ಕೋಲಾರ,ಸಾರ್ವಜನಿಕರು, ಸರ್ಕಾರವು ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಪಡೆಯಲು ಗ್ರಾಮ ಒನ್ ಕೇಂದ್ರದ ಮೂಲಕ ಪ್ರಯೋಜನ ಪಡೆದುಕೊಳ್ಳುವುದರ ಕುರಿತು ಅಧಿಕಾರಿಗಳು ಅವರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದರು.
ಇಂದು ಜಿಲ್ಲಾ ಪಂಚಾಯತ್ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆಯಡಿ ಸಾರ್ವಜನಿಕರಿಗೆ ಗ್ರಾಮ ೧ ಕೇಂದ್ರಗಳಿ0ದ ಆರೋಗ್ಯ ಕರ್ನಾಟಕ ಗುರುತಿನ ಚೀಟಿ ಸೃಜನೆ ಮಾಡುವ ಬಗ್ಗೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾಮ ಒನ್ ಯೋಜನೆಯು ಮುಖ್ಯಮಂತ್ರಿಗಳ ಕನಸಿನ ಯೋಜನೆಯಾಗಿದ್ದು, ಗ್ರಾಮ ಒನ್ ಅಧಿಕಾರಿಗಳು ಹೆಚ್ಚು ಶ್ರಮ ವಹಿಸಿ ಕೆಲಸ ಮಾಡುವಂತೆ ತಿಳಿಸಿದರು.
ಜಿಲ್ಲೆಯ ಎಲ್ಲಾ ನಾಗರಿಕರಿಗೆ ಆಭಾ ಹೆಲ್ತ್ ಕಾರ್ಡ್ ಮಾಡಿಸುವ ಮತ್ತು ಆದರ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಬೇಕು, ಸಾರ್ವಜನಿಕರು ಆರೋಗ್ಯದ ಸೇವೆಗಳನ್ನು ಪಡೆಯಲು ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಎಬಿಹೆಚ್‌ಎ ಕಾರ್ಡ್ನ್ನು ಬಳಸಿಕೊಳ್ಳಬಹುದು. ಈ ಆಭಾ ಕಾರ್ಡ್ನ್ನು ಆಧಾರ್ ಕಾರ್ಡ್ ಸಂಖ್ಯೆ ಮತ್ತು ಅದಕ್ಕೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಬಳಸಿ ಪಡೆಯಬಹುದು ಎಂದು ತಿಳಿಸಿದರು.ಆಭಾ ಕಾರ್ಡ್ನ್ನು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ನೊಂದಿಗೆ ಜೋಡಿಸಲಾಗಿದ್ದು. ದೇಶದ ಎಲ್ಲಾ ನಾಗರಿಕರಿಗೂ ಲಭ್ಯವಾಗುವ ವಿಶಿಷ್ಟವಾದ ೧೪ ಅಂಕೆಗಳ ಆರೋಗ್ಯ ಐ.ಡಿ ಕಾರ್ಡ್ ಇದಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ಅವರು ಮಾತನಾಡಿ ಸಾರ್ವಜನಿಕರು ಒಂದು ಬಾರಿ ಆಭಾ ಕಾರ್ಡ್ನ್ನು ನೊಂದಾವಣಿ ಮಾಡಿಸಿದರೆ ನಿಮ್ಮ ಎಲ್ಲಾ ಆರೋಗ್ಯ ದಾಖಲೆಗಳನ್ನು ಯಾವುದೇ ಆರೋಗ್ಯ ಕೇಂದ್ರದಲ್ಲಿ ಪಡೆಯುವುದಕ್ಕೆ ಅವಕಾಶವಿರುತ್ತದೆ ಎಂದು ತಿಳಿಸಿದರು.
ಶಾಲಾ ಮತ್ತು ಕಾಲೇಜಿಗಲ್ಲಿ ಆಭಾ ಕಾಡ್ ಬಗ್ಗೆ ಹೆಚ್ಚು ಪ್ರಚಾರವಾಗಬೇಕು. ಗ್ರಾಮ ಒನ್ ಸಿಬ್ಬಂದಿಯವರು ಒಂದು ದಿನಕ್ಕೆ ಎಷ್ಟು ಕಾರ್ಡ್ಗಳನ್ನು ಮಾಡಬೇಕು ಎಂಬುವುದರ ಬಗ್ಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಿ, ಪ್ರತಿ ದಿನಕ್ಕೆ ೨೦೦೦ ಕಾರ್ಡ್ ಗಳನ್ನು ಸಾರ್ವಜನಿಕರಿಗೆ ಮಾಡಿ ಕೊಡಬೇಕು. ಬೇರೆ ಜಿಲ್ಲೆಗಳಿಗೆ ಯಾವ ರೀತಿ ಹೆಚ್ಚಿನ ಪ್ರಮಾಣದಲ್ಲಿ ಈ ಕಾರ್ಡನ್ನು ನೀಡುತ್ತಿದ್ದಾರೆ ಅದರಂತೆಯೇ ನಮ್ಮ ಜಿಲ್ಲೆಯಲ್ಲೂ ನೀಡಬೇಕು ಕೋಲಾರ ತಾಲ್ಲೂಕಿನಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು ಆಭಾ ಕಾರ್ಡ್ ಮಾಡಿ ಕೊಡಲು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಜಗದೀಶ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರಪ್ಪ, ಜಿಲ್ಲಾ ಶಾಲಾ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಕೃಷ್ಣ ಮೂರ್ತಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ಶೃತಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶಬಾನ ಅಜ್ಮಿ, ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಾಲ್ಲೂಕು ಆರೊಗ್ಯಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗ್ರಾಮ- ಒನ್ ಕೇಂದ್ರಗಳ ಸಿಬ್ಬಂದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.