ಕೋಲಾರ, ಕೋಲಾರ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕನೇ ದಿನವಾದ ಮಂಗಳವಾರ ೧೩ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು ೫೩ ನಾಮಪತ್ರಗಳು ಸಲ್ಲಿಕೆಯಾಗಿವೆ.
ಜಿಲ್ಲೆಯ ಮುಳಬಾಗಿಲು ವಿಧಾನಸಭಾ ಕ್ಷೇತ್ರದಿಂದ ಸಾರ್ವಜನಿಕ ಆದರ್ಶ ಸೇನಾ ಪಕ್ಷದ ಅಭ್ಯರ್ಥಿಯಾಗಿ ಕೆ.ವಿ ಮೂರ್ತಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ವಿ.ಮಾರಪ್ಪ ನಾಮಪತ್ರ ಸಲ್ಲಿಸಿದ್ದಾರೆ.
ಶ್ರೀನಿವಾಸಪುರ ವಿಧಾನಸಭಾ ಮತಕ್ಷೇತ್ರದಿಂದ ಇಂದು ಕಾಂಗ್ರೆಸ್ ಪಕ್ಷದಿಂದ ಕೆ.ಆರ್ ರಮೇಶಕುಮಾರ್ ಅವರು ೩ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿಯಾಗಿ ಜಿ ಕೆ ವೆಂಕಟಶಿವಾರೆಡ್ಡಿ ಮತ್ತು ಆಮ್ ಆದ್ಮಿ ಪಕ್ಷದಿಂದ ವೈ ವಿ ವೆಂಕಟಾಚಲರವರು ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ್ದಾರೆ.
ಕೋಲಾರ ವಿಧಾನಸಭಾ ಕ್ಷೇತ್ರದಿಂದ ಬಿಎಸ್‌ಪಿ ಪಕ್ಷದ ಅಭ್ಯರ್ಥಿಯಾಗಿ ಎಸ್.ಬಿ.ಸುರೇಶ್, ಹಾಗೂ ಪಕ್ಷೇತರ ಅಭ್ಯರ್ಥಿ ಕೆ ಎಸ್ ಆರಿಫ್ ನಾಮಪತ್ರ ಸಲ್ಲಿಸಿದ್ದಾರೆ.
ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಿಂದ ಇಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ.
ಮಾಲೂರು ವಿಧಾನಸಭಾ ಕ್ಷೇತ್ರದಿಂದ, ಪಕ್ಷೇತರ ಅಭ್ಯರ್ಥಿಯಾಗಿ ಕೆ ನಾಗೇಶ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ ವೈ ನಂಜೇಗೌಡ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ್ದಾರೆ.
ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಭ್ಯರ್ಥಿಯಾಗಿ ಎಸ್ ರಾಜೇಂದ್ರನ್, ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಡಾ. ಜೋಷ್ವಾ ಎಂ ಈ ರಾಜನ್ ನಾಮಪತ್ರ ಸಲ್ಲಿಸಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ ಇಂದು, ಶ್ರೀನಿವಾಸಪುರದಲ್ಲಿ ೫, ಮಾಲೂರಿನಲ್ಲಿ ೨, ಮುಳಬಾಗಿಲಿನಲ್ಲಿ ೨, ಕೆಜಿಎಫ್ ನಲ್ಲಿ ೨ ಹಾಗೂ ಕೋಲಾರದಲ್ಲಿ ೨ ಉಮೇದುವಾರಿಕೆಗಳು ಸೇರಿ ೧೩ ನಾಮಪತ್ರಿಕೆಗಳು ಸಲ್ಲಿಕೆಯಾಗಿವೆ. ಒಟ್ಟಾರೆ ಜಿಲ್ಲೆಯಲ್ಲಿ ೫೩ ಉಮೇದುವಾರಿಕೆಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಸಲು ಇನ್ನೂ ಎರಡು ದಿನಗಳು ಬಾಕಿ ಇದ್ದು, ಏಪ್ರಿಲ್ ೨೦ ಕೊನೆ ದಿನವಾಗಿದೆ. ಏಪ್ರಿಲ್ ೨೧ ಶುಕ್ರವಾರದಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ ೨೪ ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ಮೇ ೧೦ ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿರುತ್ತಾರೆ.