ಕೋಲಾರಕ್ಕೆ ಜವಳಿ ಪಾರ್ಕ್ ಬರುವುದೇ ಸಂಸತ್ತಿನಲ್ಲಿ ಎಸ್.ಮುನಿಸ್ವಾಮಿ ಪ್ರಶ್ನೆ


ಕೋಲಾರ, ಕರ್ನಾಟಕ ರಾಜ್ಯದ ಅತಿ ದೊಡ್ಡ ರೇಷ್ಮೆ ಉತ್ಪಾದಕರ ಬೀಡಾಗಿರುವ ಕೋಲಾರಕ್ಕೆ ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಜವಳಿ ಪಾರ್ಕ್ನ್ನು ಸ್ಥಾಪಿಸಲು ಯೋಜಿಸಲಾಗಿದೆಯೇ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸದಸ್ಯರಾದ ಎಸ್.ಮುನಿಸ್ವಾಮಿ ಅವರು ಸಂಸತ್ತಿನಲ್ಲಿ ಪ್ರಶ್ನಿಸಿದರು.
ಇಂದು ಸಂಸತ್‌ನಲ್ಲಿ ಜವಳಿ ಖಾತೆ ರಾಜ್ಯ ಸಚಿವರಾದ ಶ್ರೀಮತಿ ಎಸ್.ದರ್ಶನಾ ಜರ್ದೋಶ್ ರವರನ್ನು ಚುಕ್ಕೆ ಗುರುತಿಲ್ಲದ ಪ್ರಶ್ನೆ ಮುಖಾಂತರ ಪ್ರಶ್ನಿಸಿದ ಸಂಸದರು ರಾಜ್ಯದ ಅತಿ ಹೆಚ್ಚು ರೇಷ್ಮೆ ಉತ್ಪಾದನಾ ಕೇಂದ್ರಗಳಲ್ಲಿ ಕೋಲಾರ ಸಹ ಒಂದಾಗಿದೆ. ಈ ಭಾಗದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಜವಳಿ ಪಾರ್ಕ್ನ್ನು ಸ್ಥಾಪಿಸುವುದರಿಂದ ರೇಷ್ಮೆಯನ್ನು ನಂಬಿರುವ ರೈತರಿಗೆ ವರದಾನವಾಗಲಿದೆ ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಠಿಸಬಹುದಾಗಿದೆ. ಇದರೊಂದಿಗೆ ಉದ್ಯಮದಾರರಿಗೂ ಸಹ ತಮ್ಮ ಜವಳಿ ಘಟಕಗಳನ್ನು ಸ್ಥಾಪಿಸಲು ವಿಫುಲ ಅವಕಾಶ ಲಭ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಇದಕ್ಕೆ ಉತ್ತರಿಸಿದ ಜವಳಿ ಖಾತೆ ರಾಜ್ಯ ಸಚಿವರು ಜವಳಿ ಪಾರ್ಕ್ ಅಥವಾ ಜವಳಿ ಕಾರಿಡಾರ್‌ನ್ನು ಸ್ಥಾಪಿಸಲು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಆರ್ಥಿಕ ನೆರವು ನೀಡುವ ಎಸ್.ಐ.ಟಿ.ಪಿ (ಕೈಗಾರಿಕಾ ಉದ್ಯಾನಗಳ ಯೋಜನೆ) ಯನ್ನು ೨೦೦೫ ರಿಂದಲೇ ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಈಗಾಗಲೇ ತಮಿಳುನಾಡಿನ ಕಾಂಚಿಪುರoನಲ್ಲಿ ಪೆರಾರಿಗ್ನಾಸ್ ಅಣ್ಣಾ ಹ್ಯಾಂಡ್‌ಲೂಮ್ ಸಿಲ್ಕ್ ಪಾರ್ಕ್ಗೆ ಅನುಮೋದನೆ ನೀಡಲಾಗಿದ್ದು, ಕರ್ನಾಟಕದಲ್ಲಿ ಯಾವುದೇ ಜವಳಿ ಪಾರ್ಕ್ ಅಥವಾ ಕಾರಿಡಾರ್ ನಿರ್ಮಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *