ಕೋಲಾರ, ಕೋಲಾರ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಎರಡನೇ ದಿನವಾದ ಶನಿವಾರ ೬ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು ೧೫ ನಾಮಪತ್ರಗಳು ಸಲ್ಲಿಕೆಯಾಗಿವೆ. ಸರ್ಕಾರಿ ರಜೆ ದಿನವಾದ ನೆನ್ನೆ ಆನ್ಲೈನ್ನಲ್ಲಿ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಿದ್ದಾಗ್ಯೂ ಯಾವುದೇ ನಾಮಪತ್ರ ಸ್ವೀಕೃತವಾಗಿರುವುದಿಲ್ಲ. ಜಿಲ್ಲೆಯ ಕೋಲಾರ, ಬಂಗಾರಪೇಟೆ, ಹಾಗೂ ಕೆ ಜಿ ಎಫ್ ವಿಧಾನಸಭಾ ಮತಕ್ಷೇತ್ರದಿಂದ ಇಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿರುವುದಿಲ್ಲ.
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಜಿ ಕೆ ವೆಂಕಟಶಿವಾರೆಡ್ಡಿ, ಬಿಜೆಪಿ ಅಭ್ಯರ್ಥಿಯಾಗಿ ಗುಂಜೂರು ಶ್ರೀನಿವಾಸರೆಡ್ಡಿ ಮತ್ತು ಕೆ ಆರ್ ಎಸ್ ಪಕ್ಷದ ಅಭ್ಯರ್ಥಿಯಾಗಿ ಜಿ ಕೆ ಆನಂದ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಮುಳಬಾಗಿಲು ವಿಧಾನಸಭಾ ಕ್ಷೇತ್ರದಿಂದ ಕೆ ಆರ್ ಎಸ್ ಅಭ್ಯರ್ಥಿಯಾಗಿ ಎಂ ಆನಂದಕುಮಾರ್ ರವರು ನಾಮಪತ್ರ ಸಲ್ಲಿಸಿದ್ದಾರೆ.
ಮಾಲೂರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಶ್ವೇತಾ ವಿಜಯಕುಮಾರ್, ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಮತ್ತೊಮ್ಮೆ ಹೆಚ್ ಎಂ ವಿಜಯಕುಮಾರ್ರವರು ನಾಮಪತ್ರ ಸಲ್ಲಿಸಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ ಇಂದಿನ ವರೆಗೆ ಬಂಗಾರಪೇಟೆಯಲ್ಲಿ ೨, ಶ್ರೀನಿವಾಸಪುರದಲ್ಲಿ ೩, ಮಾಲೂರಿನಲ್ಲಿ ೫, ಮುಳಬಾಗಿಲಿನಲ್ಲಿ ೧, ಕೆಜಿಎಫ್ ನಲ್ಲಿ ೧ ಹಾಗೂ ಕೋಲಾರದಲ್ಲಿ ೩ ಉಮೇದುವಾರಿಕೆಗಳು ಸಲ್ಲಿಕೆಯಾಗಿವೆ. ನಾಮಪತ್ರ ಸಲ್ಲಿಸಲು ಏಪ್ರಿಲ್ ೨೦ ಕೊನೆ ದಿನವಾಗಿದೆ. ಏಪ್ರಿಲ್ ೨೧ ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ ೨೪ ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ಮೇ ೧೦ ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿರುತ್ತಾರೆ.