗಳ ನಿವಾರಣೆಗೆ ಶಕ್ತಿಯಾಗೋಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು, ಜಿಲ್ಲಾಡಳಿತ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯದಲ್ಲಿ ನೌಕರರ ಸಂಘ ಕೈಜೋಡಿಸಲಿದೆ, ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ನೌಕರರು ಜಿಲ್ಲಾಡಳಿತದೊಂದಿಗೆ ಸದಾ ನಿಲ್ಲುತ್ತೇವೆ ಎಂದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಅಜಯ್‌ಕುಮಾರ್,ರಾಜ್ಯಪರಿಷತ್ ಸದಸ್ಯ ಗೌತಮ್, ಗೌರವಾಧ್ಯಕ್ಷ ರವಿಚಂದ್ರ, ಹಿರಿಯ ಉಪಾಧ್ಯಕ್ಷರಾದ ಸುಬ್ರಮಣಿ,ನಂದೀಶ್‌ಕುಮಾರ್, ನಿಕಟಪೂರ್ವ ಅಧ್ಯಕ್ಷರಾದ ಕೆ.ಎನ್.ಮಂಜುನಾಥ್, ಕೆ.ಬಿ.ಅಶೋಕ್, ಹಾಲಿ ಉಪಾಧ್ಯಕ್ಷರಾದ ಮಂಜುನಾಥ್, ರತ್ನಪ್ಪ, ಲೆಕ್ಕಪರಿಶೋಧಕ ಅನಿಲ್, ಸಹಕಾರ್ಯದರ್ಶಿ ಶ್ರೀನಿವಾಸಲು, ಜಂಟಿ ಕಾರ್ಯದರ್ಶಿ ಕದಿರಪ್ಪ, ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ, ಉಪಾಧ್ಯಕ್ಷ ವೀರಣ್ಣಗೌಡ, ಗೌರವಾಧ್ಯಕ್ಷ ಆರ್.ಶ್ರೀನಿವಾಸನ್, ಗಣಿಭೂವಿಜ್ಞಾನ ಇಲಾಖೆಯ ತಿಪ್ಪೇಸ್ವಾಮಿ,ಸರ್ವೇ ಇಲಾಖೆಯ ವಿಜಯ್ ಮತ್ತಿತರರು ಉಪಸ್ಥಿತರಿದ್ದರು.