ಕೋಲಾರ, ಜಲಜೀವನ್ ಮಿಷನ್ ಯೋಜನೆಯ ಕಾರ್ಯಾತ್ಮಕ ನಳ ಸಂಪರ್ಕಗಳನ್ನು ಅನುಷ್ಠಾನ ಮಾಡುವ ಸಂದರ್ಭಗಳಲ್ಲಿ ಎದುರಿಸುವ ಸಮಸ್ಯೆ, ಸವಾಲುಗಳನ್ನು ಬಗೆಹರಿಸುವ ಕಾರ್ಯತಂತ್ರಗಳನ್ನು ಅಧ್ಯಯನ ಮಾಡಲು ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ಭೇಟಿ ನೀಡಿ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಲು ನುರಿತ ತಜ್ಞರ ತಂಡ ಕೋಲಾರ ಜಿಲ್ಲೆಗೆ ಒಂದು ದಿನದ ಭೇಟಿ ನೀಡಿದ್ದೇವೆ ಎಂದು ಕುಡಿಯುವ ನೀರು ಸರಬರಾಜು ಇಲಾಖೆಯ ಜಲಜೀವನ್ ಮಿಷನ್‌ನ ಉಪ ಸಲಹೆಗಾರರಾದ ಮುರಳೀಧರ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಜಲ ಜೀವನ್ ಮಿಷನ್(ಜೆ.ಜೆ.ಎಂ) ಮತ್ತು ಸ್ವಚ್ಛ ಭಾರತ್ ಮಿಷನ್ (ಗ್ರಾ) (ಎಸ್.ಬಿ.ಎಂ) ಯೋಜನೆಗಳಡಿಯಲ್ಲಿ ಮಾಹಿತಿ, ಶಿಕ್ಷಣ ಮತ್ತು ಸಂವಹನ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮಗಳು, ಕೇಂದ್ರ ನುರಿತ ತಜ್ಞರ ಜಲ ಜೀವನ್ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಲಜೀವನ್ ಮಿಷನ್ ಉದ್ದೇಶ ಗ್ರಾಮೀಣ ಭಾಗದ ಗ್ರಾಮಗಳಿಗೆ ಮನೆ ಮನೆಗೂ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸುವುದು. ಕೆಲವು ಪ್ರದೇಶಗಳಲ್ಲಿ ನೀರಿನ ಸೌಲಭ್ಯವನ್ನು ನೀಡಲು ಸಾಧ್ಯವಾಗದಿದ್ದಲ್ಲಿ ಅಲ್ಲಿನ ಸಮಸ್ಯೆಗಳನ್ನು ಅಧ್ಯಯನ ಮಾಡಿ ವಿಸ್ತೃತ ವರದಿಯನ್ನು ಸರ್ಕಾರಕ್ಕೆ ನೀಡಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಯುಕೇಶ್ ಕುಮಾರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಜಲಮೂಲಗಳಾದ ಕೆರೆಗಳು, ಕಲ್ಯಾಣಿಗಳನ್ನು ದುರಸ್ಥಿಗೊಳಿಸಿ ಪುನಃಚ್ಚೇತನ ಮಾಡಲಾಗಿದೆ. ನರೇಗಾ ಜಲಶಕ್ತಿ ಅಭಿಯಾನದಡಿಯಲ್ಲಿ ಕೆ.ಸಿ.ವ್ಯಾಲಿ ನೀರನ್ನು ಬರಗಾಲದಲ್ಲಿ ಜಿಲ್ಲೆಯ ಕೆರೆಗಳಿಗೆ ತುಂಬಿಸಿ ಕೆರೆಗಳು ಒಣಗದಂತೆ ನೀರಾವರಿ ಮೂಲಗಳನ್ನು ಸಂರಕ್ಷಿಸಲಾಯಿತು. ಇದುವರೆಗೂ ೬೮೮ ಕೊಳವೆ ಬಾವಿಗಳನ್ನು ಕೊರೆಸಿದ್ದು, ನೀರಿನ ವ್ಯವಸ್ಥೆಗೆ ಉಪಯೋಗವಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಎನ್.ಪಿ.ಎಂ.ಯು, ಎನ್.ಜೆ.ಜೆ.ಎಂ ಟೀಮ್ ಲಿಡರ್ ರಾಣಾ.ಆರ್.ಕೆ ಸಿಂಗ್, ಎನ್.ಐ.ಹೆಚ್. ವಿಜ್ಞಾನಿ ಡಾ|| ಆರ್.ಪಿ.ಪಾಂಡೆ, ಎನ್.ಐ.ಆರ್.ಡಿ ಮತ್ತು ಪಿ.ಆರ್ ಪ್ರೋಫೆಸರ್ ಹೆಡ್ ಡಾ|| ಶಿವರಾಮ್, ಬೆಂಗಳೂರು ವೃತ್ತದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸೂಪರಿಂಟೆಡೆಟ್ ಇಂಜಿನಿಯರ್ ಕೆ.ಟಿ.ನಾಗರಾಜ್, ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಮಂಜುನಾಥ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.