ಜಿಲ್ಲಾಡಳಿತದಿಂದ ಸಂವಿಧಾನ ಶಿಲ್ಪಿ ಭಾರತರತ್ನ ಡಾ|| ಬಿ.ಆರ್.ಅಂಬೇಡ್ಕರ್ ಅವರ ೧೩೨ನೇ ಜನ್ಮ ದಿನಾಚರಣೆ

ಕೋಲಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಟಿ.ಚನ್ನಯ್ಯ ರಂಗಮoದಿರದಲ್ಲಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೨ ನೇ ಜಯಂತಿಯನ್ನು ಆಚರಿಸಲಾಯಿತು.
ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಏಪ್ರಿಲ್ ೧೪ ರಂದು ಭಾರತದ ಸಂವಿಧಾನ ಶಿಲ್ಪಿ, ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಡಾ|| ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನ. ನಮ್ಮ ದೇಶದ ಪ್ರತಿಯೊಬ್ಬರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಎಂದರು.
ಅಂಬೇಡ್ಕರ್ ಅವರ ಬದುಕು ಎಲ್ಲರಿಗೂ ಸ್ಫೂರ್ತಿ ನೀಡುವಂಥದ್ದು. ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿ. ಇವರ ಆದರ್ಶ ಎಲ್ಲರ ಜೀವನಕ್ಕೆ ದಾರಿ. ಬಾಬಾ ಸಾಹೇಬರ ಚಿಂತೆನೆಗಳು ಇಂದಿಗೂ ಯುವಜನೆತೆಗೆ ದಾರಿದೀಪವಾಗಿದೆ. ೧೯೨೭ ರ ಜೂನ್ ೮ ರಂದು ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಅವರು ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ಬಗ್ಗೆ ತೀವ್ರವಾದ ಹೋರಾಟವನ್ನು ಆರಂಭಿಸಿದರು.
೧೯೨೦ ರಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ಅವರು ಮೂಕನಾಯಕ’ ಎಂಬ ಪತ್ರಿಕೆಯನ್ನು ಆರಂಭಿಸಿದ್ದರು. ಈ ಪತ್ರಿಕೆ ಮುಖಾಂತರ ಸಾರ್ವಜನಿಕರಿಗೆ ಅಸ್ಪೃಶ್ಯತೆಯ ವಿರುದ್ಧ ಹೋರಾಡುವ ಬಗ್ಗೆ ಲೇಖನೆಗಳನ್ನು ಪ್ರಸ್ತುತಪಡಿಸುತ್ತಿದ್ದರು. ಸ್ವತಂತ್ರ ಭಾರತದ ಮೊದಲ ಕಾನೂನು ಸಚಿವರಾಗಿ ನೇಮಕಗೊಂಡಿದ್ದ ಅವರು ಸಂವಿಧಾನ ರಚನೆಯ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು. ಇಂದು ವಿಶ್ವದಾದ್ಯಂತ ಹಾಡಿ ಹೊಗಳುವ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಪ್ರಯೋಗಶಾಲೆಯಾದ ಭಾರತದ ಸಂವಿಧಾನ ರೂಪುಗೊಳ್ಳಲು ಅಪಾರ ಕೊಡುಗೆ, ಶ್ರಮ ಹಾಕಿದ್ದ ಇವರನ್ನು ಭಾರತೀಯ ಸಂವಿಧಾನ ಶಿಲ್ಪಿ ಎಂದೇ ಕರೆಯಲಾಗುತ್ತದೆ ಎಂದು ತಿಳಿಸಿದರು.
ಇಂದು ಬೆಳಗ್ಗೆ ೯.೦೦ ಗಂಟೆಗೆ ನಗರದ ಬಂಗಾರಪೇಟೆ ವೃತ್ತದಲ್ಲಿರುವ ಡಾ|| ಬಿ.ಆರ್. ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಂತರ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯ ನಚಿಕೇತ ನಿಲಯದಲ್ಲಿ ಇರುವ ಡಾ|| ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ. ವೇದಿಕೆ ಕಾರ್ಯಕ್ರಮವನ್ನು ಶ್ರೀ. ಟಿ.ಚನ್ನಯ್ಯ ರಂಗಮoದಿರದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆರಂಭಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಚನ್ನಬಸಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *