ಕೆರೆಗಳು ಹಳ್ಳಿಗಳ ಜೀವಾಳ ಅವುಗಳನ್ನು ರಕ್ಷಿಸುವುದು ನಾಗರಿಕರ ಕರ್ತವ್ಯ – ನಿರ್ಮಲ ಸೀತಾರಾಮನ್


ಕೆರೆಗಳು ಹಳ್ಳಿಗಳ ಜೀವಾಳ ಅವುಗಳನ್ನು ಸಂರಕ್ಷಿಸಿ ಕೊಳ್ಳಬೇಕಾದದ್ದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಕೇಂದ್ರ ಹಣಕಾಸು ಹಾಗೂ ಕಾರ್ಪೋರೇಟ್ ವ್ಯವಹಾರಗಳ ಸಚಿವರಾದ ನಿರ್ಮಲ ಸೀತಾರಾಮನ್ ಅವರು ತಿಳಿಸಿದರು.
ಇಂದು ಕೋಲಾರ ಜೆಲ್ಲೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಅಮೃತ ಸರೋವರ ಯೋಜನೆಯಡಿ ೭೫ ಕೆರೆಗಳನ್ನು ಅಭಿವೃದ್ಧಿ ಪಡಿಸಿರುವ ಕಾಮಗಾರಿ ಪರಿಶೀಲಿಸಲು ಆಗಮಿಸಿದ ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಬಂಗಾರಪೇಟೆ ತಾಲ್ಲೂಕಿನ ಚಿಕ್ಕ ಅಂಕಡಹಳ್ಳಿ ಕೆರೆ ಮತ್ತು ಕೆ.ಜಿ.ಎಫ್. ತಾಲ್ಲೂಕಿನ ಘಟ್ಟಕಾಮಧೇನಹಳ್ಳಿ ಗ್ರಾಮ ಪಂಚಾಯತಿಯ ಪೆದ್ದಪಲ್ಲಿ ಹಾಗೂ ಕೋಲಾರ ತಾಲ್ಲೂಕಿನ ಶೆಟ್ಟಿಕೊತ್ತನೂರು ಗ್ರಾಮಗಳಿಗೆ ಭೇಟಿ ನೀಡಿ ಕೆರೆಗಳ ಅಭಿವೃದ್ಧಿಯನ್ನು ವೀಕ್ಷಿಸಿ ಮಾತನಾಡಿದ ಅವರು ಕೆರೆಗಳ ಅಭಿವೃದ್ಧಿ ಕಾರ್ಯದಲ್ಲಿ ನಾಗರಿಕರ ಪಾಲು ಸರ್ಕಾರಕ್ಕಿಂತ ಹೆಚ್ಚಿರುತ್ತದೆ. ಸ್ಥಳೀಯ ನಾಗರಿಕರು ಅಭಿವೃದ್ಧಿಪಡಿಸಿರುವ ಕೆರೆಗಳನ್ನು ಸಂರಕ್ಷಿಸಿಕೊಳ್ಳಬೇಕು. ಕಾಲಕಾಲಕ್ಕೆ ಹೂಳು ತೆಗೆದು ಕೆರೆಯನ್ನು ಮಲಿನವಾಗದಂತೆ ನೋಡಿಕೊಳ್ಳಬೇಕು ಎಂದರು. ಕೆರೆಗಳು ಹಳ್ಳಿಗಳ ಜೀವಾಳ ಈ ಕೆರೆಗಳಲ್ಲಿ ಸಂಗ್ರಹವಾದ ನೀರಿನಿಂದ ಹಣ್ಣು ಮತ್ತು ತರಕಾರಿ ಬೆಳೆಯಲು ಹಾಗೂ ಊರಿನ ಉಪಯೋಗಕ್ಕಾಗಿ ಬಳಸಿಕೊಳ್ಳಬೇಕು. ಇದರಿಂದ ಸ್ಥಳೀಯರ ವೈಯಕ್ತಿಕ ಆದಾಯ ಕೂಡ ಹೆಚ್ಚುತ್ತದೆ. ಈ ಪ್ರದೇಶವು ಮೂರು ಪ್ರಮುಖ ಅಂತರರಾಜ್ಯ ನಗರಗಳನ್ನು ಸಂಪರ್ಕಿಸುವ ಪ್ರದೇಶವಾದ್ದರಿಂದ ಇಲ್ಲಿ ಬೆಳೆಯುವ ಬೆಳೆಗಳಿಗೆ ವಿಶೇಷ ಬೇಡಿಕೆ ಇರುತ್ತದೆ. ಹಾಗಾಗಿ ಬೇಡಿಕೆಯನ್ವಯ ಪೂರೈಕೆಯ ಉತ್ಪಾದನೆಗೆ ಹೆಚ್ಚಿನ ಗಮನಹರಿಸಬೇಕು. ಆಗ ಮಾತ್ರ ಹೆಚ್ಚಿನ ಇಳುವರಿ ತೆಗೆದು ಲಾಭ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕೋಲಾರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಜನ ಗುರುತಿಸುತ್ತಿದ್ದರು. ಪ್ರಧಾನಮಂತ್ರಿಯವರ ಕನಸಿನ ಯೋಜನೆಯಾದ ಅಮೃತ ಸರೋವರ ಯೋಜನೆಯಡಿ ಪ್ರಮುಖ ೭೫ ಕೆರೆಗಳನ್ನು ಹಂತಹAತವಾಗಿ ಪುನರ್ ಚೇತನಗೊಳಿಸಲಾಗುತ್ತಿದೆ ಎಂದು ಹೇಳಿದರು
ಕೆರೆ ತುಂಬಿ ಕೋಡಿ ಹರಿಯುವಾಗ ಸುತ್ತಮುತ್ತಲಿನ ಗ್ರಾಮಗಳಿಗೆ ಹಾನಿಯಾಗದಂತೆ ತಡೆಯುವ ಉದ್ದೇಶದಿಂದ ಒಂದು ಕೆರೆಗೂ ಹಾಗೂ ಮತ್ತೊಂದು ಕೆರೆಯ ನಡುವೆ ಕಾಲುವೆ ನಿರ್ಮಾಣ ಮಾಡಲಾಗಿದ್ದು ಈ ಕಾಲುವೆಗಳನ್ನು ಒತ್ತುವರಿಯಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವಜನಿಕರು ತಮ್ಮ ಊರಿಗೆ ಸಂಬAಧಪಟ್ಟ ಯಾವುದೇ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಸಂಸದರು ಹಾಗೂ ಸ್ಥಳೀಯ ಶಾಸಕರಿಗೆ ಮುಕ್ತಮನಸ್ಸಿನಿಂದ ಮನವರಿಕೆ ಮಾಡಿಕೊಟ್ಟು ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ, ಸ್ಥಳೀಯ ಮಾನವ ಶಕ್ತಿ ಬಳಸಿಕೊಂಡು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸಿಕೊಳ್ಳಲು ತಿಳಿಸಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತರಾದ ಎಲ್.ಕೆ.ಅತೀಕ್, ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ, ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *