ಕೋಲಾರ:- ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಪತ್ರಕರ್ತರು ಇತ್ತೀಚಿನ ದಿನಗಳಲ್ಲಿ, ರಾಜ್ಯಮಟ್ಟದ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗುತ್ತಿದ್ದಾರೆ. ಈ ವರ್ಷವೂ ಜಿಲ್ಲೆಯ ೩ ಜನ ಪತ್ರಕರ್ತರು ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಆಗಿದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಭಿಪ್ರಾಯಪಟ್ಟರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಾಧ್ಯಮ ಅಕಾಡೆಮಿ ಪುರಸ್ಕೃತರಾದ ಪಿ.ಟಿ.ಐ.ವರದಿಗಾರ ಬಿ.ಸುರೇಶ್, ದುನಿಯಾ ಪತ್ರಿಕೆ ಎನ್.ಮುನಿಯಪ್ಪ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪಿಟಿಐ ಸುರೇಶ್ ಎಂದೇ ಖ್ಯಾತಿ ಪಡೆದಿರುವ ಬಿ.ಸುರೇಶ್, ದುನಿಯಾ ಪತ್ರಿಕೆ ಸಂಪಾದಕ ಎನ್. ಮುನಿಯಪ್ಪ, ಟೈಮ್ಸ್ ಆಫ್ ಇಂಡಿಯಾ ಆಂಗ್ಲ ಪತ್ರಿಕೆಯ ಹಿರಿಯ ಪತ್ರಕರ್ತರಾದ ಕೆಜಿಎಫ್ನ ರಾಕೇಶ್ ರವರಿಗೆ ಈ ವರ್ಷ ಪ್ರಶಸ್ತಿ ಸಿಕ್ಕಿದ್ದು ಸಂತಸದ ವಿಷಯವಾಗಿದೆ. ಪ್ರಶಸ್ತಿ ಪುರಸ್ಕೃ ಮೂರೂ ಜನ ಅಭಿನಂದನಾರ್ಹರು ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ನಮ್ಮ ಜಿಲ್ಲೆಯ ಪತ್ರಕರ್ತರು ಶ್ರಮ ಜೀವಿಗಳು, ಪ್ರಶಸ್ತಿ ಪಡೆದ ಪ್ರತಿಯೊಬ್ಬರೂ ತಮ್ಮ ಶ್ರಮದಿಂದ ಪತ್ರಿಕಾ ರಂಗದಲ್ಲಿ ಮಾಡಿರುವ ಸಾಧನೆಯಿಂದ ಪ್ರಶಸ್ತಿಗೆ ಬಾಜನರಾಗಿದ್ದಾರೆ ಎಂದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು ಮಾತನಾಡಿ, ಹಿರಿಯ ಪತ್ರಕರ್ತರ ಹಾದಿಯಲ್ಲಿ ಯುವ ಪತ್ರಕರ್ತರು ಸಹ ಸಾಗುವುದರ ಜೊತೆಗೆ ಮುಂದಿನ ದಿನಗಳಲ್ಲಿ ಯುವ ಪತ್ರಕರ್ತರು ಪ್ರಶಸ್ತಿಗಳನ್ನು ಪಡೆಯಲಿ ಎಂದು ಆಶಿಸಿದರು.
ರಾಜ್ಯ ಸಂಘದ ಖಜಾಂಚಿ ಎಂ.ವಾಸುದೇವಹೊಳ್ಳ ಮಾತನಾಡಿ, ಕೋಲಾರ ಜಿಲ್ಲಾ ಪತ್ರಕರ್ತರ ಸಂಘದ ಖಜಾಂಚಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದೇನೆ. ಇದೀಗ ರಾಜ್ಯ ಸಂಘದಲ್ಲಿ ಖಜಾಂಚಿಯಾಗಿ ಕಾರ್ಯನಿರ್ವಹಿಸುವ ಸದಾವಕಾಶ ದೊರಕಿದೆ. ರಾಜ್ಯ ಸಂಘಕ್ಕೆ ಸರ್ಕಾರ ನೀಡಿರುವ ನಿವೇಶನದಲ್ಲಿ ರಾಜ್ಯ ಸಂಘದ ಅಧ್ಯಕ್ಷರ ಸೂಚನೆಯತೆ ಪತ್ರಕರ್ತರ ಸಂಘದ ಕಟ್ಟಡ ನಿರ್ಮಿಸಲು ಶ್ರಮಿಸುವುದಾಗಿ ಹೇಳಿದರು.
ಹಿರಿಯ ಪತ್ರಕರ್ತ ಎಸ್.ಚಂದ್ರಶೇಖರ್ ಮಾತನಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಡಿ.ವಿ.ಜಿ ಅವರಿಂದ ಸ್ಥಾಪನೆಗೊಂಡು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಜೊತೆಗೆ ರಾಜ್ಯದ ಪತ್ರಕರ್ತರ ಹಿತರಕ್ಷಣೆಗಾಗಿ ಸಂಘವು ನಿರಂತರವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಹಿರಿಯ ಪತ್ರಕರ್ತ ಕೋ.ನಾ.ಮಂಜುನಾಥ್ ಮಾತನಾಡಿ, ಬಡ ಕುಟುಂಬದಿoದ ಬಂದ ಮುನಿಯಪ್ಪ ಅವರು ಚಿತ್ರಕಲಾ ಶಿಕ್ಷಕರಾಗುವ ಆಸೆ ಇಟ್ಟುಕೊಂಡಿದ್ದರು. ವಿವಿಧ ಪತ್ರಿಕೆಗಳಲ್ಲಿ ಕೆಲಸ ಕಾರ್ಯನಿರ್ವಹಿಸಿ ಸ್ವಂತ ಪತ್ರಿಕೆಯನ್ನು ಮಾಡುವುದರ ಮೂಲಕ ಇದೀಗ ಮಾಧ್ಯಮ ಅಕಾಡೆಮಿ ಪ್ರಶಸಿಗೆ ಭಾಜನರಾಗಿರುವುದು, ಹಾಗೆಯೇ ಪಿ.ಟಿ.ಐ ಸುರೇಶ್ ಸಹ ತಮ್ಮದೇ ಶೈಲಿಯ ಬರವಣೆಗೆಯ ಮೂಲಕ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿ ಇಂದು ಪ್ರಶಸ್ತಿಗೆ ಭಾಜನರಾಗಿರುವುದು ಹರ್ಷ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಖಜಾಂಚಿ ಎಂ.ವಾಸುದೇವಹೊಳ್ಳ ಅವರನ್ನು ಸಹ ಗೌರವಿಸಲಾಯಿತು.
ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಸ್ವಾಗತಿಸಿ, ಖಜಾಂಚಿ ಎ.ಜಿ.ಸುರೇಶ್ಕುಮಾರ್ ನಿರೂಪಿಸಿ ವಂದಿಸಿದರು.
ಹಿರಿಯ ಪತ್ರಕರ್ತರಾದ ಕೋ.ನಾ.ಮಂಜುನಾಥ್, ಎನ್.ಮುನಿವೆಂಕಟೇಗೌಡ, ಸಿ.ಜಿ.ಮುರಳಿ, ಕೆ.ಬಿ.ಜಗದೀಶ್, ಕೆ.ಓಂಕಾರಮೂರ್ತಿ, ಬಿ.ಎಸ್.ಸ್ಕಂದಕುಮಾರ್, ಸಿ.ವಿ.ನಾಗರಾಜ್, ವಿ.ಈಶ್ವರ್, ಬೆಟ್ಟಪ್ಪ, ವೆಂಕಟೇಶಪ್ಪ, ಅಮರ್, ವಿ.ಪದ್ಮನಾಭ, ಎನ್.ಗಂಗಾಧರ್, ಎನ್.ಸತೀಶ್, ಎಲ್.ಕಿರಣ್, ಎಂ.ವಿನೋದ್, ಕೆ.ವಿಜಯಕುಮಾರ್, ಸಿ.ಅಮರೇಶ, ಮುಕ್ತಿಯಾರ್ ಅಹಮದ್, ಸರ್ವಜ್ಞಮೂರ್ತಿ, ನವೀದ್ಪಾಷ ಉಪಸ್ಥಿತರಿದ್ದರು.